22 ವರ್ಷಗಳಿಂದ ಭಾರತಾಂಬೆಯ ಸೇವೆ ಸಲ್ಲಿಸುತ್ತಿರುವ ವೀರಯೋಧ. ವಿಶ್ವವಿಖ್ಯಾತ ಅಟ್ಟಾರಿ – ವಾಘಾ ಗಡಿಯಲ್ಲಿ ಇರುವ ಏಕೈಕ ಕನ್ನಡಿಗ.

ವೀರಯೋಧ ಶಿವಣ್ಣ

22 ವರ್ಷಗಳಿಂದ ಭಾರತಾಂಬೆಯ ಸೇವೆ ಸಲ್ಲಿಸುತ್ತಿರುವ ವೀರಯೋಧ. ವಿಶ್ವವಿಖ್ಯಾತ ಅಟ್ಟಾರಿ – ವಾಘಾ ಗಡಿಯಲ್ಲಿ ಇರುವ ಏಕೈಕ ಕನ್ನಡಿಗ.

– ಟಿಎನ್ನೆಸ್

ಯೋಧರಿಗೊಂದು ನಮನ ಅಂಕಣದ ಮೂರನೆಯ ಲೇಖನದಲ್ಲಿ ಇಂದಿನ ವೀರಯೋಧ – ಶಿವಣ್ಣ ಮಾಯಸಂದ್ರ. ಹುಟ್ಟಿದ್ದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ. ಮಾಯಸಂದ್ರ ಅಂದ್ರೆ ಗೊತ್ತಲ್ವಾ? ನವರಸನಾಯಕ ಜಗ್ಗೇಶ್ ಅವರ ಹುಟ್ಟೂರು. ದಿವಂಗತ ಕೆಂಪನಂಜಯ್ಯ ಶ್ರೀಮತಿ ಜಯಮ್ಮನವರ ಆರನೇ ಮಗನಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾಯಸಂದ್ರದಲ್ಲಿ ಮುಗಿಸಿ, ಸರ್ಕಾರಿ ಹಾಸ್ಟೆಲ್ ನಲ್ಲಿದ್ದುಕೊಂಡೇ ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾಭ್ಯಾಸ ಮುಗಿಸಿದರು. ಪಿಯುಸಿ ನಂತರ ಇವರ ಸ್ನೇಹಿತರೆಲ್ಲರೂ ಕಾಲೇಜಿನ ಅರ್ಜಿಗಳನ್ನು ತುಂಬುತ್ತಿದ್ದರೆ, ಶಿವಣ್ಣ ಭಾರತೀಯ ಸೇನೆ ಸೇರುವ ಅರ್ಜಿಯನ್ನು ತುಂಬುತ್ತಿದ್ದರು. ಹೌದು ತಮ್ಮ ಹತ್ತೊಂಭತ್ತನೇ ವಯಸ್ಸಿಗಾಗಲೇ ಶಿವಣ್ಣ ಸೇನೆಯ ಕ್ಯಾಪ್ ಅನ್ನು ಧರಿಸಿದ್ದರು.

ಇವರು ಸೇನೆ ಸೇರಿದ ಹಿಂದೆಯೂ ಒಂದು ಇಂಟೆರೆಸ್ಟಿಂಗ್ ಕತೆ ಇದೆ. 1999 ರಲ್ಲಿ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ವೀರಾವೇಶದಿಂದ ಹೋರಾಡಿ ಹುತಾತ್ಮರಾದ ವೀರ ಸೈನುಕರ ಸುದ್ದಿಗಳನ್ನು ಪ್ರತಿ ದಿನ ಪತ್ರಿಕೆಗಳಲ್ಲಿ ಓದುತ್ತಾ, ಏನಾದರಾಗಲಿ, ಸೈನ್ಯ ಸೇರಿ ಪಾಕಿಸ್ತಾನದ ಉಗ್ರರನ್ನು ಹೊಡೆದೋಡಿಸಲೇಬೇಕು ಪಣತೊಟ್ಟರು. ಇಂಟರ್ನೆಟ್ ಅಷ್ಟಾಗಿ ಇಲ್ಲದ ಆ ಕಾಲದಲ್ಲಿ ಮಾಹಿತಿ ಪಡೆಯುವುದು ಎಷ್ಟು ಕಷ್ಟವಿತ್ತೆಂದು ನಮಗೆಲ್ಲಾ ಗೊತ್ತು. ಆದರೂ ಅವರಿವರ ಕೈಕಾಲು ಹಿಡಿದು ಸೇನೆ ಸೇರುವ ಅರ್ಜಿಯನ್ನು ತುಂಬಿಸಿ ಕಳಿಸೇಬಿಟ್ಟರು. ನಮ್ಮ ಮಗ ಕಣ್ಣೆದುರೇ ಕೂಲಿ-ನಾಲಿ ಮಾಡಿಕೊಂಡಿರಲಿ. ದೂರದಲ್ಲಿ ಎಲ್ಲೋ ಇರುವುದು ಬೇಡ ಎಂದು ಇವರ ಅಪ್ಪ-ಅಮ್ಮ ಪ್ರಾರ್ಥಿಸುತ್ತಿದ್ದರೆ, ನನಗೆ ಹೇಗಾದರೂ ಸೇನೆಯಲ್ಲಿ ಕರೆ ಬರಲಪ್ಪಾ ದೇವ್ರೇ; ದುಷ್ಟರ ಸಂಹಾರ ಮಾಡುವ ಅವಕಾಶ ಸಿಗಲಿ ಎಂದು ಇವರ ಇಷ್ಟದೇವರಾದ ಆದಿಚುಂಚನಗಿರಿಯ ಶ್ರೀ ಕಾಲಭೈರವೇಶ್ವರನಲ್ಲಿ ಶಿವಣ್ಣನವರು ಪ್ರಾರ್ಥಿಸುತ್ತಿದ್ದರು. ಕಡೆಗೂ ಆ ಕಾಲಭೈರವೇಶ್ವರ ತಥಾಸ್ತು ಎಂದಿದ್ದು ಶಿವಣ್ಣನವರಿಗೇನೇ. ಹೀಗೆ ತಮ್ಮ ಹತ್ತೊಂಭತ್ತನೇ ವಯಸ್ಸಿಗೇ ಗಡಿ ಭದ್ರತಾ ಪಡೆಯ ಯೋಧನಾಗಿ ಟ್ರೈನಿಂಗಿಗೆ ಪಂಜಾಬ್ ರೈಲು ಏರಿದ್ದರು ಶಿವಣ್ಣ.

ಮೊದಮೊದಲು ಸೇನೆ ಸೇರುವುದು ಬೇಡ ಎಂದು ಇವರ ತಂದೆ-ತಾಯಿ-ಅಣ್ಣಂದಿರಿಗೆ ಅನಿಸಿತ್ತಾದರೂ, ದೇಶಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಪೂರ್ವಜನ್ಮದ ಪುಣ್ಯದ ಫಲ ಇದು. ನಾವೇಕೆ ಬೇಡ ಅನ್ನಬೇಕು. ಎಲ್ಲ ಮಕ್ಕಳೂ ತಮ್ಮ ಅಪ್ಪ-ಅಮ್ಮನ ಕ್ಷೇಮವನ್ನು ಮಾತ್ರ ನೋಡಿಕೊಂಡರೆ ನನ್ನ ಮಗ ಕೋಟ್ಯಂತರ ಅಪ್ಪ-ಅಮ್ಮಂದಿರ ಕ್ಷೇಮ ನೋಡಿಕೊಳ್ಳಲು ಹೊರಟಿದ್ದಾನೆ. ಎಷ್ಟು ಜನ ತಂದೆ-ತಾಯಿಗೆ ಇಂತಹ ಮಗನಿರಲು ಸಾಧ್ಯ? ಧೈರ್ಯವಾಗಿ ಹೋಗಿ ಬಾ ಕಂದ. ನಮ್ಮ ಊರು,ದೇಶಕ್ಕೆ ಕೀರ್ತಿತರುವ ಮಗನಾಗಿ ವಾಪಾಸ್ ಬಾ ಎಂದು ಹರಸಿ ಕಳಿಸಿಕೊಟ್ಟರು. ಆ ತಂದೆ ತಾಯಿಯ ಆಶೀರ್ವಾದ ವೃಥಾ ಆಗಲಿಲ್ಲ. ಕೆಲವೇ ವರ್ಷಗಳಲ್ಲಿ ಶಿವಣ್ಣ ಎಷ್ಟು ಬೆಳೆದರೆಂದರೆ ಅವರ ಹುಟ್ಟೂರು ಮಾಯಸಂದ್ರದಲ್ಲಿ ಊರಿನ ಪ್ರಮುಖ ವೃತ್ತವೊಂದಕ್ಕೆ ಇವರ ಹೆಸರಿಟ್ಟು, ಊರ ಹಿರಿಯರೆಲ್ಲ ಸೇರಿ ವೀರಯೋಧ ಎಂದು ಪ್ರಶಸ್ತಿ ಕೊಟ್ಟು ಸನ್ಮಾನಿಸುವಷ್ಟು ಎತ್ತರಕ್ಕೆ ಬೆಳೆದುಬಿಟ್ಟರು.

ಪಂಜಾಬ್ ನಲ್ಲಿ ಶಿವಣ್ಣನವರ ಟ್ರೈನಿಂಗ್ ಶುರುವಾಯ್ತು. ಪಂಜಾಬ್ ವಾತಾವರಣ ತುಂಬಾ ವಿಚಿತ್ರ. ಚಳಿಗಾಲದಲ್ಲಿ ಮೈ ಕೊರೆಯುವ ಚಳಿಯಾದರೆ, ಬೇಸಿಗೆಯಲ್ಲಿ ವಿಪರೀತ ಬಿಸಿಲು. ನನ್ನೊಡನೆ ಫೋನಿನಲ್ಲಿ ಮಾತಾಡುವಾಗ ಶಿವಣ್ಣನವರೇ “ನನ್ನ ಇಡೀ ಜೀವಮಾನದಲ್ಲೇ ಇಷ್ಟು ಚಳಿಯನ್ನು ನಾನು ಮೊದಲು ನೋಡಿದ್ದು ಪಂಜಾಬ್ ನಲ್ಲಿ” ಎಂದಿದ್ದರು. ತುಮಕೂರಿನ ವಾತಾವರಣದಲ್ಲಿ ಬೆಳೆದಿದ್ದ ಶಿವಣ್ಣನವರಿಗೆ ಪಂಜಾಬ್ ನ ವಾತಾವರಣಕ್ಕೆ ತಲೆನೋವು ಬರಹತ್ತಿತು. ಒಮ್ಮೊಮ್ಮೆ ತಲೆನೋವಾದರೆ, ಒಮ್ಮೊಮ್ಮೆ ವಾಂತಿ. ಹೀಗೆ ಆದರೆ ಬಹುಶಃ ನಾನು ಊರಿಗೆ ವಾಪಾಸ್ ಹೋಗಬೇಕಾಗುವುದೇನೋ? ಆದರೆ ಯಾವ ಮುಖವಿಟ್ಟುಕೊಂಡು ಊರಿಗೆ ವಾಪಾಸ್ ಹೋಗಲಿ? ಅಪ್ಪ-ಅಮ್ಮನ ಆಶೀರ್ವಾದ ವೃಥಾ ಆಗಲಿಕ್ಕೆ ಬಿಡಬಾರದು. ಏನಾದರಾಗಲಿ, ದೇಹವನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಚಳಿಯಾಗಲಿ, ಮಳೆಯಾಗಲಿ ಸೋಲಬಾರದು. ಟ್ರೈನಿಂಗ್ ಮುಗಿಸಲೇಬೇಕು. ಪಾಕಿಸ್ತಾನದ ಗಡಿಯಲ್ಲಿ ಕನಿಷ್ಠ ಒಂದು ದಿನವಾದರೂ ಸೇವೆ ಸಲ್ಲಿಸಲೇಬೇಕು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ನನ್ನ ಅಣ್ಣ-ತಮ್ಮಂದಿರಿಗೆ ಈ ಮೂಲಕ ಒಂದು ಚಿಕ್ಕ ಗೌರವವನ್ನಾದರೂ ನಾನು ಕೊಡಲೇಬೇಕು ಎಂದು ದೃಢನಿಶ್ಚಯ ಮಾಡಿಕೊಂಡು ಪಂಜಾಬ್ ನ ಪರಿಸ್ಥಿತಿಗೆ ದೇಹವನ್ನು ಅಣಿಯಾಗಿಸಿಕೊಂಡರು. ಅತ್ಯುತ್ತಮ ಗ್ರೇಡ್ ನೊಂದಿಗೆ ಟ್ರೈನಿಂಗ್ ಮುಗಿಸಿ ಮುಂದಿನ ಕರ್ತವ್ಯಕ್ಕೆ ಗುಜರಾತ್ ಕಡೆ ಪ್ರಯಾಣ ಬೆಳೆಸಿದರು.

ಅದೇ ಸಂದರ್ಭದಲ್ಲಿ ಗುಜರಾತ್ ನಲ್ಲಿ ಭೂಕಂಪ ಸಂಭವಿಸಿ ಅಪಾರ ಸಾವು ನೋವು ಸಂಭವಿಸಿತ್ತು ಭೂಕಂಪ ಸಂತ್ರಸ್ಥರ ಸೇವೆ ಮುಗಿಸುವಷ್ಟರಲ್ಲೇ ಗೋಧ್ರಾ ದಂಗೆ ಶುರುವಾಯ್ತು. ಗೋಧ್ರಾ ದಂಗೆಯ ಸಂದರ್ಭದಲ್ಲಿ ಕೂಡ ಕರ್ತವ್ಯ ನಿರ್ವಹಿಸಿದ ಕೀರ್ತಿ ಶಿವಣ್ಣನವರದ್ದು.

ಗುಜರಾತಿನ ಸೇವೆಯ ನಂತರ ಶಿವಣ್ಣನವರ ಪಯಣ ನೇರ ಈಶಾನ್ಯ ಭಾರತದೆಡೆಗೆ. ತ್ರಿಪುರಾದ ಗಡಿ ರಕ್ಷಣೆಯ ಭಾರ ಇವರ ಹೆಗಲಿಗೆ ಬಿತ್ತು. ಆ ಸಮಯದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಮಾವೋ ಉಗ್ರವಾದಿಗಳ ಅಟ್ಟಹಾಸ ಮುಗಿಲು ಮುಟ್ಟಿತ್ತು. ಎರಡು ಬಾರಿ ಉಗ್ರವಾದಿಗಳ ದಾಳಿಯಿಂದಾಗಿ ಇವರ ತುಕಡಿಯ ಹತ್ತಕ್ಕೂ ಹೆಚ್ಚು ಜನ ಸೈನಿಕರು ಹುತಾತ್ಮರಾದರು. ಕೇವಲ ಕೂದಲೆಳೆ ಅಂತರದಲ್ಲಿ ಇವರು ಬಚಾವಾದರು. ಆದರೂ ಎದೆಗುಂದದೆ ಉಗ್ರವಾದಿಗಳ ಎದೆಗೆ ಬಂದೂಕು ಗುರಿ ಇಟ್ಟು ನಿಲ್ಲುವುದರಿಂದ ಮಾತ್ರ ಹಿಂದೆ ಸರಿಯಲಿಲ್ಲ. ಆಗ ಈಶಾನ್ಯ ರಾಜ್ಯದ ಗಡಿಗಳಲ್ಲಿ ಸರಿಯಾದ ರಸ್ತೆ, ಮೂಲಭೂತ ಸೌಕರ್ಯಗಳು ಅಷ್ಟಾಗಿ ಅಭಿವೃದ್ಧಿ ಹೊಂದಿರಲಿಲ್ಲ. ಹೆಲಿಕಾಪ್ಟರ್ ಮುಖಾಂತರ ತಿಂಗಳಿಗೊಮ್ಮೆ ಆಹಾರ ಪದಾರ್ಥಗಳನ್ನು ಮೇಲಿಂದ ಡ್ರಾಪ್ ಮಾಡಲಾಗುತ್ತಿತ್ತು.ಅಂತಹ ಕಠಿಣ ಪರಿಸ್ಥಿತಿಯಲ್ಲೂ ಉಗ್ರಗಾಮಿಗಳೆಡೆಗೆ ತಮ್ಮ ಬಂದೂಕನ್ನು ಗುರಿಯಿಟ್ಟು ಅಚಲವಾಗಿ ನಿಂತರು. ತ್ರಿಪುರಾದ ನಂತರ ಅಸ್ಸಾಂ, ಪಶ್ಚಿಮಬಂಗಾಳ, ನಕ್ಸಲರ ಅಟ್ಟಹಾಸ ಹೆಚ್ಚಾಗಿದ್ದ ಛತ್ತೀಸ್ ಘಡದ ಅಭಯಾರಣ್ಯದಲ್ಲಿ ನಕ್ಸಲ್ ನಿಗ್ರಹ ಕಾರ್ಯಪಡೆಗೆ ಇವರನ್ನು ನಿಯೋಜಿಸಲಾಯ್ತು. ಅಲ್ಲೂ ಕೂಡ ಸುಸೂತ್ರವಾಗಿ 2 ವರ್ಷಗಳ ಕಠಿಣ ಸೇವೆ ಮುಗಿಸಿ ನಂತರ 2019 ರಿಂದ ಪಂಜಾಬ್ ನ ವಿಶ್ವವಿಖ್ಯಾತ ಅಟ್ಟಾರಿ-ವಾಘಾ ಗಡಿಯಲ್ಲಿ ಗಾರ್ಡ್ ಕಮಾಂಡರ್ ಆಗಿ ಸೇವೆ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. ಅಂದಹಾಗೆ ಭಾರತ-ಪಾಕಿಸ್ತಾನ ನಡುವಿನ ಅಟ್ಟಾರಿ-ವಾಘಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವವರಲ್ಲಿ ಇವರೊಬ್ಬರೇ ಕನ್ನಡಿಗರು. ಇವರ ಹದ್ದಿನ ಕಣ್ಣು ತಪ್ಪಿಸಿಕೊಂಡು ಒಂದು ಇರುವೆ ಕೂಡ ಒಳನುಸುಳದಂತೆ ಅಚಲವಾಗಿ ನಿಂತಿದ್ದಾರೆ. ಪಾಕಿಸ್ತಾನದಿಂದ ಭಾರತಕ್ಕೆ ಒಂದು ಇರುವೆ ಬರಬೇಕಾದರೂ ಅದಕ್ಕೆ ಶಿವಣ್ಣನವರ ಅಪ್ಪಣೆ ಬೇಕು ಎಂಬಂತೆ ಹಗಲಿರುಳೂ ಕಾವಲು ಕಾಯುತ್ತಿದ್ದಾರೆ ಕನ್ನಡದ ಈ ಹೆಮ್ಮೆಯ ಕುವರ. ಇವರ ದೇಶಸೇವೆ ಹೀಗೆಯೇ ನಿರಂತರ ಸಾಗಲಿ. ತಾಯಿ ಭಾರತಾಂಬೆ ಇವರಿಗೆ ಸಕಲೈಶ್ವರ್ಯ ನೀಡಲಿ ಎಂಬುದೇ ನನ್ನ ಪ್ರಾರ್ಥನೆ.

ಅಮೆರಿಕದಲ್ಲೂ ಸೇವೆ ಸಲ್ಲಿಸಿದ ಹೆಗ್ಗಳಿಕೆ:

ಭಾರತವಷ್ಟೇ ಅಲ್ಲದೆ ದೂರದ ಅಮೆರಿಕಾದಲ್ಲೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು. 2014 ರಲ್ಲಿ ವಿಶ್ವಸಂಸ್ಥೆಯ ಸೇನಾ ಪಡೆಗೆ ಆಯ್ಕೆಯಾಗಿ 1ವರ್ಷ ಕಾಲ ಅಮೇರಿಕಾದ ಸಮೀಪವಿರುವ ಹೈತಿ ಎಂಬ ದೇಶದಲ್ಲಿ 29 ರಾಷ್ಟ್ರಗಳ ಸೇನೆಗಳೊಂದಿಗೆ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರ್ಯ ನಿರ್ವಹಿಸಿದ್ದಾರೆ. ಮೂರು ಲಕ್ಷ ಜನ ಇರುವ ಪಡೆಯಿಂದ ಆಯ್ಕೆ ಮಾಡಿದ 140 ಜನ ಸೈನಿಕರಲ್ಲಿ ಶಿವಣ್ಣ ಒಬ್ಬರು ಎಂದರೆ ಇವರ ಸಾಮರ್ಥ್ಯ ಎಷ್ಟು ಎಂದು ಊಹಿಸಿಕೊಳ್ಳಿ. ಅಮೇರಿಕಾದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಮೆಚ್ಚಿ “ವಿಶ್ವಶಾಂತಿ ಸೇನಾ ಪದಕ” ವನ್ನು ಕೊಟ್ಟು ವಿಶ್ವ ಸಂಸ್ಥೆ ಇವರನ್ನು ಗೌರವಿಸಿದೆ.

ಪ್ರಶಸ್ತಿಗಳ ಸರದಾರ:

ಇವರು ಪಡೆದ ಪದಕಗಳು, ಪ್ರಶಸ್ತಿಗಳಂತೂ ಲೆಕ್ಕವಿಲ್ಲದಷ್ಟು.

1) ಆಪರೇಷನ್ ಪರಾಕ್ರಮ ಪದಕ

2) ಕಠಿಣ ಸೇವಾ ಪದಕ

3) ಸ್ವರ್ಣಜಯಂತಿ ಪದಕ

4) ವಿಶ್ವಶಾಂತಿ ಸೇನಾ ಪದಕ

ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಹತ್ತಾರು ಪ್ರಶಸ್ತಿಗಳನ್ನು ನೀಡಿ ಇವರನ್ನು ಗೌರವಿಸಿವೆ. ಇವರ ಬಗ್ಗೆ ದೇಶದ ಪತ್ರಿಕೆಗಳಲ್ಲಿ ಅನೇಕ ಲೇಖನಗಳು, ಟೀವಿಯಲ್ಲಿ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಿವೆ. ಇವರ ಹುಟ್ಟೂರು ಮಾಯಸಂದ್ರದಲ್ಲಿ ಪ್ರಮುಖ ವೃತ್ತವೊಂದಕ್ಕೆ “ಯೋಧ ಶಿವಣ್ಣ ವೃತ್ತ” ಎಂದು ಹೆಸರಿಟ್ಟು ಇವರನ್ನು ಗೌರವಿಸಿದೆ. ಊರಿಗೆ ಇವರನ್ನು ಆಮಂತ್ರಿಸಿ, ಊರಿನ ಹಿರಿಯರೆಲ್ಲ ಸೇರಿ “ವೀರಯೋಧ” ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ.

ವಿಂಗ್ ಕಮ್ಯಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ಬರಮಾಡಿಕೊಂಡಿದ್ದು: (Statement from shivanna)

ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಪಾಕಿಸ್ತಾನದಲ್ಲಿ ಬಂಧಿಸಲ್ಪಟ್ಟಿದ್ದ ವೀರ ಚಕ್ರ ಪುರಸ್ಕೃತ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನದಿಂದ ಭಾರತಕ್ಕೆ ವಾಪಸ್ ಬಂದಾಗ ಅಟ್ಟಾರಿ ಗಡಿಯಲ್ಲಿ ಅವರನ್ನು ಸ್ವಾಗತ ಮಾಡಿದ್ದು ಕೂಡ ಶಿವಣ್ಣನವರೇ. ಆದಿನದ ಬಗ್ಗೆ ಶಿವಣ್ಣ ಹೇಳುವುದನ್ನು ಅವರ ಮಾತಿನಲ್ಲೇ ಕೇಳಿ:

ಅಭಿನಂದನ್ ರವರು ಪಾಕಿಸ್ತಾನದಿಂದ ಬಿಡುಗಡೆಯಾಗಿ ಬರುವ ದಿನ ಬೆಳಿಗ್ಗೆಯಿಂದಲೇ ದೇಶಭಕ್ತರು ಹಾಗೂ ಅಭಿಮಾನಿಗಳ ಮಹಾಪೂರವೇ ಹರಿದುಬಂದಿತ್ತು. ಜೊತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳು, ಪತ್ರಕರ್ತರು, ಸೇನಾಪಡೆ ಹಾಗೂ ವಾಯುಪಡೆಯ ಹಿರಿಯ ಅಧಿಕಾರಿಗಳ ದಂಡೇ ಅಟ್ಟಾರಿ ಗಡಿಗೆ ಆಗಮಿಸಿತ್ತು. ಅವರನ್ನೆಲ್ಲ ಗಡಿಯಿಂದ 1 ಕಿಲೋ ಮೀಟರ್ ಹಿಂದೆನೇ ತಡೆಯಲಾಗಿತ್ತು. ಪ್ರತಿದಿನ ನಡೆಯುವ ಬೀಟಿಂಗ್ ರಿಟ್ರೀಟ್ ಸೆರಮನಿ ಯನ್ನು ಸಾರ್ವಜನಿಕರಿಗೆ ಇದೇ ಮೊದಲನೇ ಬಾರಿಗೆ ಬಂದ್ ಮಾಡಲಾಗಿತ್ತು. ದೇಶದ ಪ್ರಧಾನಮಂತ್ರಿ ರಕ್ಷಣಾ ಮಂತ್ರಿಗಳಿಗೆ ಕ್ಷಣಕ್ಷಣದ ಮಾಹಿತಿಯನ್ನು ಅಟ್ಟಾರಿ ಗಡಿಯಿಂದ ರವಾನೆ ಮಾಡಲಾಗಿತ್ತು. ಬೆಳಿಗ್ಗೆ ಮಧ್ಯಾಹ್ನ ಸಾಯಂಕಾಲ ವರೆಗೆ ತಾಳ್ಮೆಯಿಂದ ಕಾಯುತ್ತಿದ್ದ ಅಧಿಕಾರಿಗಳಿಗೆ ರಿಲೀಫ್ ನೀಡುವಂತೆ ಕೊನೆಗೂ ರಾತ್ರಿ 9:30 ಕ್ಕೆ ಅಭಿನಂದನ್ ಅವರನ್ನು ವಾಘಾ ಗಡಿಗೆ ಕರೆತರಲಾಯಿತು. ಅಭಿನಂದನ್ ರವರಿಗಾಗಿ ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ಸಿದ್ಧಪಡಿಸಲಾಗಿತ್ತು ಆದರೆ ಸಮಯದ ಅಭಾವದಿಂದ ಅಭಿನಂದನ್ ರವರನ್ನು ನೇರ ದೆಹಲಿಗೆ ಕರೆದೊಯ್ಯಲಾಯಿತು. ಆ ದಿನ ಎಲ್ಲಾ ಜವಾನರ ಮೊಬೈಲ್ ಗಳು ಹಾಗೂ ಕ್ಯಾಮರಾಗಳನ್ನು ಜಮಾ ಮಾಡಿಕೊಳ್ಳಲಾಗಿತ್ತು ಯಾವುದೇ ರೀತಿಯ ಫೋಟೋ / ವೀಡಿಯೋ ಗೆ ಅವಕಾಶ ನೀಡಲಿಲ್ಲ. ಅಭಿನಂದನ್ ರವರು ಭಾರತದ ಗಡಿಗೆ ಪ್ರವೇಶಿಸುತ್ತಿದ್ದಂತೆ ಇಲ್ಲಿದ್ದ ಯೋಧರಿಂದ ಭಾರತ್ ಮಾತಾಕಿ ಜೈ….ಹಿಂದೂಸ್ತಾನ್ ಜಿಂದಾಬಾದ್….. ವಂದೇ ಮಾತರಂ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಸಂಸದ ಪ್ರತಾಪ್ ಸಿಂಹರವರ ಜೊತೆ:

ಮಾರ್ಚ್ 19 ರಂದು ಮೈಸೂರು ಹಾಗೂ ಕೊಡಗಿನ ಜನಪ್ರಿಯ ಸಂಸದರಾದ ಶ್ರೀ ಪ್ರತಾಪ್ ಸಿಂಹರವರು ಅಟ್ಟಾರಿ – ವಾಘಾ ಗಡಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಅಟ್ಟಾರಿ ಗಡಿಯಲ್ಲಿ ಇರುವ ಕನ್ನಡಿಗ ಇವರೊಬ್ಬರೇ ಆಗಿದ್ದರಿಂದ ಪ್ರತಾಪ್ ಸಿಂಹರನ್ನು ಭೇಟಿ ಮಾಡುವ ಆಸೆಯಿಂದಾಗಿ ಅವರ ಬರುವಿಕೆಯನ್ನೇ ಕಾಯುತ್ತಿದ್ದರು. ಸಂಜೆ ಪರೇಡ್ ಟೈಮ್ ನಲ್ಲಿ ಬಂದ ಶ್ರೀ ಪ್ರತಾಪ್ ಸಿಂಹರವರಿಗೆ ಗಡಿ ಬಗ್ಗೆ ಪರಿಚಯ ಮಾಡಿಸಿ ಬಾರ್ಡರ್ ಪಿಲ್ಲರ್ ನಂಬರ್ 102 ರ ಬಳಿ ಕರೆದುಕೊಂಡು ಹೋಗಿ, ಅಟ್ಟಾರಿ ಗಡಿಯ ಬಗ್ಗೆ ಕನ್ನಡದಲ್ಲಿ ಪೂರ್ತಿಯಾಗಿ ವಿವರಿಸಿ ಕೆಲವು ಫೋಟೋಗಳನ್ನ ಸಹ ಇವರೇ ತೆಗೆದರಂತೆ. ನಂತರ ಚಹಾ ಮತ್ತು ಬಿಸ್ಕೇಟ್ ಕುಡಿದು ಹೊರಡುವ ಸಮಯದಲ್ಲಿ ಪ್ರತಾಪ್ ಸಿಂಹ ರವರು “ದೇಶ ಕಾಯುವ ಯೋಧರು ದೇವರಿಗೆ ಸಮಾನ” ಅವರ ಕಾಲಿಗೆ ಬಿದ್ದು ನಮಸ್ಕರಿಸು ಅಂತ ಮಗಳಿಗೆ ಹೇಳಿದರಂತೆ. ಪ್ರತಾಪ್ ಸಿಂಹರ ಆ ಸಂಸ್ಕೃತಿಯನ್ನು ಕಂಡು ನನ್ನ ಕಣ್ಣುಗಳು ಒದ್ದೆಯಾಯಿತು ಎಂದು ಶಿವಣ್ಣನವರು ಭಾವುಕರಾಗಿ ಹೇಳುತ್ತಾರೆ.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply