1973ರ ಈ ವೈ ಆರ್ ಸ್ವಾಮಿ ನಿರ್ದೇಶನದ ಚಿತ್ರವು ಪ್ರಜಾಮತದಲ್ಲಿ ಧಾರಾವಾಹಿ ಆಗಿದ್ದ ಮ.ನ.ಮೂರ್ತಿಯವರ ‘ಸ್ವಯಂವರ’ ಕಾದಂಬರಿ ಆಧಾರಿತ.
ತಾತ (ಸಂಪತ್) ತಾನು ಸಾಯುವ ಮುನ್ನ, ತನ್ನ ಆಸ್ತಿಯನ್ನೆಲ್ಲಾ ತನ್ನ ಮೊಮ್ಮಗಳು ವಸಂತ(ಬೆಡಗಿನ ನಟಿ ಭಾರತಿ) ಹೆಸರಿಗೆ ಬರೆಯುತ್ತಾರೆ. ಆದರೆ ಎರಡು ಷರತ್ತುಗಳಿರುತ್ತವೆ. ಒಂದು- ಅವಳು ಮದುವೆಯಾಗಬೇಕು. ಎರಡು- ಅವಳು ಕನಿಷ್ಠ ನಲವತ್ತೈದು ದಿನ ಪತಿಯೊಂದಿಗೆ ಸಂಸಾರ ಮಾಡಬೇಕು.
ಆದರೆ… ಆದರೆ… ಅವಳು ಪುರುಷದ್ವೇಷಿ. ಅದಕ್ಕೇ ತಾತನ ಷರತ್ತನ್ನು ಪೂರೈಸಲು ನಾಳೆ ನೇಣುಗಂಬವೇರಿ ಸಾಯಲಿರುವ ನಟರಾಜನ (ರಾಜ್‍ಕುಮಾರ್) ಕೈ ಹಿಡಿಯುತ್ತಾಳೆ. ಆದರೆ ನಟರಾಜನ ಮೇಲಿನ ಆಪಾದನೆಯನ್ನು ತಳ್ಳಿ ಹಾಕುತ್ತಾನೆ ನಿಜವಾದ ಕೊಲೆಗಾರ, ತಾನು ಸಾಯುವಾಗ ನ್ಯಾಯಾಧೀಶರಿಗೆ ಹೇಳಿಕೆ ಕೊಟ್ಟು.
ಖುಷಿಯಾಗಿ ನಟರಾಜ ವಸಂತಳ ಮನೆಗೆ ಬಂದು ಅಪಮಾನಿತನಾಗುತ್ತಾನೆ. ಅವನು ಬಂದಿರುವುದು ಕೇವಲ ಅವಳಿಗೆ ಕೃತಜ್ಞತೆ ಹೇಳುವುದಕ್ಕೆ. ಏಕೆಂದರೆ ಅವನು ಬದುಕಿದ್ದೇ ಅವಳ ಮಾಂಗಲ್ಯಬಲದಿಂದ ಎಂದು ನಂಬಿರುತ್ತಾನೆ.
ಅವನು ತನ್ನ ಗಣಿಯ ಕೆಲಸಕ್ಕೆ, ತನ್ನ ತಂಗಿ ಇಂದ್ರಳ (ಕಲಾ) ಬಳಿಗೆ ಹಿಂತಿರುಗುತ್ತಾನೆ.
ವಸಂತಳ ತಾತನ ಗೆಳೆಯ ನಯವಂಚಕ ನಂಗಲಿ ನಂಜುಂಡಯ್ಯ(ಬಾಲಕೃಷ್ಣ) ವಸಂತಳನ್ನು ತನ್ನ ಮಗ ಸ್ವಾಮಿಗೆ (ದಿನೇಶ್) ತಂದುಕೊಂಡು ಅವಳ 52 ಲಕ್ಷ ಆಸ್ತಿ ಹೊಡೆಯಲು ಲಾಯರೊಬ್ಬನ (ರಾಘವೇಂದ್ರ ರಾವ್) ಜೊತೆ ಸಂಚು ಮಾಡುತ್ತಾನೆ.
ತಾತನ ಎರಡನೇ ಷರತ್ತಿನಂತೆ ಕೆಲವು ದಿನ ‘ಪತಿ’ಯ ಮನೆಯಲ್ಲಿರಲು ಹೋಗಿ, ತನ್ನನ್ನು ಒಂದೂವರೆ ತಿಂಗಳು ‘ಮುಟ್ಟ’ಬೇಡವೆಂದು ಷರತ್ತು ಹಾಕಿ ಅವನ ಮನೆಯಲ್ಲಿ ಕಷ್ಟಪಟ್ಟು ಅಡುಗೆ, ಮುಸುರೆ ತಿಕ್ಕುವುದು, ಬಾವಿಯಲ್ಲಿ ನೀರು ಸೇರುವುದು ಎಲ್ಲ ಮಾಡುತ್ತಾಳೆ. ಒಂದು ದಿನ ಮಗುವೊಂದನ್ನು ಕಾಪಾಡಲು ಡಾಕ್ಟರನ್ನು ನಗರದಿಂದ ಕರೆತರಲು, ಪತಿ ಮುಟ್ಟಬೇಡವೆಂದ ಅವಳ ಕಾರನ್ನು ಒಯ್ದು, ಪತಿಯಿಂದ ಛೀಮಾರಿ ಹಾಕಿಸಿಕೊಂಡು ಮನೆ ತೊರೆಯುತ್ತಾಳೆ.
ನಿಜ ವಿಷಯ ಅರಿತ ನಟರಾಜ ಅವಳ ಮನೆಗೆ ಓಡಿ, ಫೈಟಿಂಗ್ ಮಾಡಿ, ಕೊನೆಗೆ ಅವಳು ಸಿಗದೇ ವಾಪಸ್ ಬರುತ್ತಾನೆ. ನಂತರ ನಡೆಯುವ ಗಣಿಯೊಳಗಿನ ಒಂದು ಸ್ಫೋಟದಲ್ಲಿ ಅವನು…
ಪಿ.ಸುಶೀಲ ಸಂಗಡಿಗರ ‘ಪ್ರಿಯಸಖೀ ಪ್ರಿಯಂವದೆ’ ಪ್ರಭಾತ್ ಕಲಾವಿದರ ತಂಡದೊಂದಿಗೆ ಭಾರತಿ ನರ್ತಿಸುವ ಹಾಡು, ಎಸ್‍ಪಿಬಿ ಅವರ ‘ಈ ಜಗವೊಂದು ನ್ಯಾಯಾಲಯಾ’ , ಪಿಬಿಎಸ್. ಎಸ್ ಜಾನಕಿ ಮತ್ತು ಖೋರಸ್ ‘ಕೋಟಿಗೆ ಒಬ್ಬ ನಾಡಿಗೆ ಒಬ್ಬ ಈ ರಾಜಾ’ … ಮತ್ತು ಅತಿ ಜನಪ್ರಿಯ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನದ ಯುಗಳ ಗೀತೆ ‘ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ’.
ಸಾಯುವೆನೆಂದು ತಿಳಿದಾಗ ಹತಾಶೆ, ಸಾಲ ನೀಡಿದವನು ಮೋಸ ಮಾಡಿದಾಗ ದಬಾವಣೆ, ತಂಗಿಯ ಮೇಲಿನ ಪ್ರೀತಿ, ನೇಣು ಇಲ್ಲವೆಂದು ತಿಳಿದಾಗ ಅತಿ ಖುಷಿ, ಪತ್ನಿಯ ಮೇಲೆ ಪ್ರೇಮ, ಅವಳು ಮೋಸ ಮಾಡಿದಳೆಂದು ನಿರಾಸೆ… ರಾಜ್ ಸೂಪರ್ ನಟನೆ.
ಭಾರತಿ ನಿಜಕ್ಕೂ ಬೆಡಗಿಯೂ ಹೌದು, ಒಳ್ಳೆಯ ನಟಿಯೂ ಹೌದು.
ಬಾಲಣ್ಣ… ಆಹಾ… ನಿಮಗೊಂದು ಸಲಾಂ.
ದಿನೇಶ್ ಕಮ್ಮಿ ವಿಲನ್, ಹೆಚ್ಚು ಕಮೆಡಿಯನ್ ಈ ಚಿತ್ರದಲ್ಲಿ!