“Android kunjappan ver 5.25” (ಮಲಯಾಳಂ)

android kunjappan netflix

ಮನುಷ್ಯ ಮತ್ತು ರೋಬಾಟ್… ಇವರಿಬ್ಬರಿಗೂ ಯಾವತ್ತಿಗೂ ಆಗಿಬರುವುದಿಲ್ಲ. ಕಾರಣವೇನೆಂದರೆ ರೋಬಾಟುಗಳಿಗೆ ಭಾವನೆಗಳಿಲ್ಲ ಎಂಬುದಷ್ಟೇ ಅಲ್ಲದೇ, ರೋಬಾಟುಗಳು ನಾವು ಹೇಳುವ ಮಾತಿನ ನಿಗೂಢಾರ್ಥ ತಿಳಿಯದೇ, ಹೇಳಿದ ಮಾತನ್ನು ಮಾತ್ರವೇ ಪಾಲಿಸುತ್ತವೆ ಎನ್ನುವುದು.

ಆದರೆ ಮನುಷ್ಯನೋ…

ಸೃಷ್ಟಿಯ ಏಕೈಕ ಮಾತನಾಡುವ ಪ್ರಾಣಿಯಾಗಿದ್ದರೂ ಏನು ಹೇಳಬೇಕೋ ಅದೊಂದನ್ನು ಬಿಟ್ಟು ಉಳಿದ ಎಲ್ಲವನ್ನೂ ಮಾತನಾಡಿರುತ್ತಾನೆ. ಅವನು/ ಅವಳು ಹುಂ ಎಂದರೆ ಇಲ್ಲ ಎಂದರ್ಥ, ಇಲ್ಲ ಎಂದರೆ ಹೂಂ ಎಂದರ್ಥ. ಒಳ್ಳೆಯದಾಗಲಿ ಅಂತ ಹೇಳಿದರೆ ನಿಜವಾಗಿ ಅದೇ ಅರ್ಥ ಇರುವುದಿಲ್ಲ. ವ್ಯಂಗ್ಯವೂ ಇರಬಹುದು. ಒಟ್ಟಿನಲ್ಲಿ ಸಂದರ್ಭಕ್ಕೆ ತಕ್ಕಂತೆ ಮಾತುಗಳ ಅರ್ಥ ಬದಲಾಗುತ್ತಿರುತ್ತದೆ. ಇದನ್ನು ರೋಬೋಟುಗಳು ಅರ್ಥ ಮಾಡಿಕೊಳ್ಳಲಾರವು.

ಉದಾಹರಣೆಗೆ ಸಾವು ಎಂಬ ಪದಪ್ರಯೋಗ.

ಈ ಪದವನ್ನು ಎಷ್ಟು ಸಲೀಸಾಗಿ ಬಳಸುತ್ತೇವೆ. ಬಿಸಿಲಿಗೆ ಸತ್ತೋದೆ, ಛಳಿಗೆ ಸತ್ತೋದೆ, ಕಾದು ಕಾದು ಸತ್ತೋದೆ ಇತ್ಯಾದಿ. ನಮಗೆ ಆಗದವರು ಏನಾದರೂ ಅಂದರೆ ಹಿಂದೆ ಮುಂದೆ ಯೋಚಿಸದೇ ‘ಒಂದ್ಕೆಲ್ಸ ಮಾಡು, ನನ್ನ ಸಾಯಿಸಿಬಿಡು’ ಅಂತೀವಿ. ಹೇಗಿದ್ರೂ ಅವರು ಸಾಯಿಸೋಲ್ಲ ಅಂತ ಗೊತ್ತಿರುತ್ತೆ ನಮಗೆ. ಆದೇ ರೋಬಾಟಿಗೆ ಹಾಗೆ ಆಗೋಲ್ಲ.

ಅದು ಹೇಳಿದ ಕೆಲಸ ಮಾತ್ರ ಮಾಡುವಂಥದ್ದು.

ಸಿನೆಮಾದ ಆರಂಭದಲ್ಲಿಯೇ ಒಬ್ಬ ವೃದ್ಧನ ನೆರವಿಗೆ ಒಂದು ರೋಬಾಟ್ ಇರುವುದನ್ನು ನಾವು ನೋಡುತ್ತೇವೆ. ರೋಬೋ ಆ ವೃದ್ಧನಿಗೆ ಕಾಫಿ ಮಾಡಿ ತೆಗೆದುಕೊಂಡು ಹೋಗಿ ಕೊಡುತ್ತದೆ. ಆ ವೃದ್ಧ ಕಾಫಿ ಚೆನ್ನಾಗಿಲ್ಲ ಅಂತ ಚೆಲ್ಲಿ ಬಿಟ್ಟು, ‘ನೀನ್ಯಾಕೆ ನನ್ನ ಸಾಯಿಸಬಾರದು?’ ಅಂತಾನೆ. ಕೋಪದಲ್ಲಿ ಆ ಮಾತು ಆಚೆ ಬಂದಿರುತ್ತದೆ.

ಆದರೆ ರೋಬೋ ಆ ಮಾತು ಪಾಲಿಸಿ ಆತನನ್ನು ಕೊಂದೇ ಬಿಡುತ್ತದೆ !!!!!!

ನಂತರದ ದೃಶ್ಯದಲ್ಲಿ…. ಸುಬ್ರಮಣ್ಯ ಎಂಬುವವನು ತನ್ನ ತಂದೆಯೊಡನೆ ವಾಸಿಸುತ್ತಿರುತ್ತಾನೆ. ಮೆಕಾನಿಕಲ್ ಇಂಜನಿಯರಿಂಗ್ ಮಾಡಿದ್ದ ಸುಬ್ರಮಣ್ಯನಿಗೆ ರಷ್ಯಾದಲ್ಲಿ ಕೆಲಸ ಸಿಗುತ್ತದೆ. ಆದರೆ ತಂದೆಯನ್ನು ಒಬ್ಬಂಟಿ ಬಿಡಲಾಗದು. ತಂದೆಗಾಗಿ ಬಹಳ ಹೋಮ್ ನರ್ಸುಗಳನ್ನು ನೋಡಿದರೂ ತಂದೆಯ ಹಠಮಾರಿ ವ್ಯಕ್ತಿತ್ವದಿಂದ ಬಂದವರೆಲ್ಲರೂ ಓಡಿ ಹೋಗುತ್ತಿರುತ್ತಾರೆ.

ಆಗ ಸುಬ್ರಮಣ್ಯ ತಂದೆಯನ್ನು ನೋಡಿಕೊಳ್ಳಲು ಒಂದು ರೋಬೋ ಅನ್ನು ತಂದು ಇಡುತ್ತಾನೆ. ತಂದೆಗೆ ಅದು ಇಷ್ಟವಾಗದಿದ್ದರೂ ಕ್ರಮೇಣ ರೋಬೋದೊಡನೆ ಹೊಂದಿಕೊಳ್ಳುತ್ತಾರೆ ಆತನ ತಂದೆ. ಊರಿನವರೆಲ್ಲ ಈ ರೋಬೋ ಅನ್ನು “ಕುಂಜಪ್ಪ” ಅಂತಲೇ ಕರೆಯುತ್ತಿರುತ್ತಾರೆ. ಆಂಡ್ರಾಯ್ಡ್ ಕುಂಜಪ್ಪ ಮತ್ತು ಸುಬ್ರಮಣ್ಯನ ತಂದೆಯ ನಡುವೆ ಒಂದು ಬಾಂಧವ್ಯವೇ ಬೆಳೆದುಬಿಡುತ್ತದೆ.

“ಇದು ಹೀಗೆಯೇ ಮುಂದುವರೆಯುತ್ತದೇನೋ? ಬಹುಶಃ ಮನುಷ್ಯರಿಗಿಂತಲೂ ಭಾವನೆಗಳಿರದ ರೋಬೋಗಳೇ ಶ್ರೇಷ್ಠವೇನೋ? ನಿರ್ದೇಶಕರು ಇದನ್ನೇ ಹೇಳಲು ಹೊರಟಿದ್ದಾರೇನೋ?” ಅಂತ ನಾವು ನಿರ್ಧರಿಸುವಷ್ಟರಲ್ಲಿ ನಿರ್ದೇಶಕರು ಸಡನ್ ಷಾಕ್ ಕೊಡುತ್ತಾರೆ.

ಇಡೀ ಮನುಕುಲಕ್ಕೆ ಪಾಠದಂತಿದೆ ಈ ಸನ್ನಿವೇಶ.

ಈ ರೀತಿಯ ವಸ್ತುನಿಷ್ಠ ಕಾರಣಗಳಿಗಾಗಿಯೇ ಮಲಯಾಳಂ ಸಿನೆಮಾಗಳು ಎಲ್ಲೆಡೆ ಮಾನ್ಯತೆ ಪಡೆಯುವುದು. ನಿರ್ದೇಶಕರು ಕೊಡುವ ಷಾಕ್ ಅನ್ನು ಸಿನೆಮಾದಲ್ಲಿ ಕಣ್ಣಾರೆ ಕಾಣುವುದೇ ಉತ್ತಮ. ಅದನ್ನು ನೋಡಿದ ನಂತರ ನಾವೂ ಆತ್ಮವಿಮರ್ಶೆ ಮಾಡಿಕೊಳ್ಳಬಹುದು.

ಸಿನೆಮ ಅಮೆಜಾನ್ ಪ್ರೈಮಿನಲ್ಲಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

One thought on ““Android kunjappan ver 5.25” (ಮಲಯಾಳಂ)

Leave a Reply