ಹಾಸ್ಯ ಚಕ್ರವರ್ತಿ ನರಸಿಂಹರಾಜು

ಕನ್ನಡ ಚಿತ್ರರಂಗಕ್ಕೆ ಹಾಸ್ಯವನ್ನು ಉಡುಗೊರೆಯಾಗಿ ನೀಡಿದ ಹಾಸ್ಯ ರಾಯಭಾರಿ, ಹಾಸ್ಯ ಬ್ರಹ್ಮ, ಹಾಸ್ಯ ದಿಗ್ಗಜ, ಹಾಸ್ಯ ಚಕ್ರವರ್ತಿ ನರಸಿಂಹರಾಜು
  ಟಿ.ಆರ್ ನರಸಿಂಹರಾಜು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಹಾಸ್ಯ ನಟ. ಇವರು ಕನ್ನಡ ಚಿತ್ರರಂಗದ ಹಾಸ್ಯದ ಪಿತಾಮಹಾನಾಗಿದ್ದು ಇವರು ಬಗ್ಗೆ ವರ್ಣಿಸಲು ಪದಗಳೇ ಸಾಲುವುದಿಲ್ಲ. ಎಷ್ಟು ಬರೆದರು ಕಡಿಮೆಯೇ. ಈ ಹಾಸ್ಯ ಬ್ರಹ್ಮ ಆರಂಭದಲ್ಲಿ ಸಾಧಾರಣವಾದ ಜೀವನ ನಡೆಸುತ್ತ ಜೀವನದ ಪ್ರಯಾಣದಲ್ಲಿ ಹೇಗೆ ಯಶಸ್ವಿಯಾದರು ಎಂದು ತಿಳಿಸುವ ಉದ್ದೇಶದಿಂದ ಈ ಲೇಖನವನ್ನು ರಚಿಸಿದ್ದೇನೆ.

ಅಂದಿನ ಮೈಸೂರು ರಾಜ್ಯದ ತಿಪಟೂರಿನಲ್ಲಿ ೧೯೨೩ ಜುಲೈ ೧೧ ರಂದು ರಾಮರಾಜು ನರಸಿಂಹರಾಜು ಮತ್ತು ವೆಂಕಟಲಕ್ಷ್ಮಿ ದಂಪತಿಯ ಮಗನಾಗಿ ಜನಿಸಿದರು. ಇವರ ಪೂರ್ಣ ಹೆಸರು ತಿಪಟೂರು ರಾಮರಾಜು ನರಸಿಂಹರಾಜು. ಇವರ ತಂದೆ ರಾಮರಾಜು ವೃತ್ತಿಯಲ್ಲಿ ಪೋಲಿಸ್ ಪೇದೆ. ತಾಯಿ ವೆಂಕಟಲಕ್ಷ್ಮಿ ಗೃಹಿಣಿ. ಇವರು ಜನಿಸಿದ ಸಮಯದಲ್ಲಿ ಇವರ ಕುಟುಂಬ ಬಡತನವನ್ನು ಎದುರಿಸುತ್ತಿತ್ತು. ಅಲ್ಲಿ ಯಾವ ಸೌಲಭ್ಯವೂ ಇರಲಿಲ್ಲ. ಈ ಬಡತನದಲ್ಲಿ ವಂಶದ ಕುಡಿಯ ಬೆಳವಣಿಗೆ ಮತ್ತು ಅಭಿವೃದ್ಧಿ ಅಸಾಧ್ಯವೆಂದು ತಿಳಿದ ಇವರ ಚಿಕ್ಕಪ್ಪ ಲಕ್ಷ್ಮಿ ಪತಿ ರಾಜು ಇವರನ್ನು ಸಿ.ಬಿ.ಮಲ್ಲಪ್ಪನವರ ಚಂದ್ರ ಮೌಳೇಶ್ವರ ನಾಟಕ ಮಂಡಳಿಗೆ ಸೇರಿಸಿದರು. ಆಗ ಇವರ ವಯಸ್ಸು ಕೇವಲ ನಾಲ್ಕು ವರ್ಷ. ಆದರೆ ದೈವ ನಿರ್ಣಯವನ್ನು ಪ್ರಶ್ನಿಸುವವರು ಯಾರಾದರೂ ಇರುವರೇ? ದೈವ ನಿರ್ಣಯದಂತೆ ಬಾಲ್ಯದಲ್ಲಿಯೇ ಇವರಿಗೆ ಕಲೆಯೇ ಜೀವನವಾಯಿತಲ್ಲದೆ ಇಲ್ಲಿಂದಲೇ ಬದುಕಿನ ಶಿಕ್ಷಣ ಆರಂಭವಾಯಿತು. ಆರಂಭದ ದಿನಗಳಲ್ಲಿ ನಾಟಕಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳನ್ನು ನಿರ್ವಹಿಸುವುದರೊಂದಿಗೆ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು ಪ್ರಹ್ಲಾದ, ಲೋಹಿತಾಶ್ವ,ರಾಮ,ರಾವಣ,ಭರತ ಈ ರೀತಿಯಾಗಿ ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದರಲ್ಲದೆ ಕೆಲವು ಸಲ ಲಕ್ಷ್ಮಿ ಎಂಬ ಸ್ತ್ರೀಯ ಪಾತ್ರವನ್ನು ನಿರ್ವಹಿಸಿದ್ದರು. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಮುಖ, ಶರೀರವನ್ನು ಸಹಜವಾಗಿ ಪಡೆದಿದ್ದ ಇವರಿಗೆ ಹಾಸ್ಯ ಪಾತ್ರಗಳ ನಿರ್ವಹಣೆಯು ಕರಗತವಾಗಿತ್ತು.

ಆಗಲೇ ಜನಪ್ರಿಯತೆ ಪಡೆದಿದ್ದ ಬೇಡರ ಕಣ್ಣಪ್ಪ ನಾಟಕದ ಅರ್ಚಕನ ಪುತ್ರ ಕಾಶಿಯ ಪಾತ್ರದ ಮೂಲಕ ಜನಪ್ರಿಯತೆಯನ್ನು ಪಡೆದಿದ್ದರು. ಇವರು ರಂಗ ಪರದೆಯ ಮೇಲೆ ಕಂಡರೆ ಸಾಕು ಪ್ರೇಕ್ಷಕರಿಗೆ ಹಾಸ್ಯದ ಹಬ್ಬ ಖಚಿತವಾಗಿತ್ತು. ಹೀಗೆ ಜೀವನವನ್ನು ಸಾಗಿಸುತ್ತ ಬೆಳೆದ ನಂತರ ತಮ್ಮದೇ ಸ್ವಂತ ನಾಟಕ ಮಂಡಳಿಯನ್ನು ಆರಂಭಿಸಿ ಗೋರ ಕುಂಬಾರ,ಸತ್ಯ ಹರಿಶ್ಚಂದ್ರ ಮುಂತಾದ ನಾಟಕಗಳನ್ನು ಪ್ರದರ್ಶಿಸಿದರು. ಆದರೆ ದುರದೃಷ್ಟಕ್ಕೆ ಚೆನ್ನಾಗಿ ನಡೆಯುತ್ತಿದ್ದ ನಾಟಕ ಮಂಡಳಿ ಆರ್ಥಿಕವಾಗಿ ನಷ್ಟಕ್ಕೊಳಗಾಗಿ ಮುಚ್ಚಲ್ಪಟ್ಟಿತು. ಆದರೂ ಧೃತಿಗೆಡದೆ ಬದುಕು ಸಾಗಿಸಬೇಕಾದ ಅನಿವಾರ್ಯತೆ ಇದ್ದುದರಿಂದ ಎಡತೊರೆಯ ನಾಟಕ ಮಂಡಳಿ, ಹಿರಣ್ಣಯ್ಯನವರ ಮಿತ್ರ ಮಂಡಳಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗೂಂಡಾ ಜೋಯಿಸರ ಮಂಡಳಿ, ಗುಬ್ಬಿಯ ಚನ್ನಬಸವೇಶ್ವರ ನಾಟಕ ಮಂಡಳಿಗಳಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತ ತಮ್ಮ ಆರಂಭದ ೨೭ ವರ್ಷಗಳ ಕಾಲ ಕಲೆಯೇ ನನ್ನ ಉಸಿರು ಎಂದು ಬದುಕಿದರು.

ಆದರೆ ಕಾಲ ಒಂದೇ ರೀತಿ ಇರುವುದಿಲ್ಲ. ಬದಲಾಗುತ್ತಲೇ ಇತ್ತು. ಒಂದು ದಿನ ಮೈಸೂರಿನ ಟೌನ್ ಹಾಲ್ ನಲ್ಲಿ ಬೇಡರ ಕಣ್ಣಪ್ಪ ನಾಟಕದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಲ್ಲಿ ಆಗಿನ ಕಾಲದ ಖ್ಯಾತ ನಿರ್ದೇಶಕ ಎಚ್.ಎಲ್.ಎನ್ ಸಿಂಹವರು ಡಾ.ರಾಜಕುಮಾರ, ನರಸಿಂಹರಾಜು ಮತ್ತು ಜಿ.ವಿ.ಅಯ್ಯರ್ ಅಭಿನಯ ನೋಡಿ ಮೆಚ್ಚಿ ಮೂವರನ್ನು ತಮ್ಮ ಮುಂದಿನ ಚಿತ್ರ ಬೇಡರ ಕಣ್ಣಪ್ಪ ಚಿತ್ರಕ್ಕೆ ಆಯ್ಕೆ ಮಾಡಲು ನಿರ್ಧರಿಸಿದರು. ಈ ಮೂವರು ಕಲಾವಿದರು ಮದ್ರಾಸ್ ಗೆ ಹೋಗಿ ಸ್ಕ್ರೀನ್ ಟೆಸ್ಟ್ ನೀಡಿ ಚಿತ್ರದಲ್ಲಿ ಅಭಿನಯಿಸಲು ಆಯ್ಕೆಯಾದರು. ಇಲ್ಲಿಂದ ನರಸಿಂಹರಾಜು ಹಿಂತಿರುಗಿ ನೋಡಲಿಲ್ಲ. ತಮ್ಮ ವಿಶಿಷ್ಟ ಅಭಿನಯದಿಂದ ಹಾಸ್ಯ ನಟನಾಗಿ ರೂಪುಗೊಂಡು ರಂಗಭೂಮಿಯಲ್ಲಿ ಪಡೆದ ಅನುಭವ ಇವರಿಗೆ ಸಿನಿಮಾ ಜಗತ್ತಿನಲ್ಲಿ ಪ್ರಯೋಜನಕ್ಕೆ  ಬಂದಿತು. ಡಾ.ರಾಜಕುಮಾರ ಜೊತೆಗೆ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರೂ ಕೂಡ  ಕಲಾಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ರಂಗಭೂಮಿಯನ್ನು ತಮ್ಮ ಜೀವಿತಾವಧಿಯವರೆಗೂ ಎಂದಿಗೂ ಕಡೆಗಣಿಸಲಿಲ್ವ, ಮರೆಯಲಿಲ್ಲ. ಚಿತ್ರ ರಂಗದ ಪ್ರವೇಶಕ್ಕೆ ನಿಮಿತ್ತವಾದ ಬೇಡರ ಕಣ್ಣಪ್ಪ ಚಿತ್ರದಲ್ಲಿನ ಅರ್ಚಕನ ಪುತ್ರ ಕಾಶಿಯ ಪಾತ್ರ ಅವರಿಗೆ ತುಂಬಾ ಸರಳವಾಗಿತ್ತು. ಹೇಗೆಂದರೆ ಇದೇ  ಹೆಸರಿನ ನಾಟಕದಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರದರ್ಶನಗಳಲ್ಲಿ ಕಾಶಿಯ ಪಾತ್ರ ನಿರ್ವಹಿಸಿದ್ದರು. ಕಳೆದ ಶತಮಾನದ ೫,೬,೭ ನೇ ದಶಕಗಳ ಅವಧಿ ಕನ್ನಡ ಚಿತ್ರರಂಗದ ಸುವರ್ಣ ಯುಗದ ಆರಂಭದ ಮುನ್ಸೂಚನೆ ಯಾಗಿತ್ತು. ಇದೆ ಅವಧಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ರೀತಿಯ ಪ್ರಯೋಗ, ಉತ್ತಮ ಕಥೆಗಳನ್ನು ಹೊಂದಿದ್ದ ಚಿತ್ರಗಳು ತೆರೆ ಕಂಡಿವೆ.

(ಮುಂದುವರೆಯುವುದು)

ಲೇಖಕರು : ಶ್ರೀ ಸಂದೀಪ್ ಜೋಶಿ

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply