“ಮಾರ” (ತೆಲುಗು)

ಇಡೀ ಸಿನೆಮಾ ಹುಡುಕಾಟ… !!!

ಆದರೆ ತಾವು ಏನನ್ನು ಹುಡುಕಾಡುತ್ತಿದ್ದೇವೆ ಅಂತ ಸ್ವತಃ ಅವರುಗಳಿಗೇ ಗೊತ್ತಿಲ್ಲ. ಯಾವುದೋ ಒಂದು ಜಾಡು ಹಿಡಿದು ಕತ್ತಲಲ್ಲಿ ತಡವರಿಸುತ್ತಾ ಏನೋ ಒಂದನ್ನು ಹುಡುಕುತ್ತಿದ್ದಾರೆ. ಅದು ಅವರಿಗೆ ದೊರಕಿತೇ….? ಇದೇ ಸಿನೆಮಾ.

ಸಿನೆಮಾದ ಆರಂಭದಲ್ಲಿ ಒಂದು ಕಾಮಿಕ್ ಕಥೆ ಬರುತ್ತದೆ. ಯಾಕೋ ಆ ಕಾಮಿಕ್ ಅನ್ನು ಬಹಳ ಎಳೆದಂತೆ ನಮಗೆ ಭಾಸವಾಗುತ್ತದೆ. ಆದರೆ ಆ ಕಥೆ ಕೇಳಿದ ಒಬ್ಬಳು ಪುಟ್ಟಿ ದೊಡ್ಡವಳಾದರೂ ಅದೇ ಗುಂಗಿನಲ್ಲಿಯೇ ಇರುತ್ತಾಳೆ. ಅಷ್ಟೇ ಅಲ್ಲ.. ಆ ಕಥೆಯ ನೆನಪಿನಲ್ಲಿಯೇ ಗೊತ್ತುಗುರಿ ಇಲ್ಲದೇ ಹುಡುಕಾಟಕ್ಕೆ ಹೊರಟೇ ಬಿಡುತ್ತಾಳೆ…. ಅದೂ ಒಬ್ಬೊಂಟಿಯಾಗಿ!!!!!

ಯಾವುದೋ ಊರಿನಲ್ಲಿ ಈಕೆ ಚಿಕ್ಕಂದಿನಲ್ಲಿ ಕೇಳಿದ್ದ ಕಾಮಿಕ್ ಕಥೆಯ ಚಿತ್ರಗಳು ಇರುವುದೇ ಒಂದು ನೆಪವಾಗುತ್ತದೆ. ಬಂದು ನೋಡಿದರೆ ಅಲ್ಲಿನ ಮನೆಗಳ ಮೇಲೆಲ್ಲ ಆ ಕಾಮಿಕ್ ಚಿತ್ರಗಳು ದೊಡ್ಡದಾಗಿ ಬಿಡಿಸಲ್ಪಟ್ಟಿರುತ್ತದೆ. ಅಲ್ಲಿಂದ ಅವಳ ಹುಡುಕಾಟ ಕಾಮಿಕ್ ಚಿತ್ರಗಳಿಂದ, ಆ ಚಿತ್ರ ಬರೆದ ಕಲೆಗಾರನನ್ನು ಹುಡುಕುವತ್ತ ಮುನ್ನಡೆಯುತ್ತದೆ.

ಆತನೋ ವಿಚಿತ್ರ ಮನಸ್ಥಿತಿಯವನು.

ಒಂದು ಕಡೆ ನೆಲೆ ನಿಲ್ಲದವನು ಆತ. ಸದಾ ಸುತ್ತುತ್ತಲೇ ಇರುತ್ತಾನೆ. ಈಕೆ ಅವನ ಮನೆಯಲ್ಲಿಯೇ ಉಳಿದುಕೊಳ್ಳುತ್ತಾಳೆ. ಏಕೆಂದರೆ ಅವನು ಮನೆಯಲ್ಲಿ‌ ಇರುವುದೇ ಇಲ್ಲವಲ್ಲ. ಆ ಕಲಾವಿದ ಸಹ ಯಾವುದೋ ಹುಡುಕಾಟದಲ್ಲಿರುತ್ತಾನೆ. ಆ ಹುಡುಕಾಟದ ನಡುವೆಯೇ ತನಗೆದುರಾಗುವ ಪ್ರತೀ ಹತಾಶ ಜೀವಗಳಲ್ಲಿ ಉತ್ಸಾಹ ತುಂಬಿ ಅವರುಗಳನ್ನು ಜೀವನ್ಮುಖಿಗಳನ್ನಾಗಿಸುತ್ತಿರುತ್ತಾನೆ. ಅವನ ಬಗ್ಗೆ ಅವರಿವರು ಹೇಳಿದ ಈ ಕಥೆಗಳನ್ನು ಕೇಳಿ ನಾಯಕಿ ಅವನತ್ತ ಆಕರ್ಷಿತಳಾಗುತ್ತಾಳೆ.

ಆದರೆ ಒಂದೆಡೆ ನಿಲ್ಲದೇ ಸದಾ ಸುತ್ತುವ ನಾಯಕನಿಗೆ ಪ್ರೀತಿ ಹುಟ್ಟಲು ಸಾಧ್ಯವೇ? ಹುಟ್ಟಿದರೂ ಆತ ನಿಭಾಯಿಸಲು ಸಾಧ್ಯವೇ? ಅಂತ ನಮಗೆ ಅನುಮಾನ ಹುಟ್ಟುವಷ್ಟರಲ್ಲಿ ನಾಯಕ-ನಾಯಕಿಯ ಮಿಲನವಾಗುತ್ತದೆ. ಆ ಮೂಲಕ ದಶಕಗಳಿಂದ ದೂರವಾಗಿದ್ದ ಇಬ್ಬರು ಪ್ರೇಮಿಗಳು ತಮ್ಮ ಇಳಿವಯಸ್ಸಿನಲ್ಲಿ ಒಂದಾಗುತ್ತಾರೆ.

ಅರ್ಥ ಆಗಲಿಲ್ವಾ? ಅರ್ಥ ಆಗುವುದೂ ಇಲ್ಲ. ಅದಕ್ಕಾಗಿ ಸಿನೆಮಾ ನೋಡಲೇಬೇಕು.

ನಾಯಕಿ ಹುಡುಕಿದ್ದು ನಾಯಕನನ್ನು. ಆದರೆ ಆ ಮೂಲಕ ಒಂದಾದದ್ದು ಮತ್ಯಾರೋ ಪ್ರೇಮಿಗಳು. ಆ ಪ್ರೇಮಿಗಳನ್ನು ಒಂದು ಮಾಡಲು ಸದಾ ಅಲೆಯುತ್ತಿದ್ದವನು ನಾಯಕ. ಒಟ್ಟಿನಲ್ಲಿ ಇವರ ಹುಡುಕಾಟ ಮುಗಿದು ದಿ ಹ್ಯಾಪಿ ಎಂಡಿಂಗ್ ಆಗುತ್ತದೆ. ಆದರೆ ಕಥೆ ಮನಸ್ಸು ಮುಟ್ಟುತ್ತದೆಯಾ?

ಇಲ್ಲ ಎಂದೇ ಹೇಳಬೇಕಾಗುತ್ತದೆ.

ಕಥೆಯೊಳಗೆ ತಾಧ್ಯಾತ್ಮತೆ ಆವರಿಸುವುದೇ ಇಲ್ಲ. ನಾಯಕಿ ತನಗೆ ಸಿಕ್ಕ ಅವಕಾಶದಲ್ಲಿ ಕೇವಲ ತಾನು ಚಂದ ಕಾಣುವುದರ ಬಗ್ಗೆ ಮತ್ತು ತನ್ನ ಡ್ರೆಸ್ ಬಗ್ಗೆ ಒತ್ತು ಕೊಟ್ಟಿದ್ದಾರೆ ಹೊರತೂ ಆ ಸಿನೆಮಾದ ಪಾತ್ರವಾಗಿ ಅವರು ತೊಡಗಿಸಿಕೊಂಡಂತೆ ಕಾಣುವುದಿಲ್ಲ. ಇನ್ನು ನಾಯಕ ಯಾಕಾಗಿ ಅಲೆಯುತ್ತಿದ್ದ ಅಂತ ಇರುವ ವಿವರಣೆ ಅಷ್ಟು ತೃಪ್ತಿಕರವಾಗಿಲ್ಲ.

ನಾಯಕಿಗೆ ತನ್ನ ಹುಡುಕಾಟದಲ್ಲಿ ಆ ಹಳೆಯ ಪ್ರೇಮಿಗಳು ಒಂದಾಗುವಂತಹಾ ಸುಳಿವುಗಳು ಮಾತ್ರವೇ ದೊರೆಯುತ್ತಿದ್ದುದು ಕಥೆಯ ಮತ್ತೊಂದು ವೀಕ್ ಪಾಯಿಂಟ್. ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಕಡೆಗೆ ಒಂದಾದಾಗ ಪವಾಡ ಎನಿಸುವುದಿಲ್ಲ. ವಿಚಿತ್ರ ಎನಿಸುತ್ತದೆ.

ಇದು ಹೊಸ ರೀತಿಯ ನಿರೂಪಣೆ ಇರಬಹುದು. ಎಲ್ಲಾ ಸೂತ್ರಗಳನ್ನು ಗಾಳಿಗೆ ತೂರಿದ ಹೊಸ ಪ್ರಕಾರ ಇರಬಹುದು. ಆದರೆ ನಿರೂಪಣೆಯಲ್ಲಿ ಬಹಳಷ್ಟು ಬದಲಾವಣೆ ಬೇಕಿದೆ. ಹಲವು ದೃಶ್ಯಗಳು ಬೇಕಂತಲೇ ಎಳೆದಂತಿದೆ. ಪರಸ್ಪರರ ಬಗ್ಗೆ ಏನೂ ಗೊತ್ತಿಲ್ಲದ ನಾಯಕ-ನಾಯಕಿ ಕಡೆಗೆ ತಬ್ಬಿಕೊಳ್ಳುವುದು ಅಸಹಜ ಎನಿಸುತ್ತದೆ. ಈಗಲೂ ಪ್ರೀತಿ ಅನ್ನೋದು ಕಣ್ಣಿನಿಂದ ಹುಟ್ಟುತ್ತದೆ ಎನ್ನುವ ಮಾತು ನಂಬುವವರು ಇದ್ದಾರಾ??

ಮಾಧವನ್, ಶ್ರದ್ಧಾ ಶ್ರೀನಾಥ್ ಇದ್ದರೂ ಕಡೆವರೆಗೂ ಏನೋ ಕೊರತೆ ಇದೆ ಅಂತ ಅನಿಸುತ್ತಲೇ ಇತ್ತು. ಕೊನೆಗದು ಅರ್ಥವಾಯ್ತು.

ಕೊರತೆ ಇದ್ದದ್ದು ಆಪ್ತತೆಯದ್ದು!!

(ಸಿನೆಮಾ ಅಮೆಜಾನ್ ಪ್ರೈಮಿನಲ್ಲಿ್ದೆ)

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply