ನಿಧಾನವಾಗಿ ಕನ್ನಡ ಚಿತ್ರರಂಗ ನಾಯಕ ಪ್ರಧಾನ ಚಿತ್ರಗಳಿಂದ ದೂರ ಸರಿಯುತ್ತಿರುವ ಸ್ಪಷ್ಟ ಸೂಚನೆ ದೊರಕುತ್ತಿರುವ ಈ ಸಂದರ್ಭದಲ್ಲಿ “ಅರಿಷಡ್ವರ್ಗ” ಸಿನೆಮಾ ಒಂದು ಜೀವಂತ ಉದಾಹರಣೆ ಎನಿಸುತ್ತದೆ. ಕಥೆಯೇ ಮುಖ್ಯವಾಗಿ ತಥಾಕಥಿತ ಸಿನೆಮಾ ಸಿದ್ಧಾಂತಗಳೆಲ್ಲ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿವೆ. ಇಂತಹಾ ಒಂದು ಬದಲಾವಣೆಯ ಗಾಳಿ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಬೇಕಿತ್ತು.
“ಅರಿಷಡ್ವರ್ಗ” ಎಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ. ಇನ್ನೂ ಸರಳವಾಗಿ ಹೇಳಬೇಕೆಂದರೆ ನಮ್ಮ ಜೀವನ, ನಾವು ಬದುಕುತ್ತಿರುವ ರೀತಿ.
ಹೊರಪ್ರಪಂಚದಲ್ಲಿ ಹೇಗೆ ನಾವು ಸಂವಿಧಾನಕ್ಕೆ ಅನುಗುಣವಾಗಿ ಬದುಕುತ್ತಿದ್ದೇವೆಯೋ, ಹಾಗೆಯೇ ಕೌಟುಂಬಿಕ ಜೀವನದಲ್ಲಿ “ಅರಿಷಡ್ವರ್ಗ”ದ ದಾಸರಾಗಿದ್ದೇವೆ. ಈ ಆರು ಗುಣಗಳಿಂದ ಅತೀತನಾದ ಮನುಷ್ಯ ಇಲ್ಲವೇ ಇಲ್ಲ. ಹಾಗಾಗಿ ಇದು ನಮ್ಮದೇ ಕಥೆ.
ಒಂದು ಕೊಲೆಯಾಗಿದೆ.
ಆ ಕೊಲೆ ಮಾಡಿದವರು ಯಾರು? ಕೊಲೆಗೆ ಕಾರಣವೇನು? ನಿರ್ದೇಶಕರಿಗೆ ಗೊತ್ತಿದೆ ಕೊಲೆ ಮಾಡಿದವರು ಯಾರೆಂದು. ಅದನ್ನು ಅವರು ನಮಗೆ ಬಹಳ ವಿಭಿನ್ನವಾದ ರೀತಿಯಲ್ಲಿ ಹೇಳುತ್ತಾ ಹೋಗುತ್ತಾರೆ. ಈ ಶೈಲಿ ಕನ್ನಡಕ್ಕೆ ಬಹಳ ಹೊಸದಾಗಿದೆ. ಒಂದು ಕಡೆ ಕೆಲವು ಸನ್ನಿವೇಶಗಳು ತಾನೇತಾನಾಗಿ ಹುಟ್ಟಿ, ನಂತರ ಸ್ವಲ್ಪ ಸಮಯ ಕಳೆದ ನಂತರ ಆ ಸನ್ನಿವೇಶಗಳ ಹಿನ್ನೆಲೆ ತೋರಿಸುವಾಗ ಇಡೀ ಸಿನೆಮಾದ ದೃಶ್ಯಗಳು ಒಂದನ್ನೊಂದು ಬೆಸೆದುಕೊಂಡಿರುವಂತೆ ಎನಿಸುತ್ತದೆ. ಯಾವ ದೃಶ್ಯವೂ ಕಣ್ತಪ್ಪಿ ಹೋಗಲು ಸಾಧ್ಯವಿಲ್ಲದ ಬಿಗಿನಿರೂಪಣೆ, ನಟರ ಸಹಾಜಾತಿಸಹಜ ನಟನೆ ಸಿನೆಮಾವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಒಂದು ರೀತಿ ಹೇಳಬೇಕೆಂದರೆ ಇದು “ಕಾಮ” ಪ್ರಧಾನವಾದ ಚಿತ್ರ. ಆದರೆ ಎಲ್ಲಿಯೂ ಸಹ ಇದು ಅತಿರೇಕ ಅನ್ನಿಸುವುದಾಗಲೀ ಅಥವಾ ಮುಜುಗರವಾಗಲಿ ಉಂಟು ಮಾಡುವುದಿಲ್ಲ. ಒಂದು ತೆಳು ಪೊರೆಯಂತೆ ಇಡೀ ಸಿನೆಮಾವನ್ನು ಇದು ಆವರಿಸಿದೆ. ಎಷ್ಟೆಂದರೆ ಎಲ್ಲರಿಗೂ ಆದರ್ಶವಾಗಬೇಕಾಗಿದ್ದ ಪೊಲೀಸ್ ಅಧಿಕಾರಿಯೂ ಇದಕ್ಕೆ ದಾಸನಾಗಿದ್ದಾನೆ.
ಆತ ಮನಸ್ಸಿನ ನೆಮ್ಮದಿ ಇಲ್ಲದೇ ಕಾಲಕಳೆಯುತ್ತಿರುವುದು ನಮ್ಮ ಮನಸ್ಸಿಗೆ ನಾಟುತ್ತದೆ.
ಬರೇ ಕೊಲೆ ಕೇಸುಗಳನ್ನು ಬಗೆಹರಿಸುತ್ತಾ, ಅದರ ಬಗ್ಗೆ ಯೋಚಿಸುತ್ತಾ, ಊಟ-ತಿಂಡಿ ಸರಿಯಾಗಿ ಮಾಡಲಾಗದೇ, ಬೆಳಗ್ಗಿನ ಝಾವದವರೆಗೂ ಡ್ಯೂಟಿ ಮಾಡಿ, ಸಿಕ್ಕಷ್ಟು ನಿದ್ದೆ ಮಾಡಿ, ಪುನಃ ಬೆಳಿಗ್ಗೆ ಡ್ಯೂಟಿಗೆ ಹಾಜರಾಗುವ ಆತನ ಮಾನಸಿಕ ತುಮುಲವನ್ನು ಮನಸ್ಸಿಗೆ ತಟ್ಟುವಂತೆ ತೋರಿಸಲಾಗಿದೆ. ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ನಾನೇ ಸಿನೆಮಾ ಎಂಬುದನ್ನು ಮರೆತು ನಾನು ತಿನ್ನುತ್ತಿದ್ದ ಪಾಪ್ ಕಾರ್ನ್ ಅನ್ನು ಆತನಿಗೆ ಕೊಡಲೇ ಎಂದು ಯೋಚಿಸುತ್ತಿದ್ದೆ. ಕಡೆಗೂ ಆತ ನೆಮ್ಮದಿಯಾಗಿ ಊಟ ಮಾಡುತ್ತಾನೆ. ಆದರೆ ಆ ನೆಮ್ಮದಿಯ ಹಿಂದೆ ಇರುವ ರಹಸ್ಯ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ.
ಸಿನೆಮಾದ ಕಥೆ ಪೂರ್ತಿಯಾಗಿ ಸುತ್ತುವುದು “ಕೃತಿ ಭಟ್” ಎಂಬುವವರ ಪಾತ್ರದ ಸುತ್ತ. ಮೂವತ್ತಾರು ವರ್ಷದ ಆಕೆಯ ಗಂಡನೇ ಕೊಲೆಯಾಗಿರುವುದು. ಆತನ ಕೊಲೆಯಾದಾಗ ಅವರ ಮನೆಯೊಳಗೆ ಮೂವರು ಶಂಕಿತರು ಅನುನಾಸ್ಪದವಾಗಿ ಸಿಕ್ಕು ಬಿದ್ದಿರುತ್ತಾರೆ. ಆದರೆ ಅವರು ಯಾರೂ ಆತನನ್ನು ಕೊಂದಿರುವುದಿಲ್ಲ. ಹಾಗಾದರೆ ಈ ಕೊಲೆ ಮಾಡಿದವರು ಯಾರು?
ಕೊಲೆ ಮಾಡಿದ್ದು ಯಾಕೆ……?
ನಮ್ಮನ್ನು ಸೆಳೆಯುವುದು ಕೃತಿ ಭಟ್ ಪಾತ್ರಧಾರಿಯ ಅಭಿನಯ. ಎಲ್ಲರಂತೆ ಆಕೆಗೂ ತಮಗೊಂದು ಮಗು ಬೇಕೆನ್ನುವ ಅಭಿಲಾಷೆ. ಆದರೆ ಕಟ್ಟಿಕೊಂಡ ಗಂಡನಿಂದ ಆ ಆಸೆ ಈಡೇರಲು ಸಾಧ್ಯವಿಲ್ಲ ಅಂತ ಗೊತ್ತಾದಾಗ ಬಹಳ ಕುಗ್ಗಿ ಹೋಗುತ್ತಾಳೆ ಆಕೆ. ಮಗು ಬೇಕೆನ್ನುವ ವಾಂಛೆ ದಿನೇ ದಿನೇ ಹೆಚ್ಚುತ್ತಾ ಹೋಗುತ್ತದೆ. ಅದಕ್ಕಾಗಿ ಆಕೆ ತನ್ನ ಜೀವನದಲ್ಲಿ ಕೆಲವು ಯಡವಟ್ಟುಗಳನ್ನು ಮಾಡುತ್ತಾಳೆ.
ತಿಳಿದು ತಿಳಿದೇ ಬೇಕೂಂತ ಮಾಡುವಂಥವಲ್ಲ ಅವು. ತನ್ನ ಅಭಿಲಾಷೆ ಈಡೇರಿಸಿಕೊಳ್ಳುವ ಹಂತದಲ್ಲಿ ತಾನೇತಾನಾಗಿ ಆಗುವಂಥವು. ನಮ್ಮನಿಮ್ಮೆಲ್ಲರ ರೀತಿ ಆಕೆಗೂ ಒಂದು ಆಸೆಯಿದೆ. ಅದು ತನ್ನದೇ ಆದ ಮಗು ಪಡೆಯುವುದು. ಅದರಲ್ಲೇನು ತಪ್ಪು ಅಂತೀರ ಅಲ್ವೇ? ಆದರೆ ಈ ಆಸೆ ಈಡೇರಿಸಿಕೊಳ್ಳುವ ಭರದಲ್ಲಿ ನಿಧಾನವಾಗಿ ಆಕೆ ಜೀವನದಲ್ಲಿ ಎಡವುತ್ತಾ ಹೋಗುತ್ತಾಳೆ. ಕಡೆಗೆ ಈ ವಾಂಛೆ ಆಕೆಯನ್ನು ಒಂದು ದೊಡ್ಡ ಪ್ರಪಾತದೆದುರು ತಂದು ನಿಲ್ಲಿಸಿ ಕೈಬಿಡುತ್ತದೆ. ತಾನು ಮಾಡಿರುವ ಪಾಪ ಕಳೆದುಕೊಳ್ಳಲು ಒಂದೋ ಆಕೆ ಆ ಪ್ರಪಾತಕ್ಕೆ ಹಾರಬೇಕು ಅಥವಾ ಇದೇ ಅರಿಷಡ್ವರ್ಗಕ್ಕೆ ಮತ್ತೊಮ್ಮೆ ಶರಣಾಗಿ ಬದುಕಬೇಕು.
ಜೀವಂತ ಉಳಿಯಬೇಕೆಂದರೆ ಆಕೆ “ಕಾಮ”ಕ್ಕೆ ಬಲಿಯಾಗಲೇಬೇಕು. ಈ ಹಂತದಲ್ಲಿ ನಮಗೆ ಆಕೆ “ಪಾಪ” ಎಂದೆನಿಸುತ್ತದೆ. ಆಕೆ ಮಾಡಿದ ತಪ್ಪಾದರೂ ಏನು? ಒಬ್ಬ ಹೆಣ್ಣಾಗಿ ತಾಯಿಯಾಗುವುದನ್ನು ಬಯಸಿದ್ದು ತಪ್ಪೇ? ಆ ಬಯಕೆ ಈಡೇರಿಕೆಗಾಗಿ ಆಕೆ ಅನೈತಿಕ ದಾರಿ ತುಳಿದದ್ದು ತಪ್ಪೇ? ದಾರಿ ಕೆಟ್ಟದಾದರೂ ಆಕೆಯ ಉದ್ದೇಶ ಒಳ್ಳೆಯದಲ್ಲವೇ? ಕಡೆಗೆ ತಾಯಿಯೇ ಆಗಲಾರದ ಆಕೆ ತಾನು ತಾಯಿಯಾಗಿದ್ದೀನಿ ಅಂತ ತಿಳಿದಾಗ ಆ ಸಂಭ್ರಮ ಅನುಭವಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ ಎನ್ನುವುದೊಂದು ದೊಡ್ಡ ವಿಪರ್ಯಾಸ.
ಈಗ ಆಗಿರುವ ಕೊಲೆಗೆ ಕಾರಣ ಹುಡುಕುತ್ತಾ ಹೊರಟಾಗ “ಕೃತಿ ಪಾತ್ರಧಾರಿ”ಯ ಜೀವನದ ಒಂದೊಂದೇ ರಹಸ್ಯಗಳ ಅನಾವರಣವಾಗುತ್ತಾ ಹೋಗುತ್ತದೆ. ಕಡೆಗೆ ಕೊಲೆಗಾರ ಸಿಕ್ಕೂ ಬೀಳುತ್ತಾನೆ. ಕೇವಲ ಒಂದೇ ವಾರದಲ್ಲಿ ಆ ಪೊಲೀಸ್ ಅಧಿಕಾರಿ ನಿದ್ದೆಗೆಟ್ಟು ಕಳ್ಳನನ್ನು ಹಿಡಿಯುತ್ತಾನೆ.
ಆದರೆ ಕಥೆ ಅಷ್ಟೇನಾ?
ಅಲ್ಲ…. ಅನಾವರಣವಾಗುವುದು ಕೊಲೆಗಾರ ಯಾರೆಂಬ ರಹಸ್ಯವಲ್ಲ… ಮನುಷ್ಯನೊಳಗಿನ ಕ್ರೋಧ ಯಾವ ಹಂತ ತಲುಪುತ್ತದೆ, ಅದು ಆ ಹಂತ ತಲುಪಿದಾಗ ಮನುಷ್ಯನೂ ತಾನು ಮನುಷ್ಯ ಎಂಬುದನ್ನು ಮರೆತು ಹೇಗೆ ಮೃಗವಾಗುತ್ತಾನೆ ಎಂಬುದನ್ನು ತೋರಿಸಲಾಗಿದೆ.
ಇಷ್ಟು ಬಿಗ್ಗಿಬಿಗಿಯಾದ ಚಿತ್ರಕಥೆ ನನಗೊಂದು ಅಚ್ಚರಿಯಾಗಿಯೇ ಉಳಿದಿದೆ. ಕೆಲವು ಕಡೆ ನಿಧಾನಗತಿಯಲ್ಲಿ ಸಾಗಿ, ತನಗೆ ಬೇಕಾದೆಡೆ ಭಯಂಕರ ವೇಗ ಪಡೆದುಕೊಳ್ಳುವ ಚಿತ್ರಕಥೆಯು ಒಂದೊಂದೇ ಕ್ಲೂಗಳನ್ನು ಕೊಡುತ್ತಾ ಇವನಾ ಕೊಲೆಗಾರ, ಅವನಾ ಕೊಲೆಗಾರ ಅಂತ ನಮ್ಮನ್ನೂ ತನ್ನ ಜೊತೆ ಯೋಚಿಸಲು ಹಚ್ಚಿ ನಮ್ಮನ್ನು ಬ್ಯುಸಿಯಾಗಿಡುತ್ತದೆ. ಇದಕ್ಕೆ ಡೆಡ್ಲಿ ಕಾಂಬಿನೇಷನ್ ಆಗಿರುವುದು ‘ಬ್ಯಾಕ್ ಗ್ರೌಂಡ್ ಮ್ಯೂಸಿಕ್’…..
ಅತ್ಯತ್ತಮವಾದ ಹಿನ್ನೆಲೆ ಸಂಗೀತದ ಜೊತೆಗೆ, ಸಿನೆಮಾ ದೃಶ್ಯಗಳ ಜೋಡಣೆ ಅದ್ಭುತವಾಗಿದೆ. ಸಂಕಲನವಾಗಲೀ, ಕ್ಯಾಮೆರಾ ವರ್ಕ್ ಆಗಲೀ ಎಲ್ಲವೂ ಪರ್ಫೆಕ್ಟ್ 👌👌👌
ಕನ್ನಡದವರು ಇಂತಹಾ ವಿಷಯಾಧಾರಿತ ಚಿತ್ರಗಳನ್ನು ತೆಗೆಯುತ್ತಿರುವುದು ಬಹಳ ಸಂತಸದ ವಿಷಯ. ‘ಹೀರೋಯಿಸಂ’ನಿಂದ ದೂರವಿರುವ ಇಂತಹಾ ಸಿನೆಮಾಗಳು ಸಿನೆಮಾಸಕ್ತರನ್ನು ಸೆಳೆಯುವಲ್ಲಿ ಅನುಮಾನವೇ ಇಲ್ಲ. ಒಬ್ಬ ನಿಜವಾದ ಸಿನೆಮಾ ರಸಿಕ ಈ ಸಿನೆಮಾವನ್ನು ಅದ್ಭುತವಾಗಿ ಎಂಜಾಯ್ ಮಾಡಬಲ್ಲ. ಹಾಗೆ ಎಂಜಾಯ್ ಮಾಡಿಸುವ ತಾಕತ್ತು ಸಿನೆಮಾಗಿದೆ.