ಸಿನೆಮಾ ಹೀಗೆ ಶುರುವಾಗುತ್ತದೆ.
ಐದು ಸಾವಿರ ವರ್ಷಗಳ ಹಿಂದೆ ಒಬ್ಬ ಕ್ರೂರ ರಾಜನಿದ್ದ. ಅವನ ಹೆಸರು “ವೃಶ್ಚಿಕ ರಾಜ” (scorpian king). ಹೆಸರಿನಲ್ಲಿಯೇ ರಾಜ ಅಂತಿಟ್ಟುಕೊಂಡಿದ್ದ ಅವನು ಇಡೀ ಪ್ರಪಂಚ ಗೆಲ್ಲುವ ಮಹೋನ್ನತ ಆಸೆಯಿಂದ ತನ್ನ ಸೈನ್ಯವನ್ನು ಬಲಾಢ್ಯಗೊಳಿಸುತ್ತಿದ್ದ.
ಒಂದ್ನಿಮಿಷ….
ಒಬ್ಬ ರಾಜನಿಗೆ ಇಡೀ ಪ್ರಪಂಚ ಗೆಲ್ಲುವ ಅಗತ್ಯ ಏನಿದೆ? ತನಗೆ ಸಿಕ್ಕಷ್ಟು ಭೂಮಿಯಲ್ಲಿ ತನ್ನನ್ನು ಆದರಿಸುವವರೊಂದಿಗೆ ನೆಮ್ಮದಿಯಾಗಿ ರಾಜ್ಯವಾಳಿಕೊಂಡು ಇರಬಹುದಲ್ವಾ? ಉಹುಂ… ಇವರಿಂದ ಅದಾಗೋಲ್ಲ. ಎಲ್ಲವೂ ತನಗೇ ಬೇಕು ಅನ್ನೋ ಹಪಾಹಪಿ ಇವರುಗಳಿಗೆ. ಇಡೀ ಪ್ರಪಂಚದ ಜನ ತನಗೆ ತಲೆಬಾಗಬೇಕು ಎಂದುಕೊಳ್ಳುವುದು ಒಂದು ದೊಡ್ಡ ಮೂರ್ಖತನ ನನ್ನ ಪ್ರಕಾರ. ಬಹುಶಃ ಇದುವರೆಗೂ ಯಾರೂ ಈ ರೀತಿ ಪ್ರಪಂಚವನ್ನೇ ವಶಪಡಿಸಿಕೊಳ್ಳಲು ಹೋಗಿ ಯಶಸ್ವಿಯಾಗಿಲ್ಲ.
ಅದೇ ರೀತಿ ವೃಶ್ಚಿಕ ರಾಜನಿಗೂ ಆಗುವುದಿಲ್ಲ.
ಆಗ ಪಾತಾಳಲೋಕದ ದೇವರು ಆತನಿಗೆ ಯುದ್ಧ ಗೆಲ್ಲಲು ಸಹಾಯ ಮಾಡುತ್ತಾನೆ. ಆದರೆ ಗೆದ್ದ ಕೂಡಲೇ ವೃಶ್ಚಿಕ ರಾಜನನ್ನು ತನ್ನ ಸೇವಕನಾಗಿರಲು ಪಾತಾಳಲೋಕಕ್ಕೆ ಎಳೆದುಕೊಂಡು ಹೋಗುತ್ತಾನೆ. ಇದೊಂಥರಾ ಅನ್ಯಾಯವಪ್ಪ!! ಯುದ್ಧ ಗೆಲ್ಲುವುದೇ ರಾಜ್ಯವಾಳಲು. ಈ ಪಾತಾಳಲೋಕದ ರಾಜನೋ, ಯುದ್ದಕ್ಕೆ ಸಹಾಯ ಮಾಡಿ, ಗೆದ್ದ ನಂತರ ರಾಜ್ಯವಾಳಲು ಬಿಡದೇ ಒದ್ದು ಎಳ್ಕೊಂಡು ಹೋಗ್ತಿದ್ದಾನೆ.
ಪಾಪ ವೃಶ್ಚಿಕ ರಾಜ ಏನು ಮಾಡಬೇಕು ಈಗ??
ಆದರೆ ಪ್ರತೀ ಐದು ಸಾವಿರಕ್ಕೊಮ್ಮೆ ಆತ ಎಚ್ಚರಗೊಳ್ಳುತ್ತಾನಂತೆ. ಆಗ ಅವನನ್ನು ಕೊಂದವರು ಭೂಮಂಡಲದ ಒಡೆಯರಾಗುತ್ತಾರಂತೆ. ಈಗ ಐದು ಸಾವಿರ ವರ್ಷ ಕಳೆದಿದೆ. ವೃಶ್ಚಿಕ ರಾಜ ಎಚ್ಚರಗೊಳ್ಳುವ ಸಮಯ ಬಂದಿದೆ. ನಮ್ಮ ಪ್ರತಿನಾಯಕ (ಮಮ್ಮಿಯ ರೂಪದವನು) ಆ ವೃಶ್ಚಿಕ ರಾಜನನ್ನು ಕೊಂದು ತಾನೇ ಭೂಮಂಡಲದ ಒಡೆಯನಾಗಬೇಕು ಎಂಬ ಕನಸು ಹೊತ್ತು ಮತ್ತೊಮ್ಮೆ ಹುಟ್ಟಿ (!!) ಬಂದಿದ್ದಾನೆ.
ಪ್ರಧಾನಮಂತ್ರಿ, ರಾಷ್ಟ್ರಪತಿ ಹುದ್ದೆಗಳಂತೆಯೇ “ಭೂಮಂಡಲದ ಒಡೆಯ” ಎಂಬ ಹುದ್ದೆ ಕಂಡರೆ ಅದೇನು ಆಸೆಯೋ ಜನಗಳಿಗೆ. ರಾಜ ಆಳುವ ಪ್ರದೇಶದ ವ್ಯಾಪ್ತಿ ಹಿಗ್ಗಿದಷ್ಟೂ ಸ್ವತಃ ರಾಜನಿಗೇ ಕಷ್ಟ. ರಾಜ್ಯದ ಅಷ್ಟೂ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು, ದಂಗೆಯನ್ನು ಮಟ್ಟ ಹಾಕಬೇಕು, ಬಲವಂತದಿಂದ ಜನರನ್ನು ವಶಪಡಿಸಿಕೊಂಡಿರುವುದರಿಂದ ಅವರುಗಳು ಯಾವತ್ತು ತಿರುಗಿಬೀಳುತ್ತಾರೆಯೋ ಗೊತ್ತಿಲ್ಲ, ಹಾಗಾಗಿ ಊಟ-ನಿದ್ರೆ-ನೆಮ್ಮದಿ ಇಲ್ಲದೇ ಅವರನ್ನು ಕಾಯಬೇಕು.
ಯಾರಿಗೆ ಬೇಕಪ್ಪಾ ಈ ಒಡೆಯನ ಹುದ್ದೆ??
ಆದರೆ ನಮ್ಮ ಇಮ್ಹೋಟೆಪ್ (ಮಮ್ಮಿ) ನಿಗೆ ಬೇಕಾಗಿದೆ. ಅದಕ್ಕಾಗಿ ವೃಶ್ಚಿಕ ರಾಜನ ಚಿನ್ನದ ಬ್ರೆಸ್ಲೇಟ್ ಅಗತ್ಯವಿದೆ. ಈಗ ಸಧ್ಯಕ್ಕೆ ಆ ಬ್ರೆಸ್ಲೇಟ್ ನಾಯಕನ ಮಗನಾದ ಅಲೆಕ್ಸ್ ಕೈಯಲ್ಲಿದೆ. ಆ ಬ್ರೆಸ್ಲೇಟ್ ಒಮ್ಮೆ ಧರಿಸಿದರೆ ಏಳು ದಿನಗಳ ಕಾಲ ತೆಗೆಯಲು ಬರುವುದಿಲ್ಲ. ಹಾಗಾಗಿ ಬ್ರೆಸ್ಲೇಟಿಗಾಗಿ ಆ ಮಗುವನ್ನೇ ಕಿಡ್ನಾಪ್ ಮಾಡಲಾಗುತ್ತದೆ. ಆಗ ತನ್ನ ಮಗುವನ್ನು ಬಚಾಯಿಸಲು ನಾಯಕ ತನಗೇ ಅರಿವಿಲ್ಲದಂತೆ ಈ ಜಾಲದೊಳಗೆ ಇಳಿಯುತ್ತಾನೆ.
