ಇದು ತೆಲುಗಿನ ಚಿತ್ರವಾದರೂ ಸಹ ಕನ್ನಡದಲ್ಲಿ ಅಚ್ಚುಕಟ್ಟಾಗಿ ಡಬ್ ಆಗಿ ಮೂಡಿಬಂದಿದೆ. ನಟ-ನಟಿಯರೆಲ್ಲ ತೆಲುಗಿನವರು. ಆದರೆ ಚಿತ್ರ ಕನ್ನಡದ್ದೇ ಎಂಬ ಆಪ್ತತೆ ಕೊಡುತ್ತದೆ.
ಈ ಚಿತ್ರದಲ್ಲಿ ಇಬ್ಬರು ಹೀರೋಗಳಿದ್ದಾರೆ. ಒಬ್ಬ ನಾಯಕ. ಮತ್ತೊಬ್ಬ ಪ್ರತಿನಾಯಕ. ಅಭಿನಯದಲ್ಲಿ ಇಬ್ಬರೂ ಸಮನಾದ ಪೈಪೋಟಿ ನೀಡಿದ್ದಾರೆ. ಜೊತೆಗೆ ಇಬ್ಬರು ನಾಯಕಿಯರೂ ಸಹ ಮುದ್ದಾಗಿದ್ದಾರೆ.
ಕಥೆಯೇನು ಅಂದ್ರಾ?
ಹೀರೋ ಒಬ್ಬ ಪೊಲೀಸ್ ಆಫೀಸರ್. ಒಂದು ದಂಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದ ಎಂಬ ಕಾರಣಕ್ಕೆ ಆತನಿಗೆ ಸರ್ಕಾರದಿಂದ ಗ್ಯಾಲಂಟ್ರಿ ಅವಾರ್ಡ್ ಸಿಗುತ್ತದೆ. ಆದರೆ ಆ ಅವಾರ್ಡ್ ಸಿಕ್ಕ ಕಾರಣಕ್ಕಾಗಿಯೇ ಪ್ರತಿನಾಯಕ ನಾಯಕನಿಗೆ ಒಂದು ಟಾಸ್ಕ್ ಕೊಡುತ್ತಾನೆ.
ತಾನು ಐದು ಕೊಲೆ ಮಾಡುವುದಾಗಿಯೂ, ಅದನ್ನು ತಡೆದರೆ ನಾಯಕ ಆ ಅವಾರ್ಡಿಗೆ ಅರ್ಹನೆಂದೂ, ಒಂದು ವೇಳೆ ಕೊಲೆಗಳನ್ನು ಅವನಿಂದ ತಡೆಯಲು ಆಗದಿದ್ದರೆ ನಾಯಕ ಗ್ಯಾಲಂಟ್ರಿ ಅವಾರ್ಡ್ ಅನ್ನು ಸರ್ಕಾರಕ್ಕೆ ವಾಪಸ್ ಮಾಡಬೇಕೆಂದು ಚಾಲೆಂಜ್ ಮಾಡುತ್ತಾನೆ.
ನಾಯಕ ಈ ಚಾಲೆಂಜ್ ಅನ್ನು ಸ್ವೀಕರಿಸುತ್ತಾನೆ.
ಆದರೆ ನಾಯಕನಿಂದ ಆ ಕೊಲೆಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಪ್ರತೀಬಾರಿಯೂ ಪ್ರತಿನಾಯಕನೇ ಗೆಲ್ಲುತ್ತಾ ಹೋಗುತ್ತಾನೆ. ಕಡೆಗೆ ಐದನೇ ಕೊಲೆಯೂ ನಡೆದುಬಿಡುತ್ತದೆ. ನಾಯಕ ಕೂಡಲೇ ಪ್ರೆಸ್ ಮೀಟ್ ಕರೆದು ಸರ್ಕಾರ ತನಗೆ ಕೊಟ್ಟಿದ್ದ ಅವಾರ್ಡ್ ವಾಪಸ್ ಮಾಡಿ ರಾಜೀನಾಮೆ ಕೊಟ್ಟು ಹೊರ ನಡೆಯುತ್ತಾನೆ.
ಹಾಗಾದರೆ ನಾಯಕ ಸೋತನಾ?
ಇದೇ ಸಿನೆಮಾದ ಲಾಜಿಕ್. ನಾಯಕ- ಪ್ರತಿನಾಯಕ ಇಬ್ಬರಲ್ಲಿ ಗೆದ್ದವರು ಯಾರು? ಸೋತವರು ಯಾರು? ಅಸಲಿಗೆ ಪ್ರತಿನಾಯಕನಿಗೆ ನಾಯಕನ ಮೇಲೆ ಯಾಕೆ ದ್ವೇಷ? ಆತ ಕೊಲೆ ಮಾಡುತ್ತಿದ್ದುದಾದರೂ ಯಾರನ್ನು ಮತ್ತು ಯಾಕಾಗಿ?
ಇದೆಲ್ಲವೂ ನಾಯಕ ರಾಜೀನಾಮೆ ಕೊಟ್ಟ ನಂತರ ಗೊತ್ತಾಗುತ್ತದೆ. ಒಂದು ದೊಡ್ಡ ಸತ್ಯದ ವಿಸ್ಫೋಟವಾಗುತ್ತದೆ. ಇಲ್ಲಿಯತನಕ ನೋಡಿದ್ದ ಘಟನೆಗಳು ಬೇರೊಂದು ಆಯಾಮದಲ್ಲಿ ಕಾಣಿಸತೊಡಗುತ್ತವೆ.
ಚಿತ್ರ ಅಮೆಜಾನ್ ಪ್ರೈಮಿನಲ್ಲಿದೆ.
Nice