“ನಾನೇ ರಾಜಕುಮಾರ”
1972ರ ಈ ಚಿತ್ರ ಸಾಕಷ್ಟು ಊ…ದ್ದ… ದ ಚಿತ್ರ. ರಾಶಿ ಸೋದರರ ನಿರ್ದೇಶನ. ಮುಂದೊಂದು ದಿನ ಅವರು ಅಮಿತಾಭ್ ತ್ರಿಪಾತ್ರದ ‘ಮಹಾನ್’ ಕೂಡ ನಿರ್ದೇಶಿಸಿದರು. (ಶಂಕರ್ ಗುರು ಹಿಂದಿ ವರ್ಷನ್).
ರಾಜಣ್ಣ (ರಾಜ್‍ಕುಮಾರ್) ಬಳಿ ಸಿಕ್ಕಾಪಟ್ಟೆ ಆಸ್ತಿ, ಅರಮನೆಯಂಥ (ನಿಜವಾಗಿ ನಮ್ಮ ಮೈಸೂರು ರಾಜರ ಅರಮನೆಯಲ್ಲೇ ಶೂಟ್ ಮಾಡಿದ್ದಾರೆ) ಮನೆ, ಆಳುಕಾಳು ಹೇರಳ. ಆದರೆ ಒಬ್ಬೊಂಟಿಗ. ಕೇವಲ ಅವನ ಕೇರ್‍ಟೇಕರ್ ದಾಸಪ್ಪ (ಬಾಲಕೃಷ್ಣ ಮತ್ತೊಮ್ಮೆ ಒಳ್ಳೆಯ ಪಾತ್ರದಲ್ಲಿ!) ಜೊತೆಯಲ್ಲಿರುತ್ತಾನೆ. ಗೋಡೆಯ ಮೇಲೆ ವಯಸ್ಸಾಗಿರುವ, ಪೇಟ ಹಾಕಿಕೊಂಡ ಅಣ್ಣಾವ್ರ ಪಟ – ಅದು ರಾಜಣ್ಣನ ಅಪ್ಪ. ಮೈನಾವತಿಗೆ ವಯಸ್ಸಾದಂತಿತ್ತು ಅಮ್ಮನ ಪಟ.
ಬಾಯಿ ಸಪ್ಪೆಗೆ ಆಳಿನ ಮನೆಯ ಮುದ್ದೆ ಉಪ್ಪೆಸರು ತಿನ್ನಲು ಕೂಡ ದಾಸಪ್ಪ ಬಿಡದಿದ್ದಾಗ ಮೆಲ್ಲನೆ ಒಂದು ದಿನ ಹಳ್ಳಿಯೊಂದಕ್ಕೆ ಜಾತ್ರೆಗೆ ಹೋಗಿ, ಗಾಡಿಯಲ್ಲಿ ನಿದ್ದೆ ಮಾಡಿ, ಬೇರೆಲ್ಲೋ ಬಂದು ಹಸಿವಿಗೆ ಸೀಬೆಹಣ್ಣು ಕಿತ್ತು ತಿನ್ನುವಾಗ ಅಲ್ಲಿಗೆ ಬೆಳ್ಳಿ(ಬೆಡಗಿ ಭಾರತಿ) ಬರುತ್ತಾಳೆ. ಅದು ಹೇಗೋ ಅವನನ್ನು ಅನಾಥ ಎಂದು ತಿಳಿದು ಮನೆಗೆ ಒಯ್ಯುತ್ತಾಳೆ. ಅವರ ಜೊತೆಗೆ ಮರಿ (ಜಯರಾಂ. ಈತ ಬಿ.ಇ.ಎಲ್.ನಲ್ಲಿ ದೊಡ್ಡ ಅಧಿಕಾರಿ ಆಗಿದ್ದವರು. ನಟನೆ ಅವರ ಹಾಬಿ) ಇರುತ್ತಾನೆ. ಹೀಗೇ ರಾಜಣ್ಣ ಬೆಳ್ಳಿ ಪ್ರೇಮವು ನಡೆಯುವಾಗ, ಅವರಿಬ್ಬರೂ ‘ನೀ ತಂದ ಕಾಣಿಕೆ ನಗೆಹೂವ ಮಾಲಿಕೆ’ ಅಂತ ಪಿಬಿಎಸ್, ಎಸ್‍ಜಾನಕಿ ದನಿಯಲ್ಲಿ ಹಾಡುವಾಗ ಹಳ್ಳಿಯವರು ಪಂಚಾಯತಿ ನಡೆಸಿ ಅವರಿಬ್ಬರಿಗೂ ಮದುವೆ ಮಾಡಿಬಿಡುತ್ತಾರೆ.
ರಾಜಣ್ಣ ಬೆಳ್ಳಿಯನ್ನು ಎತ್ತಿನ ಗಾಡಿಯಲ್ಲಿ ತನ್ನ (ಅರ)ಮನೆಗೆ ಕರೆತರುವಾಗ ದಾರಿಯಲ್ಲಿ ‘ನಡೆ ನಡೆ ನಡೆ ನಡೆ ನಡೆ ಮನವೆ ನಿಜಜೀವನದ ಕಡೆಗೆ’ ಎಂದು ಪಿಬಿಎಸ್ ಧ್ವನಿಯಲ್ಲಿ ಹಾಡುತ್ತಾನೆ.
ದಾಸಪ್ಪನಿಗೆ ಈ ಬೆರಗುಗಣ್ಣಿನ ಬೆಡಗಿ ಬಿಲ್‍ಕುಲ್ ಹಿಡಿಸುವುದಿಲ್ಲ. ಅಯ್ಯಯ್ಯೋ ಬಾಲಣ್ಣ ಕುತಂತ್ರ ಆರಂಭಿಸಿದರು ಈ ಹುಡುಗೀನ ಓಡಿಸೋಕ್ಕೆ ಅನ್ಕೊಳ್ಳೋ ಹೊತ್ತಿಗೆ ಬೆಳ್ಳಿಯ ನಡತೆ, ಗುಣ ಮೆಚ್ಚಿ ಅವಳನ್ನು ಮನಸಾರೆ
ಒಪ್ಪಿಕೊಳ್ಳುತ್ತಾನೆ. ಮೊದಲೊಮ್ಮೆ ನೆಂಟರಿಂದ ಹೀಯಾಳಿಸಲ್ಪಟ್ಟ ಬೆಳ್ಳಿ ಈಗ ಚಂದ್ರಾ ಆಗಿ ಅಂಜಲಿಯ ಸ್ವರದಲ್ಲಿ ‘ಗಂಧದ ನೆರಿಗ್ಯೋಳೆ’ ಅಂತ ಹಾಡಿ, ತಕ್ಷಣವೇ ‘ಏನು ಕುರುಡು ಭಾವನೆ’ ಎಂದು ಎಸ್‍ಜಾನಕಿ ಸ್ವರದಲ್ಲಿ ಹಾಡಿ ಹೀಯಾಳಿಸಿದ ನೆಂಟರ ಮುಖದಲ್ಲಿ ನೀರಿಳಿಸುತ್ತಾಳೆ.
ದಾಸಪ್ಪ ಅವರಿಬ್ಬರನ್ನೂ ಮನೆದೇವರನ್ನು ನೋಡಲು ಕಳಿಸುತ್ತಾನೆ.
ಆದರೆ ರೈಲಿಗೆ ಅಪಘಾತ ಆಗುತ್ತದೆ.
ಸುಮಾರು ಒಂದೂವರೆ ಗಂಟೆಯ ನಂತರ ಕತೆಯಲ್ಲಿ ಒಂದು ಟ್ವಿಸ್ಟು. ದಾಸಪ್ಪ ಬರುವ ಮುಂಚೆ ಅಪಘಾತಕ್ಕೀಡಾದವರನ್ನು ನೋಡಲು ಬಂದ ಅಶ್ವತ್ಥ್ ಮತ್ತು ಪಂಢರೀಬಾಯಿ ದಂಪತಿ, ರಾಜಣ್ಣನನ್ನು ಅವರ ಮಗ ಕುಮಾರ್ ಎಂದು ಬಗೆದು ಒಯ್ದುಬಿಡುತ್ತಾರೆ.
ಬೆಳ್ಳಿ (ಈಗ ಅವಳ ಹೆಸರು ಚಂದ್ರ ಎಂದು ದಾಸಪ್ಪ ನಾಮಕರಣ ಮಾಡಿರುತ್ತಾನೆ)ಯನ್ನು ಕರೆದೊಯ್ಯಲು ಬಂದ ದಾಸಪ್ಪನಿಗೆ ರಾಜಣ್ಣ ‘ಜಸ್ಟ್ ಮಿಸ್ಸು’.
ರಾಜಣ್ಣನಿಗೆ ಅಮ್ನೀಸಿಯಾ. ಅಶ್ವತ್ಥ್ ಮತ್ತು ಪಂಢರಿಬಾಯಿ ತನ್ನ ತಾಯ್ತಂದೆಯರೆಂದು ನಂಬುತ್ತಾನೆ. ಏಕೆಂದರೆ ಅವನಿಗೆ ಹಳೆಯದು ಮರೆತಿರುತ್ತದೆ. ಅವನನ್ನು ಮದುವೆಯಾಗಲು ಬಂದ ಆರ್.ಟಿ.ರಮಾ ಮತ್ತು ಅವಳ ತಂದೆ ಲೋಕನಾಥ್ (ಸಿಸ್ಟಂ ಅನ್ನೋ ಪದಾನ ನೂರಾರು ಸಲ ಆಡ್ತಾರೆ ಈವಯ್ಯ)ಇವರ ಮನೆಯಲ್ಲೇ ಝಾಂಡಾ ಹೂಡುತ್ತಾರೆ. ಮನೆಯ ಆಳು ವೆಂಕಾಜಿ(ಶಿವರಾಂ) ಅವರ ಕೇರ್ ಟೇಕರ್.
ಕುಮಾರ್ ಎನ್ನುವ ರಾಜಣ್ಣನ ಹಂಶಕಲ್ ದುಷ್ಟ. ಹೆಣ್ಣುಮಕ್ಕಳಿಗೆ ಮೋಸ ಮಾಡಿರುತ್ತಾನೆ. ಸಾಕಷ್ಟು ಸಾಲ ಮಾಡಿರುತ್ತಾನೆ. ಜಯಕುಮಾರಿ ಎಂಬ ಕ್ಯಾಬರೆ ಡಾನ್ಸರ್ ಮತ್ತು ಶಕ್ತಿಪ್ರಸಾದ್ ರಾಜಣ್ಣನನ್ನು ಕುಮಾರ್ ಎಂದು ಕ್ಲಬ್ಬಿಗೆ ಒಯ್ಯುತ್ತಾರೆ. ಎಲ್ ಆರ್ ಈಶ್ವರಿಯ ಹಾಡಿದೆ. ‘ಯಾ…ರು… ನೀ…ಯಾರು’
ಬೆಳ್ಳಿ ಗಂಡನನ್ನು ಉಳಿಸಿಕೊಳ್ಳಲು ಅವನನ್ನು ಹಳ್ಳಿಗೆ ಒಯ್ಯುತ್ತಾಳೆ. ಆಗ ನಡೆದ ಒಂದು ಘಟನೆಯಿಂದ ಮತ್ತೆ ರಾಜಣ್ಣನ ನೆನಪು ಮರುಕಳಿಸುತ್ತದೆ.
ರಾಜ್‍ಕುಮಾರ್ ರಾಜಣ್ಣನಾಗಿ ಅವರ ಫ್ರಸ್ಟ್ರೇಷನ್, ಹಳ್ಳಿಯಲ್ಲಿ ಅಚ್ಚರಿ, ನಂತರ ಫೈಟು, ಬೆಳ್ಳಿಯ ಜೊತೆ ಲವ್ವು, ದಾಸಪ್ಪನ ಜೊತೆ ಬೆಳ್ಳಿಗಾಗಿ ಕನ್‍ಫ್ರಂಟೇಷನ್, ತಾನು ಕುಮಾರ್ ಎಂದು ನಂಬುವುದು ಎಲ್ಲವನ್ನೂ ಚೆಂದ ನಟಿಸಿದ್ದಾರೆ. ಕುಮಾರ್ ಪಾತ್ರದಲ್ಲಿ ಕೇವಲ ಡೆತ್ ಬೆಡ್ ಮೇಲೆ ಕೆಲವು ಪಶ್ಚಾತ್ತಾಪದ ಡಯಲಾಗ್ ಮಾತ್ರ.
ಭಾರತಿಯವರಿಗೂ ಒಳ್ಳೆಯ ರೇಂಜ್ ಇರೋ ಪಾತ್ರ. ಬಾಲಣ್ಣನಿಗೆ ಬಾಲಣ್ಣನೇ ಸಾಟಿ. ಪಾತ್ರವಾವುದಾದರೇನು? ತನ್ನ ಛಾಪು ಮೂಡಿಸಿಬಿಡುವ ಅದ್ಭುತ ನಟ.
ಎಸ್‍ಜಾನಕಿ ಪ್ಯಾಥೋಸ್‍ನಲ್ಲಿ ‘ನೀ ತಂದ ಕಾಣಿಕೆ’ ಮತ್ತೊಮ್ಮೆ ಹಾಡಿದ್ದಾರೆ.
ಡಯಲಾಗುಗಳು ಸುಂದರ.
ರಾಜ್ಯಪ್ರಶಸ್ತಿ ಪಡೆದ ಚಿತ್ರ.
ಲೇಖಕರು: ಯತಿರಾಜ್ ವೀರಾಂಬುಧಿ