ನಮ್ಮ ಮುತ್ತಣ್ಣ (ಹೆಸರು ಎಷ್ಟು ಫೆಮಿಲಿಯರ್ ಅಲ್ವಾ?) ಕನ್ನಡ ಮಾಧ್ಯಮದಲ್ಲಿ ನಾಲ್ಕನೇ ಕ್ಲಾಸು ಓದಿದ್ದ (ಇದೂ ನಮಗೆ ತಿಳಿದ ವಿಷಯವೇ!). ಸಿಮಿಲಾರಿಟಿ ಅಲ್ಲಿಗೆ ಸಾಕು. ಸುಮಾರು ಉದ್ದದ ಜಡೆಯನ್ನು ಹೊಂದಿರುತ್ತಾನೆ ಮುತ್ತಣ್ಣ.
ಮುತ್ತಣ್ಣ(ರಾಜ್‍ಕುಮಾರ್) ಹಳ್ಳಿಯಲ್ಲಿ ಒಬ್ಬ ಹುಡುಗಿಯನ್ನು ನಾಗಪ್ಪನಿಂದ (ಆಗ ಬಹಳ ಖ್ಯಾತ(!) ವಿಲನ್) ಬಲಾತ್ಕಾರಕ್ಕೆ ಒಳಪಡುತ್ತಿದ್ದಾಗ ಆಕೆಯನ್ನು ಕಾಪಾಡಿ ನಾಗಪ್ಪನನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ. ಅವನು ಮುತ್ತಣ್ಣನ ಮೇಲೆ ಸೇಡಿಗೆ ಕಾದಿರುತ್ತಾನೆ. ಊರ ಪಟೇಲರ ಮಗ ಸಾಲ ತೀರಿಸಲು ವೆಂಕಟರಮಣನ ಗುಡಿಯ ಹುಂಡಿಯಿಂದ ಹಣ ಕದ್ದಾಗ ಅವನನ್ನು ತಡೆದು ಪ್ರಶ್ನಿಸಿದಾಗ ಅವನು ಇವನ ಕೈಗೆ ಹಣ ಕೊಟ್ಟು, ತನ್ನನ್ನು ಕಾಪಾಡೆಂದು ಬೇಡುತ್ತಾನೆ. ನಾಗಪ್ಪನ ಕೈಗೆ ‘ಮಾಲಿನ’ ಸಮೇತ ಸಿಕ್ಕಿಬಿದ್ದ ಮುತ್ತಣ್ಣನಿಗೆ ಬಹಿಷ್ಕಾರ ಹಾಕುತ್ತಾರೆ. ಅವನು ಬೆಂಗಳೂರಿಗೆ ಹೋಗಿಬಿಡುತ್ತಾನೆ. ಇತ್ತ ಪಟೇಲರ ಮಗ ಹಾವು ಕಚ್ಚಿ ಸತ್ತು (ದೇವರ ಹುಂಡಿ ಕದ್ದರೆ ದೇವರು ಸುಮ್ಮನಿರುವನೇನು?) ಸಾಯೋ ಮುಂಚೆ ತನ್ನಪ್ಪನಿಗೆ ಮುತ್ತಣ್ಣ ಒಳ್ಳೆಯವನೆಂದು ಹೇಳಿಬಿಡುತ್ತಾನೆ.
ಸೀನ್ ಛೇಂಜ್. ಕಷ್ಟಪಟ್ಟು ಲಾರಿಯೊಂದರಲ್ಲಿ ಬೆಂಗಳೂರಿಗೆ ಬಂದ ಮುತ್ತಣ್ಣ ಹೊಟೇಲ್‍ನಲ್ಲಿ ಬಿಟ್ಟಿ ಊಟ ಮಾಡಿ ಹಿಟ್ಟು ರುಬ್ಬುತ್ತಾನೆ. ಅಲ್ಲಿಗೆ ಬಂದ ರಂಗ (ದ್ವಾರಕೀಶ್) ಚೆನ್ನಾಗಿ ತಿಂದು ಕೊನೆಯ ಐಟಂನಲ್ಲಿ ಜಿರಲೆ ಹಾಕಿ ಹಣ ಕೊಡದೇ ತಪ್ಪಿಸಿಕೊಳ್ಳುತ್ತಾನೆ. ದೋಸೆ ಹಿಟ್ಟಿನಲ್ಲಿ ಬಿದ್ದಿದ್ದ ಇಲಿಯನ್ನು ಮುತ್ತಣ್ಣ ತೋರಿಸಿದಾಗ ಅವನನ್ನು ಓಡಿಸುತ್ತಾನೆ ಹೊಟೇಲ್ ಮಾಲೀಕ.
ಹೊರಗೆ ರಂಗ, ಮುತ್ತಣ್ಣನ ಭೇಟಿ. ಅಲ್ಲಿಂದ ಶುರು. ಮುತ್ತಣ್ಣನ ಜುಟ್ಟನ್ನು ಕತ್ತರಿಸಿ ಮಾರಿ ಹೊಟ್ಟೆ ತುಂಬಿಕೊಳ್ಳುತ್ತಾನೆ ರಂಗ.
ಮಾಡ್ರನ್ ಆದ ಮುತ್ತಣ್ಣನ ಮಾತು ಸುಧಾರಿಸುತ್ತದೆ. ಜನಸೇವೆಯನ್ನು ಸಣ್ಣ ರೀತಿಯಲ್ಲಿ ಮಾಡುತ್ತಿರುತ್ತಾನೆ. ಒಂದು ದಿನ ಎಲೆಕ್ಷನ್‍ನಲ್ಲಿ ಕೌನ್ಸಿಲರ್ ಆಗುತ್ತಾನೆ. ನಂತರ ಮೇಯರ್ ಆಗಿ ಹಳ್ಳಿಗೆ ಬಂದಾಗ ಆನೆಯ ಮೇಲೆ ಮೆರವಣಿಗೆ ಮಾಡುತ್ತಾರೆ ಹಳ್ಳಿಯವರು.
ಗೀತಾ (ಬೆಡಗಿನ ಭಾರತಿ) ಮೊದಲು ಮುತ್ತಣ್ಣನನ್ನು ರೇಗಿಸಿದರೂ ನಂತರ ಅವನಲ್ಲಿ ಪ್ರೇಮ ಹೊಂದುತ್ತಾಳೆ. ಶಾಂತ (ಬಿ.ವಿ.ರಾಧಾ) ರಾಜಪ್ಪನಿಂದ(ಎಂ.ಪಿ. ಶಂಕರ್) ಮೋಸ ಹೋಗಿ ಮಗು ಪಡೆದಿರುತ್ತಾಳೆ. ರಾಜಪ್ಪ ಸ್ಮಗ್ಲರ್. ಗೀತಾಳ ಅಣ್ಣ (ತೂಗುದೀಪ ಶ್ರೀನಿವಾಸ್) ರಾಜಪ್ಪ ಒಳ್ಳೆಯವನೆಂದುಕೊಂಡು ಮನೆಗೆ ಕರೆತಂದಿರುತ್ತಾನೆ. ಬಾಲಕೃಷ್ಣ ಇವರ ಸೆಕ್ರೆಟರಿ. ಅವನು ಇವರಿಗೆ ಮೋಸ ಮಾಡಿ ರಾಜಪ್ಪನ ಕಡೆ ಸೇರುತ್ತಾನೆ.
ಹಳ್ಳಿಯಾದರೇನು ಶಿವಾ (ಪಿಬಿಎಸ್), ಹಾವಿಗೆ ಮುಂಗುಸಿಯುಂಟು (ಪಿಬಿಎಸ್ ಎಲ್ ಆರ್ ಈಶ್ವರಿ, ದ್ವಾರಕೀಶ್), ಅಯ್ಯಯ್ಯಯ್ಯೋ ಹಳ್ಳಿ ಮುಕ್ಕ (ಪಿಬಿಎಸ್, ಎಲ್‍ಆರ್ ಈಶ್ವರಿ) ಒಂದೇ ನಾಡು ಒಂದೇ ಕುಲವು (ಪಿಬಿಎಸ್, ಎಸ್‍ಜಾನಕಿ) ಹಲ್ಲೊ ಹಲ್ಲೋ (ಎಲ್ ಆರ್ ಈಶ್ವರಿ) ಮೇಯರ್ ಮುತ್ತಣ್ಣ (ಖೋರಸ್ ಹಾಡು).
ರಾಜ್‍ಕುಮಾರ್ ಎಲ್ಲ ರೀತಿಯ ಎಮೋಷನ್ನುಗಳನ್ನು ಪ್ರದರ್ಶಿಸುವುದರಲ್ಲಿ ನಟ ಸಾರ್ವಭೌಮ.