ರಿಯಲ್ ಸ್ಟಂಟ್ ಮಾಸ್ಟರ್ ನಟ ಜಾಕಿಚಾನ್

( ಮುಂದುವರೆದಭಾಗ )

೨೦೦೫ ನೇ ಇಸ್ವಿಯವರೆಗೂ ಈ ಸರಣಿಯು ಪ್ರಸಾರವಾಯಿತು. ಶಾಂಘೈ ನೂನ್( ೨೦೦೦), ರಶ್ ಹವರ್ ೨ (೨೦೦೧) ಮತ್ತು ಶಾಂಘೈ ನೈಟ್ಸ್ ಚಿತ್ರಗಳ ಯಶಸ್ಸಿನ ಪರಂಪರೆ ಮುಂದುವರೆದಿದ್ದರೂ ಚಿತ್ರೋದ್ಯಮದಿಂದ ಹಿಂದೆ ಸರಿಯುವ ಬದಲು ಪ್ರತಿ ಸ್ಪಂದನೆ ಯಾಗಿ ಎಂಪರರ್ ಮಲ್ಟಿಮೀಡಿಯಾ ಗ್ರುಪ್ ಸಹಯೋಗದೊಂದಿಗೆ ಜಾಕಿ ಚಾನ್ ಎಂಪರರ್ ಮೂವೀಸ್ ಲಿಮಿಟೆಡ್ ಎಂಬ ನಿರ್ಮಾಣದ ಕಂಪನಿಯನ್ನು ಆರಂಭಿಸಿದರು. ಇವರ ನಿರ್ಮಾಣ ಸಂಸ್ಥೆಯಲ್ಲಿ ನ್ಯೂ ಪೋಲೀಸ್ ಸ್ಟೋರಿ (೨೦೦೪), ದಿ.ಮಿಥ್(೨೦೦೫) ಮತ್ತು ರಾಬಿನ್ ಹುಡ್ (೨೦೦೬) ಚಿತ್ರಗಳು ನಿರ್ಮಾಣವಾಗಿವೆ.

ಅಗಸ್ಟ್ ೨೦೦೭ ನೇ ಇಸ್ವಿಯಲ್ಲಿ ಬಿಡುಗಡೆಯಾದ ರಶ್ ಹವರ್ ೩ ಚಿತ್ರವು ೨೫೫ ದಶ ಲಕ್ಷ ಡಾಲರ್ ಹಣವನ್ನು ಗಳಿಸಿತು. ಆದರೆ ಇದೇ ಚಿತ್ರವು ಹಾಂಕಾಂಗ್ ನಲ್ಲಿ ಆರಂಭಿಕ ಹಂತದಲ್ಲಿ ಕೇವಲ ೩.೫ ದಶಲಕ್ಷ ಡಾಲರ್ ಹಣವನ್ನು ಗಳಿಸುವ ಮೂಲಕ ಕಳಪೆ ನಿರ್ವಹಣೆ ತೋರಿತು. ಇದೇ ಸಂದರ್ಭದಲ್ಲಿ ೨೦೦೮ ರ ಜುಲೈ ನಲ್ಲಿ ದಿ.ಡಿಸೈಬಲ್( ಚೀನಿ ಭಾಷೆಯಲ್ಲಿ ಡ್ರ್ಯಾಗನ್ ಅನುಯಾಯಿ ಎನ್ನುವರು) ಎಂಬ ಶೀರ್ಷಿಕೆ ಅಡಿಯಲ್ಲಿ ರಿಯಾಲಿಟಿ ಶೋ ಆರಂಭಿಸಿದರು. ಈ ರಿಯಾಲಿಟಿ ಮುಖ್ಯ ಉದ್ದೇಶ ಅಭಿನಯದಲ್ಲಿ, ಕದನ ಕಲೆಗಳಲ್ಲಿ ಪರಿಣಿತಿಯನ್ನು ಪಡೆದ ಹೊಸ ತಾರೆಯನ್ನು ಹುಡುಕುವ ಉದ್ದೇಶವನ್ನು ಹೊಂದಿತ್ತು. ಈ ರಿಯಾಲಿಟಿ ಶೋ ನಲ್ಲಿ ಎಲ್ಲ ಸ್ಪರ್ಧೆಗಳಲ್ಲಿ ಜಯಿಸಿ ಜಾಕ ಟು ಎಂಬ ಯುವಕ ಈ ಸರಣಿಯಲ್ಲಿ ಜಯವನ್ನು ಗಳಿಸಿದನು.

ಈಗ ಜಾಕ್ ಟು ಮೂರು ಆಧುನಿಕ ಚೀನಾ ಸಾಹಸ ಪ್ರಧಾನ ಚಿತ್ರಗಳಲ್ಲಿ ನಟಿಸಲು ಸಿದ್ಧತೆ ನಡೆಸಿದ್ದು ಒಂದರ ಚಿತ್ರ ಕಥೆಯನ್ನು ಜಾಕಿ ಚಾನ್ ರಚಿಸಿದ್ದಾರೆ. ಈ ಮೂರು ಚಿತ್ರಗಳ ನಿರ್ಮಾಣದ ಹೊಣೆಯನ್ನು ಜಾಕಿ ಚಾನ್ ಎಂಪರರ್ ಮೂವೀಸ್ ಗೆ ವಹಿಸಿದ್ದು ಚಿತ್ರಗಳಿಗೆ ಸ್ಪೀಡ್ ಪೋಸ್ಟ್ ೨೦೬, ವೋಂಟ್ ಟೆಲ್ ಯು ಮತ್ತು ಟ್ರಾಫಿಕಲ್ ಟೊರ್ನಾಡೋ ಎಂದು ಹೆಸರುಗಳನ್ನು ಇಡಲು ನಿರ್ಧರಿಸಲಾಗಿದೆ. ತಮ್ಮ ವಿಶಿಷ್ಟ ಅಭಿನಯದಿಂದ ವಿಶ್ವಾದ್ಯಂತ ಜನಪ್ರಿಯತೆಯನ್ನು ಪಡೆದಿದ್ದು ಅಮೇರಿಕದ ಕೋರಿಯೋಗ್ರಾಫಿ ಅವಾರ್ಡ್ ವತಿಯಿಂದ ಜೀವಮಾನ ಸಾಧನೆಯ ಪ್ರಶಸ್ತಿ ಅಲ್ಲದೇ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ದುರಾದೃಷ್ಟ ವಿಷಯವೇನೆಂದರೆ ಅನೇಕ ಸಾಧನೆಗಳನ್ನು ಮಾಡಿದ್ದರೂ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಲೇ ಪ್ರಪಂಚದಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳ ಸಹಾಯಕ್ಕೆಂದು ಅಪಾರ ಪ್ರಮಾಣದ ಧನ ಸಹಾಯ ಮಾಡಿದ್ದಾರೆ.

ಆಸ್ಟ್ರೇಲಿಯಾ ನ್ಯಾಷನಲ್ ಯುನಿವರ್ಸಿಟಿ ಯಲ್ಲಿ ಸೈನ್ಸ್ ಸೆಂಟರ್ ನಿರ್ಮಿಸಲು ಮತ್ತು ಚೀನಾ ದೇಶದ ದುರ್ಬಲ ಸ್ಥಳಗಳಲ್ಲಿ ಶಾಲೆಗಳನ್ನು ನಿರ್ಮಿಸಲು ಹೇರಳ ಧನ ಸಹಾಯ ಮಾಡಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇವರು ನಿರ್ವಹಿಸುವ ಪ್ರತಿಯೊಂದು ವ್ಯವಹಾರದ ಲಾಭಾಂಶದ ಒಂದು ಭಾಗ ಜಾಕಿ ಚಾನ್ ಚಾರಿಟೇಬಲ್ ಫೌಂಡೇಶನ್ ಸೇರಿದಂತೆ ವಿವಿಧ ದತ್ತಿ ಸಂಸ್ಥೆಗಳಿಗೆ ಹೋಗುತ್ತದೆ. ಇವರು ಓರ್ವ ಲೋಕೋಪಕಾರಿ  ಕೂಡ ಆಗಿದ್ದು ಯು.ನಿ.ಸೆ.ಎಫ್ ನ ರಾಯಭಾರಿಯು ಆಗಿದ್ದಾರೆ. ಚೀನಾದ ಪ್ರಧಾನ ಭೂ ಭಾಗದಲ್ಲಿ ಉಂಟಾದ ಪ್ರವಾಹದ ಸಮಯದಲ್ಲಿ ಮತ್ತು ೨೦೦೪ ರಲ್ಲಿ ಹಿಂದು ಮಹಾಸಾಗರದ ಸುನಾಮಿಗೆ ಸಂಬಂಧಿಸಿದ ವಿಕೋಪ ಪರಿಹಾರ ನೀಡಿದ್ದಾರೆ.

ಚೀನಾದ ದೂರದ ಪ್ರದೇಶಗಳಲ್ಲಿರುವ ಮಕ್ಕಳು ಮತ್ತು ವೃದ್ಧ ಜೀವಿಗಳ ಕೊನೆಯ ಹಂತದ ಅಗತ್ಯಗಳನ್ನು ಪೂರೈಸಲು ೨೦೦೫ ರಲ್ಲಿ ದಿ ಡ್ರ್ಯಾಗನ್ ಹಾರ್ಟ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ೨೦೦೫ ನೇ ಇಸ್ವಿಯಲ್ಲಿ ತನ್ನ ಕೆಲಸವನ್ನು ಆರಂಭಿಸಿದ ಈ ಸಂಸ್ಥೆ ಇದುವರೆಗೂ ಒಂದು ಡಜನ್ ಗೂ ಹೆಚ್ಚು ಶಾಲೆಗಳನ್ನು ನಿರ್ಮಿಸಿದೆ. ಬಡತನದಲ್ಲಿರುವ ವರಿಗೆ ಅಗತ್ಯ ವಿರುವ ಶಿಕ್ಷಣ, ಪುಸ್ತಕ, ಸಮವಸ್ತ್ರ ಮತ್ತು ಫೀಸ್ ಇತ್ಯಾದಿ ಅಗತ್ಯೆಗಳನ್ನು ಪೂರೈಸಲು ದಶಲಕ್ಷ ಡಾಲರ್ ಹಣವನ್ನು ಸಂಗ್ರಹಿಸಿ ಜನತೆಗೆ ಸೇವೆಯನ್ನು ನೀಡುತ್ತಿದೆ. ಇವರು ತಮ್ಮ ಮರಣದ ನಂತರ ತಮ್ಮ ಆಸ್ತಿಯ ಅರ್ಧ ಭಾಗ ದೇಣಿಗೆ ರೂಪದಲ್ಲಿ ಹೋಗುತ್ತದೆ ಎಂದು ಘೋಷಿಸಿದ್ದು  ೨೦೦೦ ವರ್ಷಗಳ ಹಿಂದಿನ ಅನೇಕ ಐತಿಹಾಸಿಕ ಕರಕುಶಲ ವಸ್ತುಗಳ ಸಂಗ್ರಹವೇ ಇವರ ಬಳಿ ಇಂದಿಗೂ ಇದೆ.

ಆದರೆ ಈ ಲೇಖನವನ್ನು ಬರೆಯುತ್ತ ಒಂದು ಸಂಗತಿ ಹೇಳುವುದನ್ನು ಮರೆತಿದ್ದೇನೆ. ಈ ನಟನನ್ನು ಹತ್ತಿರದಿಂದ ನೋಡಿದ ಅದೃಷ್ಟವಂತರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ಸುಮಾರು ೧೬ ವರ್ಷಗಳ ಹಿಂದೆ ನಮ್ಮ ಗಂಗಾವತಿಯಿಂದ ೧೫ ಕಿಲೋ ಮೀಟರ್ ದೂರದಲ್ಲಿರುವ ಆಂಜನೇಯ ಜನ್ಮಸ್ಥಳವೆಂದು ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಬೆಟ್ಟದಲ್ಲಿ ಇವರ ದಿ ಮಿಥ್ ಚಿತ್ರದ ಚಿತ್ರೀಕರಣ ನಡೆದಿತ್ತು. ಅಂದು ನಾನು ಸುಮಾರು ೫ ರಿಂದ ೬ ಗಂಟೆಗಳ ಕಾಲ ಇವರು ಚಿತ್ರೀಕರಣ ಮಾಡುವ ಶೈಲಿಯನ್ನು ನೋಡಿದ್ದೇನೆ. ೨೦೦೮ ರಲ್ಲಿ ಸಿಚುವಾನ್ ಭೂಕಂಪ ಸಂಭವಿಸಿದ ನಂತರ ಸಂತ್ರಸ್ತರ ಸಹಾಯಕ್ಕಾಗಿ ೧೦ ದಶಲಕ್ಷ ಡಾಲರ್ ಹಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.

    ೨೦೦೮ ರಲ್ಲಿ ನಟ ಕಮಲಹಾಸನ್ ನಿರ್ಮಿಸಿ ನಟಿಸಿದ ದಶಾವತಾರಂ ತಮಿಳು ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಜಾಕಿ ಚಾನ್ ನನ್ನು  ಆಹ್ವಾನಿಸಿದ್ದರು. ಈ ಸಮಯದಲ್ಲಿ ಮಮ್ಮುಟ್ಟಿ, ಕಮಲಹಾಸನ್ ರಂತಹ ದಿಗ್ಗಜ ನಟರೊಂದಿಗೆ  ವೇದಿಕೆ ಹಂಚಿಕೊಂಡ ಜಾಕಿಚಾನ್ ಗೆ ತಮಿಳು ಭಾಷೆಯ ಬಗ್ಗೆ ಸ್ವಲ್ಪವೂ ಗೊತ್ತಿಲ್ಲ. ಆದರೂ ತಮಗೆ ಮತ್ತು ತಮ್ಮ ಚಿತ್ರಗಳಿಗೆ ಭಾರತೀಯರು ತೋರಿಸುವ ಅಭಿಮಾನ ಮತ್ತು ಪ್ರೀತಿಯಲ್ಲಿ ಮುಳುಗಿರುವ ಇವರಿಗೆ ನಮ್ಮ ದೇಶದ ಬಗ್ಗೆ ಗೌರವ ಮತ್ತು ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ. ಪ್ರಸ್ತುತ ೬೬ ವರ್ಷದ  ನಟ ಜಾಕಿ ಚಾನ್ ಗೆ  ಆರೋಗ್ಯದ ದೃಷ್ಟಿಯಿಂದ ಮೊದಲಿನಂತೆ ಸಾಹಸ ಪ್ರಧಾನ ಚಿತ್ರದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಬರುತ್ತಿರುವ ಚಿತ್ರಗಳಲ್ಲಿ ಭಾವನಾತ್ಮಕ  ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆಯಾದ ನ್ಯೂ ಪೋಲೀಸ್ ಸ್ಟೋರಿ ಚಿತ್ರದಲ್ಲಿ ಕುಡಿತದ ಚಟದಿಂದ ಬಳಲುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರು ತಮ್ಮ ೪೮ ವರ್ಷಗಳ ಚಿತ್ರ ರಂಗದ ಜೀವನದಲ್ಲಿ ೧೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇವರು ಯಾವುದೇ ಕಾರ್ಯಾರಂಭವಾಗಲಿ, ಶಾಲೆಗಳ ಪ್ರಾರಂಭೋತ್ಸವಕ್ಕೆ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡಲು ಆಗಾಗ ದೂರದ ದೇಶಗಳಿಗೆ ಪ್ರವಾಸವನ್ನು ಮಾಡುತ್ತಲೇ ಇದ್ದಾರೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply