ರಿಯಲ್ ಸ್ಟಂಟ್ ಮಾಸ್ಟರ್ ನಟ ಜಾಕಿಚಾನ್

  ವಿಶ್ವದಲ್ಲಿಯೇ ಅತ್ಯಧಿಕ ಅಭಿಮಾನಿಗಳನ್ನು ಹೊಂದಿರುವ ನಟ ಜಾಕಿಚಾನ್. ಆದರೆ ಸಂಯೋಜಿಸುವ ಅಪಾಯಕಾರಿ ಸಾಹಸಗಳಿಂದಲೇ ಪ್ರಸಿದ್ಧಿ ಪಡೆದಿರುವ ಇವರು ತಮ್ಮ ಖಾಸಗಿ ಜೀವನದಲ್ಲಿ ಬಿಡುವಿಲ್ಲದ ಕೆಲಸಗಳ   ನಡುವೆ ಸಮಾಜದ ಅಭಿವೃದ್ಧಿಗಾಗಿ ಮಾಡುತ್ತಿರುವ ಅನೇಕ ಕೆಲಸಗಳ ಬಗ್ಗೆ ತಿಳಿಸಿಕೊಡಬೇಕೆಂಬ ಉದ್ದೇಶದಿಂದ ಅಧ್ಯಯನ ಮಾಡಿ ಈ ಲೇಖನವನ್ನು ರಚಿಸಿದ್ದೇನೆ.

     ಹಾಂಕಾಂಗ್ ನ ಕ್ರೌಸ್ ಕಾಲೊನಿಯಲ್ಲಿನ ವಿಕ್ಟೋರಿಯಾ ಪೀಕ್ ನಲ್ಲಿ ಚಾರ್ಲ್ಸ್ ಮತ್ತು ಲೀಲೀಚಾನ್ ದಂಪತಿಗಳ ಮಗನಾಗಿ ಎಪ್ರಿಲ್ ೭,೧೯೫೪ ರಂದು ಚಾನ್ ಜನಿಸಿದರು.  ಜನಿಸಿದ ಸಮಯದಲ್ಲಿ ಇವರ ತಂದೆ ಮತ್ತು ತಾಯಿ ಇವರಿಗೆ ಚಾನ್ ಕಾಂಗ್ ಸ್ಯಾಂಡ್ ಎಂದು ನಾಮಕರಣ ಮಾಡಿದ್ದರು. ಅಲ್ಲದೇ ಇವರಿಗೆ  ಪಾವೋ ಪಾವೋ ಎಂಬ ಅಡ್ಡ ಹೆಸರು ಕೂಡ ಇತ್ತು ‌( ಪಾವೋ,ಪಾವೋ ಎಂದರೆ ಚೈನೀಸ್ ಭಾಷೆಯಲ್ಲಿ ಫಿರಂಗಿ ಗುಂಡು ಎನ್ನುವರು.

ಆದರೆ ವಿಚಿತ್ರವಾದ ಸಂಗತಿಯೇನೆಂದರೆ ಇವರು ಜನಿಸಿದ ಸಮಯದಲ್ಲಿ ಇವರ ತೂಕವನ್ನು ನೋಡಿ ವೈದ್ಯರಿಗೆ ಆಶ್ಚರ್ಯವಾಗಿತ್ತು. ಕಾರಣವೇನೆಂದರೆ ಜನಿಸಿದ ಸಮಯದಲ್ಲಿ ಸಾಮಾನ್ಯವಾಗಿ ಮಗುವಿನ ತೂಕ ಎರಡುವರೆ ಕೆಜಿ ತೂಕವಿರುತ್ತದೆ. ಆದರೆ ಇವರು ಜನಿಸಿದಾಗ ಐದು ಕೆಜಿ ನಾಲ್ಕುನೂರು ಗ್ರಾಂ ಇತ್ತು. ಇವರಿಗೆ ಒಬ್ಬ ಸಹೋದರನಿದ್ದು ಅವನ ಹೆಸರು ಸೂ- ಸಾಂಗ್- ಚಾಂಗ್ ಮತ್ತು ಸಹೋದರಿಯ ಹೆಸರು ತಾಯ್ ಚಾನ್. ಇವರ ತಂದೆ ಮತ್ತು ತಾಯಿ ಫ್ರೆಂಚ್ ನಿಯೋಗಿಗಳಾಗಿ ಕೆಲಸ ಮಾಡುತ್ತಿದ್ದರಿಂದ ಚಾನ್ ತನ್ನ ಬಾಲ್ಯದ ದಿನಗಳನ್ನು ವಿಕ್ಟೋರಿಯಾ ಪೀಕ್ ಎಂಬ ಜಿಲ್ಲೆಯಲ್ಲಿನ ನಿಯೋಗಿಗಳ ವಾಸಸ್ಥಾನದಲ್ಲಿ ಕಳೆಯಬೇಕಾಯಿತು.

  ಹಾಂಕಾಂಗ್ ದ್ವೀಪದಲ್ಲಿರುವ ನಾಹ್- ಹ್ವಾ ಪ್ರಾಥಮಿಕ ಶಾಲೆಗೆ ಸೇರಿಕೊಂಡ ಚಾನ್ ಗೆ ದುರಾದೃಷ್ಟವೋ ತಿಳಿಯದು ಆರಂಭದಿಂದಲೂ ಶಿಕ್ಷಣ ಸರಿಯಾಗಿ ಒಲಿದು ಬರಲಿಲ್ಲ. ಶಾಲೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದ ಸಮಯದಲ್ಲಿ ಹಲವು ಬಾರಿ ಕಠಿಣ ಶಿಕ್ಷೆಗೆ ಕೂಡ ಒಳಗಾಗಿದ್ದರು. ಆದರೂ ಪ್ರಯತ್ನ  ಫಲಿಸದೇ ಮೊದಲ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು.

   ೧೯೬೦ ರಲ್ಲಿ ಅಮೇರಿಕಾದ ರಾಯಭಾರಿ ಕಚೇರಿಯಲ್ಲಿ ಮುಖ್ಯ ಅಡುಗೆ  ಭಟ್ಟನಾಗಿ ಕೆಲಸ ನಿರ್ವಹಿಸಲು ಇವರ ತಂದೆ ಆಸ್ಟ್ರೇಲಿಯಾದ ಕ್ಯಾನ್ ಬೇರೆಗೆ ವಲಸೆ ಹೋದರು. ಇತ್ತ ಕಡೆ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ಚಾನ್ ಮಾಸ್ಟರ್ ಯು- ಜಿವ್- ಯುಯೇನ್ ನಡೆಸುತ್ತಿದ್ದ ಚೈನಾ ಡ್ರಾಮಾ ಅಕಾಡೆಮಿ ಸೇರಿದರು. ನಂತರ ಕೆಲವು ವರ್ಷಗಳಲ್ಲಿ ಕದನ ಕಲೆಗಳು, ದೊಂಬರಾಟ ಮತ್ತು ಸಾಹಸ ಕಲೆಗಳ ಅತಿ ಕಠಿಣ ತರಬೇತಿಯನ್ನು ಪಡೆಯುವುದರ ಮೂಲಕ ಅವರಲ್ಲಿದ್ದ ಅಗಾಧ ಪ್ರತಿಭೆ ಸಮಾಜಕ್ಕೆ ಪರಿಚಯವಾಯಿತು. ಹೀಗೆ ಕಷ್ಟಪಟ್ಟು ಕಲಿತ ವಿದ್ಯೆಯಿಂದ ಅವರ ತರಬೇತಿ ಕೇಂದ್ರದ ಲಿಟಲ್ ಫಾರ್ಚ್ಯೂನ್ ತಂಡದ ಮುಖ್ಯ ಸದಸ್ಯರಾಗಿ ಗುರುತಿಸಲ್ಪಟ್ಟರು. ಈ ತರಬೇತಿ ಕೇಂದ್ರದ ಕೆಲವು ಉತ್ತಮ ವಿದ್ಯಾರ್ಥಿಗಳಿಂದ ರೂಪುಗೊಂಡ ಈ ಪ್ರದರ್ಶನ ತಂಡದ ಹೆಸರು ಯುಯೇನ್ ಲೋ. ಈ ತಂಡವನ್ನು ಚಾನ್ ತನ್ನ ಗುರುವಿಗೆ ಗುರು ಕಾಣಿಕೆಯಾಗಿ ನೀಡಿದ್ದರು. ತನ್ನ ತಂಡದ ಸದಸ್ಯರಾದ ಸ್ಯಾಮ್ಮೋಹಂಗ್ ಮತ್ತು ಯುಯೇನ್ ದಿಯಾವೋ ಜೊತೆ ನಿಕಟ ಸ್ನೇಹ ಬೆಳೆಸಿದರು.

 ನಂತರ ಈ ಮೂರು ವ್ಯಕ್ತಿಗಳೇ ತ್ರೀ ಡ್ರ್ಯಾಗನ್ಸ ಎಂದು ಪ್ರಸಿದ್ಧಿಯಾದರು. ೮ ವರ್ಷದ ಬಾಲಕನಾಗಿರುವ ಸಮಯದಲ್ಲಿ ಚಿತ್ರ ರಂಗದಲ್ಲಿ ತಮ್ಮ ಜೀವನವನ್ನು ಆರಂಭಿಸಿದ ಚಾನ್ ತನ್ನ ಲಿಟಲ್ ಫಾರ್ಚ್ಯೂನ್ ತಂಡದ ಕೆಲವು ಸದಸ್ಯರೊಂದಿಗೆ ಸೇರಿಕೊಂಡು ೧೯೬೨ ರಲ್ಲಿ ಬಿಗ್ ಆಂಡ್ ಲಿಟಲ್ ವಾಂಗ್ ಟಿನ್ ಬಾರ್ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಬಾಲಕಲಾವಿದನಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಲೀ ಲೀ ಹಾವಾ ಎಂಬ ನಟಿ ಇವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದರು.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply