ಸಾಕುಮಗಳು

ಕಥೆ ಸಾಕುಮಗಳು ಪಾತ್ರದ ಕಲ್ಪನಾ ಸುತ್ತ ತಿರುಗುತ್ತದೆ. ಬಹುಶಃ ಇದು ಆಕೆಯ ಮೊದಲ ಸಿನಿಮಾ.  ವಾಯ್ಸ್ ಡಬ್ ಮಾಡಿದ್ದಾರೆ. ಎಲ್ಲೋ ಒಂದು ಕಡೆ ಎಕ್ಸ್‌ಕ್ಯೂಸ್ ಮೀ ಎನ್ನುವಾಗ ಆಕೆಯ ವಿಶಿಷ್ಟ ದನಿ ಕೇಳಿಸಿದಂತಾಯಿತು.

ಚಂದವಾಗಿ ರೇಡಿಯೋದಲ್ಲಿ ಹಾಡುವ ಉಮಾ (ಕಲ್ಪನಾ)ಗೆ ಒಬ್ಬ ಕಾಯಿಲೆಯ ತಾಯಿ, ಉಂಡಾಡಿ ಅಪ್ಪ (ಡಿಕ್ಕಿ ಮಾಧವರಾವ್) ಮತ್ತು ಉಡಾಳ ಬುದ್ಧಿಯ ಮಗ ರಘು (ರಾಜ್‍ಕುಮಾರ್). ಕುಸ್ತಿ ಆಡಿ ಗೆದ್ದು ಬೆಳ್ಳಿ ಕಪ್ಪನ್ನು ಕೊಡಲು ಬಂದ ಮಂಜುಳಾಳನ್ನು (ಸಾಹುಕಾರ್ ಜಾನಕಿ) ಅವಮಾನಿಸುತ್ತಾನೆ. ಆದರೆ ಉಮಾಳನ್ನು ತನ್ನ ತಂಗಿಯ ನೃತ್ಯಕ್ಕೆ ಹಾಡಲು ಕರೆಸುತ್ತಾನೆ ವಾಸು (ರಾಜಾಶಂಕರ್).

ತಾಯಿ ಸಾಯುವಾಗ ಉಮಾಳನ್ನು ನೀನು ಸಾಕುಮಗಳು ಎಂದು ನಿಜ ಅರುಹುತ್ತಾಳೆ. ಮನೆಯ ಬಾಗಿಲಲ್ಲಿದ್ದ ಅನಾಥ ಮಗುವನ್ನು ಸಾಕಿರುತ್ತಾಳೆ ಅಮ್ಮ (ಪಾಪಮ್ಮ). 


ವಾಸು ಉಮಾಳನ್ನು ಇಷ್ಟ ಪಡುತ್ತಾನೆ. ಮದುವೆ ನಿಶ್ಚಯವಾದಾಗ ಮಂಜುಳಾ ರಘುವನ್ನು ನೋಡಿ ಗಲಾಟೆ ಮಾಡಿ, ಮದುವೆ ನಿಂತುಹೋಗಿರುತ್ತದೆ.

ಉಮಾಳ ಶಾಲೆಯ ಉತ್ತರ ಪತ್ರಿಕೆಗಳನ್ನು ಹಳೆಪೇಪರ್‍ಗೆ ಮಾರಿ ಹಣ ಪಡೆದು ಇಸ್ಪೀಟು ಆಡುವ ತಂದೆ, ಮಗನನ್ನು ಹಿಡಿಯುತ್ತಾರೆ ಪೊಲೀಸರು. ಅವರಿಗೆ ಶಾಲೆಯಿಂದ ದೂರ ಬಂದಿರುತ್ತದೆ. ಉಮಾ ಸಸ್ಪೆಂಡ್ ಆಗುತ್ತಾಳೆ. ಅಪ್ಪ ಮತ್ತು ಅಣ್ಣನನ್ನು ಜೈಲಿನಿಂದ ಬಿಡಿಸಲು ಒಂದು ಸಾವಿರ ರೂಪಾಯಿ ಬೇಕಾಗುತ್ತದೆ. ಒಬ್ಬ ಹಣ್ಣು ಹಣ್ಣು ಮುದುಕನಿಗೆ ಮದುವೆಯಾಗುವ ಹುಚ್ಚು ಇರುತ್ತದೆ. ಅವನ ಬಳಿ ಸಾವಿರ ರೂಪಾಯಿ ಪಡೆದು ಅವನನ್ನು ಮದುವೆಯಾಗುವ ಇಚ್ಛೆ ತೋರುತ್ತಾಳೆ.

ಆದರೆ ಎಲ್ಲರಿಗೂ ಅಚ್ಚರಿಯಾಗುವ ಮದುವೆ ನಡೆಯುತ್ತದೆ. ಆದರೆ ಮಂಜುಳಾ ನೃತ್ಯ ಮಾಡುವಾಗ ಉಮಾ ಹಾಡುವಾಗ ಅಚಾತುರ್ಯ ನಡೆದು ಮಂಜುಳಾಳ ಕಣ್ಣು ಹೋಗುತ್ತದೆ. ಕಥೆ ಸುತ್ತಿ ಸುತ್ತಿ ಕೊನೆಗೆ ಶುಭಂ!

ಬಾಲಕೃಷ್ಣ ಥ್ರಿಲ್, ರೋಮಾಂಚಕ ಅನ್ನೋ ಪದಗಳನ್ನು ಅದೆಷ್ಟು ಸಲ ಹೇಳುವರೋ ಲೆಕ್ಕವಿಲ್ಲ. ಆತನ ಹೆಂಡತಿಯಾಗಿ ರಮಾದೇವಿ ಸಖತ್ ಮೂತಿ ತಿವಿಯುತ್ತಾರೆ ಉಮಾಳಿಗೆ. ನರಸಿಂಹರಾಜು ಮತ್ತು ಎಂ ಎನ್ ಲಕ್ಷ್ಮೀದೇವಿ ಅವರ ಒಂದು ಕಾಮಿಡಿ ಟ್ರ್ಯಾಕ್ ಇದೆ.

ಘಂಟಸಾಲ ಅವರ ಎರಡು ಹಾಡುಗಳಲ್ಲಿ ‘ಎಲ್ಲಿದೆ ಹೊಂಬೆಳಕೆಲ್ಲಿದೆ’ ನೆನಪಲ್ಲಿ ಉಳಿಯುತ್ತದೆ. ‘ಜೀವನರಾಗ ಈ ಅನುರಾಗ’ , ‘ಒಂದೇ ಒಂದು ಹೊಸ ಹಾಡು’ , ‘ಬಾ ಬೇಗ ಮನಮೋಹನ’ ಮತ್ತು ‘ನಾನು ಅಂಧಳಾದೆ ನೀನು ಮೂಕನಾದೆ’ ಎಲ್ಲವೂ ಚಂದದ ಮಧುರ ಹಾಡುಗಳು.

ರಾಜ್ ಲೀಲಾಜಾಲ. ಮೊದಲಿನ ಉಂಡಾಡಿ, ನಂತರದ ಜವಾಬ್ದಾರಿಯುತ ಅಣ್ಣ, ಕುರುಡು ಪತ್ನಿಯ ಸೇವೆ ಮಾಡುವ ಪತಿ… ಚಂದ ಚಂದ. ತಲೆ ತುಂಬಾ ಗುಂಗುರು ಕೂದಲು. ಒಂದು ಜೊಂಪೆ ಹಣೆಯ ಮೇಲೆ ನೋಡಲು ಮುದ್ದು. ಈ ಸಿನಿಮಾ ಬಂದಾಗ ರಾಜ್ ಅವರ ವಯಸ್ಸು 34. ಆದರೆ ಇನ್ನೂ ಬಹಳ ಚಿಕ್ಕವರಾಗಿ ಕಾಣುತ್ತಾರೆ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply