ಭಾರತ; ಅದರಲ್ಲೂ ವಿಶೇಷವಾಗಿ ಕರ್ನಾಟಕ ಅನೇಕ ವಿವಿಧ ಬಗೆಯ ಸಂಸ್ಕೃತಿಗಳ ತವರೂರು. ಅನೇಕ ಬಗೆಯ ವೇಷ-ಭೂಷಣಗಳು, ಆಚಾರ-ಪದ್ಧತಿಗಳು, ಸಾಂಸ್ಕೃತಿಕ ಹಬ್ಬ-ಜಾತ್ರೆಗಳು ನಮ್ಮ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿವೆ. ಅದರಲ್ಲೂ ಜಾತ್ರೆ ಎಂದೊಡನೆ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರಲ್ಲೂ ಅದೇನೋ ರೀತಿಯ ಹೊಸ ಹುಮ್ಮಸ್ಸು ಜಿನುಗುತ್ತದೆ. ಊರು ದೇವರ ಜಾತ್ರೆ, ಜನಗಳ ಜಾತ್ರೆ, ದನಗಳ ಜಾತ್ರೆ, ತಿಂಡಿ-ತಿನಿಸುಗಳ ಜಾತ್ರೆ.. ಹೀಗೆ ಅನೇಕ ಬಗೆಯ ಜಾತ್ರೆಗಳನ್ನು ನಾವು ಖಂಡಿತ ಒಮ್ಮೆಯಾದರೂ ನೋಡಿಯೇ ಇರುತ್ತೇವೆ. ಆದರೆ ನಾವು ಹಿಂದೆಂದೂ ನೋಡಿಯೇ ಇರದ ಹೊಸ ರೀತಿಯ ಜಾತ್ರೆಯೊಂದು ಬರುವ ಭಾನುವಾರ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ದಲ್ಲಿ ನಡೆಯಲಿದೆ. ಅದೇ ಕಟ್ ಔಟ್ ಜಾತ್ರೆ.
ಏನಿದು ಕಟ್ ಔಟ್ ಜಾತ್ರೆ ಎಂದಿರಾ? ಸೆಪ್ಟೆಂಬರ್ 18 ಬಂತೆಂದರೆ ಸಾಕು ಕನ್ನಡ ಸಿನಿಮಾ ರಸಿಕರ ಪಾಲಿಗೆ ಒಂದು ರೀತಿಯ ಹಬ್ಬ ಇದ್ದಂತೆ. ಕನ್ನಡ ಸಿನಿಮಾ ಲೋಕವನ್ನು ದಶಕಗಳ ಕಾಲ ಆಳಿದ ಅಭಿನಯ ಭಾರ್ಗವರ ಹುಟ್ಟಿದ ಹಬ್ಬ ಅಂದು. ವಿಷ್ಣುದಾದಾರ ಅಭಿಮಾನಿಯಾದ ವೀರಕಪುತ್ರ ಶ್ರೀನಿವಾಸ್ ಅವರು ಪ್ರತಿ ವರ್ಷ ಡಾ.ವಿಷ್ಣುವರ್ಧನ್ ಹುಟ್ಟಿದ ಹಬ್ಬವನ್ನು ಹೊಸ ರೀತಿಯಲ್ಲಿ ಆಚರಿಸುವುದು ನಮಗೆಲ್ಲಾ ಗೊತ್ತೇ ಇದೆ. ಪ್ರತಿ ವರ್ಷ ಸೆಪ್ಟೆಂಬರ್ ಹತ್ತಿರ ಬರುತ್ತಿದ್ದಂತೆ ವೀರಕಪುತ್ರ ಶ್ರೀನಿವಾಸ್ ಅವರು ಈ ಬಾರಿ ವಿಷ್ಣುದಾದ ಹುಟ್ಟಿದಹಬ್ಬಕ್ಕೆ ಏನು ಸರ್ಪ್ರೈಸ್ ಕೊಡ್ತಾರೆ? ಯಾವ ರೀತಿಯ ಹೊಸ ಆಲೋಚನೆ ಮಾಡುತ್ತಿದ್ದಾರೆ? ಭಿನ್ನವಾಗಿ ಏನು ಪ್ಲಾನ್ ಮಾಡ್ತಾರೆ? ಎಂಬ ಪ್ರಶ್ನೆಗಳು ಬಹುತೇಕರ ಮನದಲ್ಲಿ ಒಮ್ಮೆಯಾದರೂ ಖಂಡಿತಾ ಸುಳಿಯುತ್ತದೆ. ಹೌದು! ವೀರಕಪುತ್ರ ಶ್ರೀನಿವಾಸ್ ಸ್ಪೆಷಾಲಿಟಿಯೇ ಅದು. ಅಭಿಮಾನವೆಂದರೆ ಅದು ಕೇವಲ ಭಾವನೆಯಲ್ಲ. ಅದಕ್ಕೊಂದು ಮೂರ್ತರೂಪ ಕೊಟ್ಟಾಗ ಆ ಭಾವನೆಗೆ ಜೀವ ಬರುತ್ತದೆ. ಹೊಸ ಹೊಸ ರೀತಿಯಲ್ಲಿ ತಮ್ಮ ಇಷ್ಟದವರ ಹುಟ್ಟಿದ ಹಬ್ಬವನ್ನು ಆಚರಿಸಿದಾಗ ಅದೊಂದು ರೀತಿಯ ಹೊಸ ಹುರುಪು, ಹುಮ್ಮಸ್ಸು, ಒಂದು ರೀತಿಯ ಮೇನಿಯಾ ಇಡೀ ಜನರನ್ನು ಆವರಿಸುತ್ತದೆ ಎಂಬ ಸತ್ಯ ಇವರಿಗೆ ಚೆನ್ನಾಗಿ ಗೊತ್ತು. ಹಾಗಾಗಿಯೇ ಪ್ರತಿವರ್ಷ ಒಂದಲ್ಲ ಒಂದು ಹೊಸ ಬಗೆಯ ರೀತಿಯಲ್ಲಿ ಆಲೋಚಿಸಿ, ಅದಕ್ಕೊಂದು ಮೂರ್ತರೂಪ ಕೊಟ್ಟು, ವಿಭಿನ್ನವಾಗಿ ವಿಷ್ಣುದಾದಾರ ಹುಟ್ಟಿದಹಬ್ಬವನ್ನು ಆಚರಿಸುವ ಸಂಪ್ರದಾಯವನ್ನು ಹುಟ್ಟಿಹಾಕಿದ್ದಾರೆ. ಅದರ ಮುಂದುವರೆದ ಭಾಗವೇ ಈ ವರ್ಷದ ಕಟ್ ಔಟ್ ಜಾತ್ರೆ.
ನಾಗರಹಾವು ಚಿತ್ರದಿಂದ ಆಪ್ತರಕ್ಷಕ ಚಿತ್ರದ ವರೆಗೆ ವಿಷ್ಣುವರ್ಧನ್ ಅಭಿನಯ ಮಹತ್ತರ 50 ಚಿತ್ರಗಳ 50 ವಿವಿಧ ಬಗೆಯ ಕಟ್ ಔಟ್ ಗಳನ್ನೂ ವಿಷ್ಣು ಅಭಿಮಾನಿಗಳಿಂದ ಮಾಡಿಸಿ, ಅಭಿಮಾನ್ ಸ್ಟುಡಿಯೋ ದಲ್ಲಿ ಕಟ್ ಔಟ್ ಜಾತ್ರೆಯನ್ನೇ ಏರ್ಪಡಿಸಿದ್ದಾರೆ. ಹೌದು! ಬಹುಶಃ ಈ ರೀತಿಯ ಜಾತ್ರೆ ನಡೆದ ದಾಖಲೆ ಇತಿಹಾಸದಲ್ಲಿ ಇದೇ ಮೊದಲೇನೋ. ಒಂದಲ್ಲ ಎರಡಲ್ಲ, ಐವತ್ತು. ಬರೋಬ್ಬರಿ ಐವತ್ತು ಕಟ್ ಔಟ್ ಗಳು ಎಂದರೆ ಹೇಗಿರಬೇಡ? ಒಮ್ಮೆ ಊಹಿಸಿ. ಬರುವ ಭಾನುವಾರ ಅಭಿಮಾನ್ ಸ್ಟುಡಿಯೋ ಸಂಪೂರ್ಣವಾಗಿ ವಿಷ್ಣುವರ್ಧನ್ ಕಟ್ ಔಟ್ ಗಳಿಂದ ತುಂಬಿಹೋಗುವುದಂತೂ ನಿಜ. ಈ ಜಾತ್ರೆ ವಿಶ್ವದಾಖಲೆಯಾದರೂ ಅಚ್ಚರಿಯಿಲ್ಲ. ನಭೂತೋ ನ ಭವಿಷ್ಯತಿ ಎಂಬಂತಹ ಈ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡ ಸಿನಿಮಾ ಅಭಿಮಾನಿಗಳು ಆಗಮಿಸುವುದಂತೂ ನಿಜ. ಸೆಪ್ಟೆಂಬರ್ 18 ಭಾನುವಾರ ಕೂಡ ಆಗಿರುವುದರಿಂದ ಈ ಬಾರಿ ನೀವು ಕೂಡ ಮರೆಯದೆ ಅಭಿಮಾನ್ ಸ್ಟುಡಿಯೋ ಕಡೆ ಬನ್ನಿ. ಇಂತಹ ಜಾತ್ರೆಯನ್ನು ನೋಡುವ ಭಾಗ್ಯ ಬಹುಶಃ ಮತ್ತೆ ಜೀವನದಲ್ಲಿ ಸಿಗಲಾರದೇನೋ. ವಿಶ್ವದಾಖಲೆಯಾಗಬಲ್ಲ ಈ ಜಾತ್ರೆಗೆ ನೀವೂ ಕೂಡ ಸಾಕ್ಷಿಯಾಗಿ. ಈ ಭಾನುವಾರ ನಿಮ್ಮ ಸಮಯವನ್ನು ವಿಷ್ಣುವರ್ಧನ್ ಕಟ್ ಔಟ್ ಜಾತ್ರೆಗಾಗಿ ಮೀಸಲಿಡಿ. ಖಂಡಿತ ಬರ್ತೀರಾ ತಾನೇ?
ವಿಷ್ಣುವರ್ಧನ್ ಅಭಿಮಾನಿಯಾದ ವೀರಕಪುತ್ರ ಶ್ರೀನಿವಾಸ್ ಅವರನ್ನು ಫೇಸ್ಬುಕ್ ನಲ್ಲಿ ಹಿಂಬಾಲಿಸಲು ಇಲ್ಲಿದೆ ಲಿಂಕ್: https://www.facebook.com/Veerakaputra/
ತಮ್ಮ ವಿಭಿನ್ನ ಅಭಿನಯದ ಮೂಲಕ ದಶಕಗಳ ಕಾಲ ನಮ್ಮನ್ನು ಅಳಿಸಿದ, ನಗಿಸಿದ, ಮೈ ಮರೆಯುವಂತೆ ಮಾಡಿದ ಅಭಿನಯ ಭಾರ್ಗವನಿಗೆ ಚಿತ್ರೋದ್ಯಮ.ಕಾಮ್ ತಂಡದಿಂದ ಅಡ್ವಾನ್ಸ್ ಬರ್ತಡೇ ವಿಷಸ್. ವಿ ಮಿಸ್ ಯು ವಿಷ್ಣುದಾದ. ವಿ ಲವ್ ಯು.