“The raid” (ಹಿಂದಿ)

ನಿಜಕ್ಕೂ ಈ ಸಿನೆಮಾ ನೋಡುವವರೆಗೂ ಇನ್ಕಮ್ ಟ್ಯಾಕ್ಸ್ ರೇಡ್ ಹೇಗಿರುತ್ತದೆ ಅಂತ ನನಗೆ ಗೊತ್ತಿರಲಿಲ್ಲ. ಈ ಸಿನೆಮಾದಲ್ಲಿ ರೇಡ್ ಮಾಡಿಸಿಕೊಳ್ಳುವವನ ಮನಸ್ಥಿತಿ ಮಾತ್ರವಲ್ಲ, ರೇಡ್ ಮಾಡುವವರ ಬಗ್ಗೆಯೂ ವಿವರಿಸಿದ್ದಾರೆ. ಇದು ಬಹಳ ಕುತೂಹಲಕಾರಿಯಾಗಿದೆ.

ನಾಯಕ (ಆದಾಯ ತೆರಿಗೆ ಅಧಿಕಾರಿ) ಅಜಯ್ ದೇವಗನ್ ರಾಜಕಾರಿಣಿ ಒಬ್ಬನ‌‌ ಅಕ್ರಮ ಆಸ್ತಿಯ ಬಗ್ಗೆ ತನಿಖೆ ನಡೆಸಲು ಹೊರಡುತ್ತಾನೆ. ಆ ರಾಜಕಾರಿಣಿ ಬಹಳ ವರ್ಷಗಳಿಂದ ಆದಾಯ ತೆರಿಗೆ ಕಟ್ಟಿರುವುದಿಲ್ಲ. ಆದರೆ ಸಾಕ್ಷಾಧಾರವಿಲ್ಲದೇ ಕಾನೂನಿಗೆ ಏನೂ ಮಾಡಲು ಸಾಧ್ಯ ಇರುವುದಿಲ್ಲ. ಅಲ್ಲದೇ ಇವರು ದಾಳಿ ಮಾಡಿದ ಸಂದರ್ಭದಲ್ಲಿ ಅಲ್ಲಿ ಅವರ ಬಳಿ ಅನುಮಾನಾಸ್ಪದ ಹಣ-ಒಡವೆ ಏನೂ ಸಿಗದಿದ್ದರೆ ಆಫೀಸರುಗಳ ಕೆಲಸಕ್ಕೇ ಕುತ್ತು ಬರುವಂತಹ ಸಾಧ್ಯತೆಗಳೂ ಇವೆ.

ಹಾಗಾಗಿ ಆ ರಾಜಕಾರಿಣಿ ತಪ್ಪಿಸಿಕೊಳ್ಳಲು ಅವಕಾಶವೇ ಇರದಂತೆ ಪಕ್ಕಾ ಪ್ಲಾನ್ ಮಾಡಿಕೊಂಡೇ ಎಲ್ಲಾ ಆಫೀಸರುಗಳು ಒಟ್ಟಾಗಿ ಹೊರಡುತ್ತಾರೆ. ಒಂದಲ್ಲ ನಾಲ್ಕು ದಿನಗಳ‌ ಕಾಲ ರೇಡ್ ನಡೆಯುತ್ತದೆ. ಆಗ ಈ ಆಫೀಸರುಗಳು ಅವರ ಮನೆಯ ವರಾಂಡದಲ್ಲಿಯೇ ಮಲಗುತ್ತಾರೆ.

ಹೀಗೆ ‘ದಿನಗಟ್ಟಲೆ ರೇಡ್ ನಡೆಯುತ್ತದೆ, ಆಗ ಆಫೀಸರುಗಳು ಅವರ ಮನೆಯಲ್ಲಿಯೇ ಮೊಕ್ಕಾಂ‌ ಹೂಡುತ್ತಾರೆ’ ಅಂತ ಸ್ಪಷ್ಟವಾಗಿ ಗೊತ್ತಿಲ್ಲದವರಿಗೂ ಈ ಸಿನೆಮಾ ನೋಡಿದ ನಂತರ ಅರ್ಥವಾಗಿರುತ್ತದೆ.

ರೇಡ್ ಮಾಡಿಸಿಕೊಳ್ಳುತ್ತಿರುವ ರಾಜಕಾರಿಣಿ ಈ ರೇಡ್ ನಡೆಯಲು ಬಿಟ್ಟು ಹರಿಶ್ಚಂದ್ರನ ಥರ ಸುಮ್ಮನೆ ನಿಂತುಕೊಳ್ಳುತ್ತಾನೆ ಅಂದುಕೊಂಡಿದ್ದೀರಾ? ಆತ ಈ ರೇಡ್ ಅನ್ನು ತಪ್ಪಿಸಲು ಬಹಳಷ್ಟು ಪರದಾಡುತ್ತಾನೆ. ರಾಜ್ಯ ಸರ್ಕಾರದಿಂದ ಸ್ಟೇ ಆರ್ಡರ್ ತರಲು ಯತ್ನಿಸಿದಾಗ, “ಆದಾಯ ತೆರಿಗೆ ಇಲಾಖೆ ಕೇಂದ್ರ ಸರ್ಕಾರದ ಅಧೀನದಲ್ಲಿರುವುದು, ಈ ರೇಡ್ ಅನ್ನು ನಿಲ್ಲಿಸಲು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ” ಅಂತ ಗೊತ್ತಾಗುತ್ತದೆ.

ಆಗ ಆ ರಾಜಕಾರಿಣಿ ಖುದ್ದು ಪ್ರಧಾನಿಯವರನ್ನೇ ಭೇಟಿಯಾಗಲು ಹೊರಡುತ್ತಾನೆ. ಆದರೆ ಪ್ರಧಾನಿಗಳು ಇವನಿಗೆ ಸಹಾಯ ಮಾಡುವುದಿಲ್ಲ. ಇದರಿಂದ ಕೆರಳಿದ ರಾಜಕಾರಿಣಿ ಇಡೀ ಆದಾಯ ತೆರಿಗೆಯ ಟೀಮ್ ಅನ್ನು ಸಾಯಿಸುವ ನಿರ್ಧಾರ ತೆಗೆದುಕೊಳ್ಳುತ್ತಾನೆ ಮತಿಹೀನನಂತೆ.

ಈಗೇನು ಮಾಡುತ್ತಾರೆ ಅಧಿಕಾರಿಗಳು…??

ರಾಜಕಾರಿಣಿಯ ಸ್ವಂತ ಊರಿನಲ್ಲಿ ಆತನ ಸ್ವಂತ ಮನೆಯೊಳಗೆ ತಾವಾಗಿಯೇ ಹೋಗಿ ಸಿಕ್ಕಿಹಾಕಿಕೊಂಡಿದ್ದಾರೆ. ಮೊದಲು ರೇಡ್ ತಪ್ಪಿಸಿಕೊಳ್ಳಲು ನ್ಯಾಯಮಾರ್ಗವನ್ನೇ ಹಿಡಿದಿದ್ದ ರಾಜಕಾರಿಣಿ, ಅದರಲ್ಲಿ ತನಗೆ ನ್ಯಾಯ ಸಿಗದಿದ್ದಾಗ ಅನ್ಯಾಯದ ಮಾರ್ಗ ಹಿಡಿದಿದ್ದಾನೆ.

ಈಗ ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ?

ಆ ಮನೆಯಿಂದ ಹೇಗೋ ಹೊರಬಿದ್ದರೂ ಆ ರಾಜಕಾರಿಣಿಯವರ ಕಡೆಯ ಜನರಿಂದ ತಪ್ಪಿಸಿಕೊಳ್ಳುವುದು ಹೇಗೆ? ಕಡೆಗೆ ನಾಯಕ ತನ್ನ ಗುಂಪಿನ ಎಲ್ಲರನ್ನೂ ಒಂದು ರಹಸ್ಯ ದಾರಿಯಿಂದ ಆಚೆ ಕಳಿಸಿ ತಾನು ಒಂಟಿಯಾಗಿ ಒಂದು ರೂಮಿನ ಬಾಗಿಲು ಹಾಕಿ ಕುಳಿತುಕೊಳ್ಳುತ್ತಾನೆ.

ಉದ್ರಿಕ್ತ ಗುಂಪು ಆ ರೂಮಿನ ಬಾಗಿಲು ಒಡೆಯಲು ಶುರು ಮಾಡುತ್ತದೆ. ನಾಯಕ ರೂಮಿನಲ್ಲಿದ್ದ ಎಲ್ಲಾ ವಸ್ತುಗಳನ್ನೂ ಬಾಗಿಲಿಗೆ ಅಡ್ಡವಾಗಿಟ್ಟು ಅವರು ಒಳ ಬರುವುದನ್ನು ತಡೆಯುತ್ತಾನೆ. ಆದರೆ ಎಷ್ಟು ಹೊತ್ತು ಹೀಗೆ ಮಾಡಲು ಸಾಧ್ಯ? ಒಂದು ವೇಳೆ ಅವರು ಒಳ ಬರದಿದ್ದರೂ ಹಸಿವು-ನೀರಡಿಕೆಯಿಂದ ಈತ ಸಾಯುವುದು ಖಂಡಿತಾ.

ಕೇವಲ ತನ್ನ ಕರ್ತವ್ಯ ಪಾಲಿಸುತ್ತಿರುವ ಅಧಿಕಾರಿಗೆ ಇಂತಹಾ ಘೋರ ಶಿಕ್ಷೆ ಆಗುತ್ತಿರುವುದು ಸರಿಯೇ? ಹೀಗಾದರೆ ಮುಂದೆ ಇಂತಹಾ ಅಧಿಕಾರಿಗಳು ಕರ್ತವ್ಯದಿಂದ ವಿಮುಖರಾಗುವುದಿಲ್ಲವೇ? ಇದರಿಂದ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗುವುದಿಲ್ಲವೇ…?

ಮುಂದೇನಾಯ್ತು ಅಂತ ತಿಳಿಯಲು ಸಿನೆಮಾ ನೋಡಿ…

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

One thought on ““The raid” (ಹಿಂದಿ)

Leave a Reply