ಇಮ್ಹೋಟೆಪ್ (ಮಮ್ಮಿಯ) ಉದ್ದೇಶ ವೃಶ್ಚಿಕ ರಾಜನನ್ನು ಕೊಂದು ಭೂಮಂಡಲದ ಚಕ್ರವರ್ತಿಯಾಗುವುದು. ನಾಯಕನ ಉದ್ದೇಶ ತನ್ನ ಮಗುವನ್ನು ಕಾಪಾಡಿಕೊಳ್ಳುವುದು. ಆತನಿಗೆ ಯಾವ ಹುದ್ದೆಯ ಮೇಲೆಯೂ ಆಸೆಯಿಲ್ಲ, ಯಾವ ನಿಧಿಯೂ ಆತನಿಗೆ ಬೇಕಿಲ್ಲ. ಅವನೊಬ್ಬ ಶುದ್ಧಾನುಶುದ್ಧ ಅಪ್ಪನಷ್ಟೇ.
ಇದು ಹಾರರ್ ಸಿನೆಮಾ ಆಗಿರಬಹುದು!!!
ಆದರೆ ಸಿಗುವ ಸಣ್ಣಪುಟ್ಟ ಕ್ಷಣಾರ್ಧದ ಸನ್ನಿವೇಶಗಳಲ್ಲಿಯೇ ಪ್ರೀತಿ, ಸ್ನೇಹ, ಮಮತೆ, ನಂಬಿಕೆ ದ್ರೋಹ ಇವೆಲ್ಲವನ್ನೂ ತೋರಿಸಲಾಗಿದೆ. ಈ ಸಿನೆಮಾದಲ್ಲಿಯೂ ನಮ್ಮನ್ನು ನಗಿಸುವುದು ನಾಯಕಿಯ ಅಣ್ಣನೇ. ಆತ ಗಂಭೀರವಾಗಿದ್ದರೂ ನಮಗೆ ಮಾತ್ರ ನಗು ಉಕ್ಕಿ ಬರುತ್ತಿರುತ್ತದೆ.
ಕೊನೆಗೆ…. ಇಡೀ ಜಗತ್ತನ್ನು ಅಡಿಯಾಳಾಗಿಸಿಕೊಳ್ಳಬೇಕು ಎಂಬ ಹಪಾಹಪಿ ಗೆಲ್ಲುತ್ತದೆಯೋ ಅಥವಾ ತಂದೆಯ ಪ್ರೀತಿ ಗೆಲ್ಲುತ್ತದೆಯೋ ಅಂತ ತಿಳಿಯಲು ಸಿನೆಮಾ ನೋಡಬೇಕಿದೆ. ಚೂರೂ ಬೇಸರಕ್ಕೆ ಆಸ್ಪದವಿರದ ಹಾಗೆ ಬಿಗಿ ಕಥಾಹಂದರವಿದ್ದು, “ಮಮ್ಮಿ” ಸಿನೆಮಾದ ಮುಂದುವರೆದ ಭಾಗವಾಗಿ ಇದು ಮೂಡಿ ಬಂದಿದೆ.
ಮಮ್ಮಿ ಮತ್ತು ಮಮ್ಮಿ ರಿಟರ್ನ್ಸ್ ಎರಡೂ ಚಿತ್ರಗಳ ನಿರ್ದೇಶಕರಾದ Stepgen sommers ಅತ್ಯದ್ಭುತವಾದ ಚಿತ್ರಕಥೆ ರಚಿಸಿದ್ದಾರೆ. ಈ ಸಿನೆಮಾ ಬಂದಿದ್ದು 2001 ರಲ್ಲಿ. ಇದುವರೆಗೂ ಇಷ್ಟೊಳ್ಳೆಯ ಚಿತ್ರಕಥೆ ಮತ್ತು ಈಜಿಪ್ಟ್ ಕಥೆಯನ್ನೊಳಗೊಂಡ ಸಿನೆಮಾ ಮತ್ತೊಂದು ಬಂದಿಲ್ಲ ಎನ್ನುವುದೇ ಅವರ ಶ್ರೇಷ್ಠತೆಗೆ ಸಾಕ್ಷಿ.