ಕಳೆದ ಭಾನುವಾರ ದೇವನಹಳ್ಳಿ ತಾಲೂಕಿನ ಹಾರೋಹಳ್ಳಿಯಲ್ಲಿ ಯೋಧ ಜಾತ್ರೆಯನ್ನು ಏರ್ಪಡಿಸಲಾಗಿತ್ತು
ಕಳೆದ ಭಾನುವಾರ ಏಪ್ರಿಲ್ ನಾಲ್ಕರಂದು ನಿವೃತ್ತ ಯೋಧ ಜಯರಾಮ್ ರವರ 48ನೇ ಜನ್ಮದಿನ. ಅದೇ ದಿನ ಸುಮಾರು 35 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿ ಊರಿಗೆ ಬಂದ ರಾಜಗೋಪಾಲ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ರಾಜಗೋಪಾಲ್ ಅವರನ್ನು ಬರಮಾಡಿಕೊಂಡು ತಾಳೆ ಮದ್ದಳೆ ಗಳೊಂದಿಗೆ ಭವ್ಯ ಸ್ವಾಗತವನ್ನು ಕೋರಲಾಯಿತು. ರಾಜಗೋಪಾಲ್ ಅವರನ್ನು ಬರಮಾಡಿಕೊಳ್ಳಲು ಬೆಂಗಳೂರು ಚಿಕ್ಕಬಳ್ಳಾಪುರ ಹೈವೇ ಬಳಿ ತಾಲೂಕಿನ ದಂಡಾಧಿಕಾರಿಗಳ ಸಮೇತ ಯೋಧರ ಅಭಿಮಾನಿಗಳು, ಅವರ ಕುಟುಂಬದವರು ಟೀಮ್ ಯೋಧನಮನ ಸದಸ್ಯರು ತಯಾರಾಗಿದ್ದರು. ತಾಲೂಕಿನ ದಂಡಾಧಿಕಾರಿಗಳು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಆಗಮಿಸಿದ ಯೋಧರಿಗೆ ಹೂವಿನ ಹಾರವನ್ನು ಹಾಕಿ ಅವರ ಮೇಲೆ ಪುಷ್ಪವೃಷ್ಟಿ ಯನ್ನು ಸುರಿಸಿ ಸನ್ಮಾನಿಸಲಾಯಿತು. ಬಳಿಕ ಭಾರತದ ರಾಷ್ಟ್ರಧ್ವಜ ಹೊಂದಿದ ತೆರೆದ ಜೀಪಿನಲ್ಲಿ ಅವರನ್ನು ಭವ್ಯ ಮೆರವಣಿಗೆ ರೀತಿಯಲ್ಲಿ ಕರೆದೊಯ್ಯಲಾಯಿತು. ಯೋಧರ ಮೇಲೆ ಪುಷ್ಪವೃಷ್ಟಿಯಾಯಿತು. ದೇಶಭಕ್ತಿಯ ಘೋಷಣೆಗಳು ಮುಗಿಲು ಮುಟ್ಟಿದವು ಸುಮಾರು 40 ಕ್ಕೂ ಹೆಚ್ಚಿನ ಬೈಕುಗಳು ಮುಂದೆ ಸಾಗುತ್ತಿದ್ದಂತೆ ಅದರ ಹಿಂದೆ ತೆರೆದ ಜೀಪಿನಲ್ಲಿ ರಾಜಗೋಪಾಲ್ ಭವ್ಯ ಮೆರವಣಿಗೆಯಲ್ಲಿ ಸಾಗಿದರು. ಈ ರೀತಿ ಮೆರವಣಿಗೆಯಲ್ಲಿ ಸಾಗಿದ ರಾಜಗೋಪಾಲ್ ಅವರು ತಮ್ಮ ಹಳ್ಳಿಗೆ ಕಾಲಿಟ್ಟೊಡನೆ ನೆಲವನ್ನು ಮುಟ್ಟಿ ನಮಸ್ಕಾರ ಮಾಡಿದರು. ಗ್ರಾಮದ ಯುವಕರು ಪಟಾಕಿಗಳನ್ನು ಸಿಡಿಸಿ, ಹೂವನ್ನು ಚೆಲ್ಲಿ ಇವರನ್ನು ಸ್ವಾಗತಿಸಿದರು. ರಾಜಗೋಪಾಲ್ ಅವರಿಗೆ ದೃಷ್ಟಿ ತೆಗೆದು ಅವರನ್ನು ಹೆಗಲ ಮೇಲೆ ಹೊತ್ತು ಅವರ ಊರೆಲ್ಲ ಸುತ್ತಿಸಿ ಮೆರವಣಿಗೆ ಮಾಡಿಸಿದರು.
ಊರಿನ ಶಾಲೆಯಲ್ಲಿ ಏರ್ಪಡಿಸಿದ್ದ ಭವ್ಯ ಸಭಾಂಗಣದಲ್ಲಿ ಯೋಧರನ್ನು ಬರಮಾಡಿಕೊಂಡು ಸನ್ಮಾನಿಸಲಾಯಿತು. ದೇವನಹಳ್ಳಿ ತಾಲೂಕಿನ ಶಾಸಕರಾದ ಶ್ರೀ ನಿಸರ್ಗ ನಾರಾಯಣಸ್ವಾಮಿ ಅವರು ಅವರು ಸಕಾಲಕ್ಕೆ ಬಂದು ವೇದಿಕೆಯನ್ನು ಅಲಂಕರಿಸಿದರು. ಹೊಸದಾಗಿ ಐವರು ಡಾಕ್ಟರೇಟ್ ಪಡೆದ ಆಹ್ವಾನಿತರು ಕೂಡ ಜೊತೆಯಲ್ಲಿದ್ದರು. ಟೀಮ್ ಯೋಧ ನಮನದ ಹಿರಿಯ ನಿವೃತ್ತ ಯೋಧ ಜಯರಾಮ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ರಾಜಗೋಪಾಲ್ ರವರ ಮೂವತ್ತೈದು ವರ್ಷದ ಭಾರತಾಂಬೆಯ ಸೇವೆ ಬಗ್ಗೆ ಸಭೆಯಲಿದ್ದವರಿಗೆ ಪರಿಚಯ ಮಾಡಿಸಿದರು. ಶಾಸಕರಾದ ಶ್ರೀ ನಿಸರ್ಗ ನಾರಾಯಣಸ್ವಾಮಿಯವರು ಯೋಧರ ಬಗ್ಗೆ ಪ್ರೀತಿ ಹಾಗು ಗೌರವಪೂರ್ವಕ ಮಾತುಗಳನ್ನಾಡಿದರು.
ಶ್ರೀ ರಾಜಗೋಪಾಲ್ ಅವರು 1986 ರಲ್ಲಿ ಗಡಿ ಭದ್ರತಾ ಪಡೆಗೆ ಸೇರಿರುತ್ತಾರೆ. ಸುಮಾರು 10 ವರ್ಷಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅದಾದಮೇಲೆ ಪಾಕಿಸ್ತಾನದ ಗಡಿ ಭಾಗಗಳಾದ ಹರಿಯಾಣ, ಪಂಜಾಬ್, ರಾಜಸ್ಥಾನ ವಿಭಾಗಗಳಲ್ಲಿ ಹಾಗೂ ಒಂದು ವರ್ಷ ಭಾರತದ ಪೂರ್ವಭಾಗಳಾದ ಅಸ್ಸಾಂ ಮೇಘಾಲಯ ಮಣಿಪುರ ತ್ರಿಪುರ ನಾಗಾಲ್ಯಾಂಡ್ ಗಡಿಭಾಗದಲ್ಲಿ ದೇಶದ ಗಡಿಯನ್ನು ಕಾಯುವ ಸೇವೆಯನ್ನು ಮಾಡಿರುತ್ತಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಕಾರ್ಗಿಲ್ ಕದನದಲ್ಲಿ ಇವರು ತುಂಬಾ ಮಹತ್ವದ ಸೇವೆಯನ್ನು ಸಲ್ಲಿಸಿದ್ದಾರೆ. ನಂತರ ಸೈನ್ಯಕ್ಕೆ ಹೊಸದಾಗಿ ಸೇರಿರುವವರಿಗೆ ಬಾಂಬ್ ನಿಷ್ಕ್ರಿಯಗೊಳಿಸುವ ಬಗ್ಗೆ ವಿಶೇಷ ತರಬೇತಿ ಕೂಡ ನೀಡಿದ್ದಾರೆ. ಇವರಿಂದ ತರಬೇತಿ ಪಡೆದ ಅಸಂಖ್ಯಾತ ಯೋಧರು ಇಂದಿಗೂ ನಿರಂತರವಾಗಿ ಭಾರತಾಂಬೆಯ ನೆಲವನ್ನು ಕಾಯುವ ಪುಣ್ಯ ಕೆಲಸವನ್ನು ಮಾಡುತ್ತಿದ್ದಾರೆ.
ಇಂತಹ ಒಬ್ಬ ಮಹಾನ್ ಯೋಧನನ್ನು ಸನ್ಮಾನಿಸುವುದು ಪುಣ್ಯ ಕಾರ್ಯವೇ ಸರಿ. ಅಪರಾಹ್ನ ಒಂದರಿಂದ ನಾಲ್ಕರವರೆಗೆ ನಡೆದ ಈ ಪುಣ್ಯದ ಕೆಲಸವನ್ನು ಟೀಮ್ ಯೋಧ ನಮನದ ಎಲ್ಲಾ ಸದಸ್ಯರೂ ಎಲ್ಲಿಯೂ ಕೊಂಚವೂ ಲೋಪವಾಗದಂತೆ, ಬಹಳ ಶಿಸ್ತುಬದ್ಧವಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟದ್ದು ಶ್ಲಾಘನೀಯ. ಇಡೀ ಕಾರ್ಯಕ್ರಮಕ್ಕೆ ಯೋಧ ಜಾತ್ರೆ ಎಂಬ ಹೆಸರು ಕೊಟ್ಟಿದ್ದಂತೂ ಅದ್ಭುತ. ನಿಜಕ್ಕೂ ಅದೊಂದು ಯೋಧ ಜಾತ್ರೆಯೇ ಆಗಿತ್ತು. TV9, ಪವರ್ TV, BTV, ಸೇರಿದಂತೆ ಅನೇಕ ಮಾಧ್ಯಮಮಿತ್ರರು ಕಾರ್ಯಕ್ರದಲ್ಲಿ ಉಪಸ್ಥಿತರಿದ್ದರು. ಇಡೀ ಕಾರ್ಯಕ್ರಮವನ್ನು ನಡೆಸಲು, ನೇರವಾಗಿ ಅಥವಾ ಪರೋಕ್ಷವಾಗಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಟೀಮ್ ಯೋಧ ನಮನ ದ ಪ್ರಣಾಮಗಳು.ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ನಡೆಸುವ ಶಕ್ತಿ ಮತ್ತು ಸಹಕಾರ ನಮಗೆ ನೀಡಿರೆಂದು ನಿಮ್ಮೆಲ್ಲರನ್ನೂ ಕೋರಿಕೊಳ್ಳುತ್ತೇವೆ.
ಜೈಹಿಂದ್
– ಟೀಮ್ ಯೋಧ ನಮನ