“Final Destination” (ಇಂಗ್ಲಿಷ್)

ಇವು ಹಾರರ್ ಮೂವಿಗಳು. ಆದರೆ ಇದರಲ್ಲಿ ದೆವ್ವ-ಭೂತಗಳಿಲ್ಲ. ಹಾಗಂತ ಹೆದರಿಸುವುದರಲ್ಲಿ ಇವುಗಳೇನು ಹಿಂದೆ ಬಿದ್ದಿಲ್ಲ. ಮನುಷ್ಯನ ಅಂತಿಮ ಭಯವೇ “ಸಾವು”. ಅದನ್ನು ಈ ಸಿನೆಮಾಗಳು ಬಳಸಿಕೊಂಡು ಪ್ರೇಕ್ಷಕರನ್ನು ಬೆಚ್ಚಿಬೀಳಿಸುವಲ್ಲಿ ಯಶಸ್ವಿಯಾಗಿವೆ.

ಇವುಗಳಲ್ಲಿ ಒಟ್ಟು ಐದು ಭಾಗಗಳಿವೆ.

Final Destination 1
Final Destination 2
Final Destination 3
Final Destination 4
Final Destination 5

ಐದೂ ಭಾಗಗಳಲ್ಲಿರುವ ಕಥೆ ಒಂದೇ….. ಸಾವಿಗೆ ಯಾರೂ ಮೋಸ ಮಾಡಲಾಗದು ಎನ್ನುವುದು. ಬೇಕಿದ್ದರೆ ಸಾವನ್ನು ಮುಂದೂಡಬಹುದು ಹೊರತೂ ಸಾವಿನಿಂದ ತಪ್ಪಿಸಿಕೊಳ್ಳಲಾಗದು. ಅಕಸ್ಮಾತ್ ಆ ಕ್ಷಣಕ್ಕೆ ತಪ್ಪಿಸಿಕೊಂಡರೂ ನಂತರ ಸಾವು ಅವರನ್ನು ಬಹಳ ಕ್ರೂರವಾಗಿ ಬೇಟೆಯಾಡುತ್ತದೆ ಎನ್ನುವುದನ್ನು ಮಾರ್ಮಿಕವಾಗಿ ತೋರಿಸಲಾಗಿದೆ.

ಪ್ರತೀ ಭಾಗದಲ್ಲಿಯೂ ಒಬ್ಬರು ಇದ್ದೇ ಇರುತ್ತಾರೆ. ಅವರಿಗೆ ಮುಂದಾಗುವುದನ್ನು ಊಹಿಸುವ ಶಕ್ತಿ ಇರುತ್ತದೆ (premonitions). ಅವರು ಮುಂದಿನ ದುರ್ಘಟನೆಯನ್ನು ಮೊದಲೇ ಕಂಡು ತಮ್ಮನ್ನು ಮತ್ತು ತಮ್ಮ ಪ್ರೀತಿಪಾತ್ರರನ್ನು ಆ ದುರ್ಘಟನೆಯಿಂದ ಬಚಾವು ಮಾಡಿಕೊಳ್ಳುತ್ತಾರೆ.

ಆದರೆ “ಸಾವು” ಅವರ ಬೆನ್ನು ಬಿಡುವುದಿಲ್ಲ.

“ಸಾವು” ಆ ದುರ್ಘಟನೆಗಳಲ್ಲಿ ಉಳಿದ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಬೇಟೆಯಾಡಲು ತೊಡಗುತ್ತದೆ. ‘Premonitions’ ಕಂಡಿರುವ ವ್ಯಕ್ತಿಯ ಕಲ್ಪನೆಯಲ್ಲಿ ಯಾರು ಮೊದಲು ಸಾಯುತ್ತಾರೋ ಆ ಕ್ರಮದಲ್ಲಿಯೇ ಜನ ಸಾಯುತ್ತಾ ಬರುತ್ತಾರೆ. ಈ ವಿಷಯ ಮೊದಲೇ ಯಾರಿಗಾದರೂ ತಿಳಿದರೂ ಸಹ ವಿಧಿಯ ಮುಂದೆ ಎಲ್ಲರೂ ಅಸಹಾಯಕರು. ಕಣ್ಮುಂದೆ ನಡೆಯುತ್ತಿರುವ ಸಾವನ್ನು ಯಾರೂ ತಪ್ಪಿಸಲಾರರು.

ಆಗ ಸಾವಿಗೆ ಮೋಸ ಮಾಡಲು ಹೊರಡುತ್ತಾರೆ ಈ ಜನ….

ಏಕೆಂದರೆ ನಮಗೆ ನಮ್ಮ ಜೀವವೇ ಎಲ್ಲಕ್ಕಿಂತ ಮುಖ್ಯವಲ್ಲವೇ? ‘ಸಾವು’ ಸಾಯಿಸಲು ಅನುಸರಿಸುತ್ತಿರುವ ಕ್ರಮವನ್ನು ಹಿಂದುಮುಂದಾಗಿಸಿದರೆ, ‘ಸಾವು’ ಕ್ರಮತಪ್ಪಿ, ಕನ್ಫ್ಯೂಸ್ ಆಗಿ ತಮ್ಮನ್ನು ಜೀವಂತ ಉಳಿಸಬಹುದೇನೋ ಅಂತ ಅವರಾಸೆ.

ಆದರೆ ಸಾವಿ್ಗೆಗೆ ಮೋಸ ಮಾಡಲು ಸಾಧ್ಯವೇ?

ಸಾವೆಂದರೆ ವಿಧಿ. ಆ ವಿಧಿ ನಮ್ಮನ್ನು ಆವರಿಸಲು ನಾವು ಮಾಡುವ ಒಂದು ಚಿಕ್ಕ ತಪ್ಪು ಅಥವಾ ಅಜಾಗ್ರತೆ ಸಾಕು. ನಮ್ಮ ಒಂದು ಚಿಕ್ಕ ತಪ್ಪಿನಿಂದ ಹೇಗೆ ಸಾವಿನ ದವಡೆಗೆ ನಮ್ಮನ್ನು ನಾವೇ ನೂಕಿಕೊಳ್ಳುತ್ತೇವೆ ಅಂತ ಸಿನೆಮಾ ನೋಡುತ್ತಿದ್ದಂತೆ ಅರ್ಥವಾಗುತ್ತದೆ.‌ ಅಷ್ಟು ಚಿಕ್ಕ ತಪ್ಪಿಗೆ ಆ ವ್ಯಕ್ತಿಗಳು ತೆರುವ ಬೆಲೆ ಅಸಾಧಾರಣವಾದದ್ದು.

ಅತ್ಯಂತ ಘೋರ ಸಾವು !!!!!

ಐದು ಸಿನೆಮಾದ ಕಥೆಗಳೂ ಇದರ ಸುತ್ತಲೇ ಸುತ್ತಿದರೂ ನಾವು ಅತ್ಯಂತ ಕುತೂಹಲಕಾರಿಯಾಗಿ ಇದನ್ನು ನೋಡುವುದಕ್ಕೆ ಕಾರಣ ಇದರ ಬಿಗಿಯಾದ ಚಿತ್ರಕಥೆ ಮತ್ತು ಚಿತ್ರದ ವೇಗದ ನಿರೂಪಣೆ. ಇಡೀ ಸಿನೆಮಾ ಸಾವಿನಿಂದ ಕೂಡಿದ್ದರೂ ಸಹ, ನಾವು ಮುಂದಿನ ಬಲಿ ಯಾರದ್ದು ಎಂದು ಕಾಯುತ್ತೇವೆ.

ಒಬ್ಬರೂ ಉಳಿಯದೇ ಎಲ್ಲರೂ ನಾಶವಾಗಿ ಹೋಗುವ ಮೊದಲ ಸಿನೆಮಾ ಇರಬೇಕು ಇದು.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply