2022 ಕನ್ನಡ ಸಿನಿಮಾಗಳ ವರ್ಷ. ಕೆ.ಜಿ.ಎಫ್., ವಿಕ್ರಾಂತ್ ರೋಣ, ಚಾರ್ಲಿ ಯಂತಹ ಬಿಗ್ ಹಿಟ್ ಚಿತ್ರಗಳನ್ನು ಕೊಟ್ಟಂತಹ ವರ್ಷ. ಅದೊಂದು ಕಾಲವಿತ್ತು; ಕನ್ನಡ ಸಿನಿಮಾಗಳು ಕರ್ನಾಟಕ ಬಿಟ್ಟು ಪಕ್ಕದ ತಮಿಳುನಾಡು, ಆಂಧ್ರಗಳಲ್ಲಿ ರಿಲೀಸ್ ಆಗಲೂ ಕೂಡ ಹೆಣಗಾಡಬೇಕಿತ್ತು. ಆದರೆ ಕಾಲ ಬದಲಾಗಿದೆ. ನಂಬುತ್ತೀರೋ ಬಿಡ್ತೀರೋ; ಈ ವರ್ಷ ಅತಿ ಹೆಚ್ಚು ಹಿಟ್ ಚಿತ್ರಗಳನ್ನು ಕೊಟ್ಟಿರುವ ಭಾರತೀಯ ಚಿತ್ರರಂಗವೆಂದರೆ ನಮ್ಮ ಸ್ಯಾಂಡಲ್ವುಡ್. ಈಗ ಇನ್ನೂ ಸೆಪ್ಟೆಂಬರ್ ಕೊನೆಯಲ್ಲಿದ್ದೇವೆ.2022 ಕಳೆಯಲು ಇನ್ನೂಮೂರು ತಿಂಗಳು ಬಾಕಿಯಿದೆ. ಕಬ್ಜ, ಕ್ರಾಂತಿ ಸೇರಿದಂತೆ ಇನ್ನೂ ದೊಡ್ಡ ಸಿನಿಮಾಗಳು ರಿಲೀಸ್ ಆಗಲು ರೆಡಿಯಾಗಿವೆ. ಅಷ್ಟರಲ್ಲೇ ಸದ್ದಿಲ್ಲದೇ ದೇಶದ ಸಿನಿಪ್ರಿಯರ ಮನಸ್ಸನ್ನು ಕದಿಯಲು ಕಾಂತಾರ ಸಿದ್ಧವಾಗಿದೆ.
ಹೊಂಬಾಳೆ ಫಿಲಂಸ್ ಅಡಿಯಲ್ಲಿ ಮೂಡಿಬಂದಿರುವ ಕಾಂತಾರ ಬಗ್ಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಉಪ್ಪು-ಹುಳಿ-ಖಾರ ಎಲ್ಲ ಪರ್ಫೆಕ್ಟ್ ಪ್ರಮಾಣದಲ್ಲಿ ಬೆರೆಸಿ ತಯಾರಾಗಿರುವ ಬಿರಿಯಾನಿ ಎಂದಷ್ಟೇ ಹೇಳಬಹುದು. ದುರ್ಬಿನು ಹಾಕಿ ಹುಡುಕಿದರೂ ಒಂದೇ ಒಂದು ನೆಗೆಟಿವ್ ಅಂಶ ಕಾಣಲಾರದಷ್ಟರ ಮಟ್ಟಿಗೆ ಶ್ರಮ ಹಾಕಿ ಕೆಲಸ ಮಾಡಿದೆ ಕಾಂತಾರ ಚಿತ್ರ ತಂಡ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಹೊಸ ಪ್ರಯತ್ನದಲ್ಲಿ ರಿಷಬ್ ಶೆಟ್ಟಿ ಅಂಡ್ ಟೀಮ್ ಗೆದ್ದು ಬೀಗಿದೆ.
ಅಜನೀಶ್ ಲೋಕನಾಥ್ ಅವರ ಬಿ.ಜಿ.ಎಂ. ಚಿತ್ರದ ಮೊದಲನೇ ಪ್ಲಸ್ ಪಾಯಿಂಟ್. ಅತ್ತ ಅಬ್ಬರವೂ ಇಲ್ಲದ, ಇತ್ತ ತೀರಾ ಮಂಕಾಗಿಯೂ ಇಲ್ಲದ, ಸೀನಿಗೆ ಪೂರಕವಾಗುವ ಮ್ಯೂಸಿಕ್ ನೀಡುವುದರಲ್ಲಿ ಅಜನೀಶ್ ಗೆದ್ದಿದ್ದಾರೆ. ಇನ್ನು ಅರುಣ್ ಕಶ್ಯಪ್ ಅವರ ಸಿನಿಮಾಟೋಗ್ರಫಿ ಯ ಬಗ್ಗೆ ಖಂಡಿತ ಹೇಳಲೇಬೇಕು. ಇಂತಹ ಸಿನಿಮಾಗಳ ಮುಖ್ಯ ಜೀವಾಳವೇ ಕ್ಯಾಮೆರಾ. ನೆರಳು ಬೆಳಕಿನಾಟದಲ್ಲಿ ಸ್ವಲ್ಪ ಏರುಪೇರಾದರೂ ಪ್ರೇಕ್ಷಕನಿಗೆ ರುಚಿಸುವುದಿಲ್ಲ. ಆದರೆ ಅರವಿಂದ್ ಕಶ್ಯಪ್ ಈ ವಿಚಾರದಲ್ಲಿ ಪ್ರೇಕ್ಷಕನಿಗೆ ಖುಷಿ ನೀಡುವ,ಕಣ್ಣಿಗೆ ಹಬ್ಬ ಉಂಟುಮಾಡುವ ರೀತಿ ಕ್ಯಾಮೆರಾದಲ್ಲಿ ಆಟವಾಡಿದ್ದಾರೆ. ಇನ್ನು ಕ್ಯಾಪ್ಟನ್ ಆಫ್ ದಿ ಶಿಪ್ ವಿಷಯಕ್ಕೆ ಬಂದರೆ ದಕ್ಷಿಣ ಕನ್ನಡದ ಸಂಸ್ಕೃತಿಯಾದ ಕಂಬಳ, ಭೂತಾರಾಧನೆ, ಕಾರಣಿಕ ಪರಂಪರೆಗಳನ್ನು ಆ ಭಾಗದ ಜನರ ಜೀವನಾಡಿಯಾಗಿರುವ ಕಾಡಿನ ಜೊತೆ ಸೇರಿಸಿ, ಅದಕ್ಕೊಂದಷ್ಟು ಪತ್ರಗಳನ್ನು ಪೋಣಿಸಿ, ನಯವಾದ ಕತೆಯನ್ನು ಹೊಸೆದು, ಅಚ್ಚುಕಟ್ಟಾಗಿ ಅದೆಲ್ಲವನ್ನೂ ಚಿತ್ರಿಸಿ ತಂದು ಪರದೆಯ ಮೇಲೆ ಇಟ್ಟಿದ್ದಾರೆ.
ಕಾಡನ್ನೇ ಉಸಿರಾಗಿಸಿಕೊಂಡು, ಕಾಡನ್ನೇ ತಮ್ಮ ದೈವವೆಂದು ನಂಬಿ ಜೀವಿಸುತ್ತಿರುವ ಜನರು ಒಂದು ಕಡೆ. ಕಾಡನ್ನು ತನ್ನ ಪ್ರಾಣವನ್ನಾಗಿ ಪ್ರೀತಿಸುವ ಫಾರೆಸ್ಟ್ ಆಫೀಸರ್ ಒಬ್ಬರು ಮತ್ತೊಂದು ಕಡೆ. ಆ ಇಬ್ಬರ ನಡುವೆ ನಡೆಯುವ ಮಾನಸಿಕ ಯುದ್ಧವೇ ಈ ಕತೆಯ ಜೀವಾಳ. ಇಬ್ಬರ ಉದ್ದೇಶವೂ ಕಾಡನ್ನು ಉಳಿಸುವುದೇ ಆದರೂ ಕೂಡ, ಅವರಿಬ್ಬರ ವಿಧಾನ ಬೇರೆ. ಇದರಲ್ಲಿ ಯಾರು ಸರಿ? ಯಾರು ತಪ್ಪು? ಕಡೆಯಲ್ಲಿ ಗೆದ್ದವರು ಯಾರು? ಸಿನಿಮಾ ನೋಡಿ. ಇದಕ್ಕೆ ಉತ್ತರ ತಿಳಿಯುತ್ತದೆ. ಅಷ್ಟೇ ಅಲ್ಲದೆ, ನಮ್ಮ ನಾಡಿನ ಆಚಾರಗಳನ್ನು ಸಿಂಬಾಲಿಕ್ ಆಗಿ ತೋರಿಸಿರುವ ನಿರ್ದೇಶಕರ ಇಂಡಿಯಾಗೆ ಖಂಡಿತ ಫುಲ್ ಮಾರ್ಕ್ಸ್ ನೀಡಲೇಬೇಕು. ಉದಾಹರಣೆಗೆ, ಭೂಮಿಗೆ ಸಂಕಷ್ಟ ಎದುರಾದಾಗ, ವಿಷ್ಣುವು ವರಾಹ ರೂಪಿಯಾಗಿ ಬಂದು ಭೂಮಿಯನ್ನು ಕಾಪಾಡಿದ ಕತೆ ನಮಗೆಲ್ಲಾ ಗೊತ್ತು. ಈ ಘಟನೆಯನ್ನು ಚಿತ್ರದ ಕತೆಗೆ ರೂಪಕವಾಗಿ ಹಂದಿಯ ರೂಪದಲ್ಲಿ ಬಳಸಿದ್ದಾರೆ. ಕಾಡಿನ ನಡುವೆ ತನ್ನಿಷ್ಟದಂತೆ ಬದುಕಿತ್ತಿದ್ದ ವ್ಯಕ್ತಿಯೊಬ್ಬ ಭೂಮಿಯ ವಿಚಾರದಿಂದ ಹೇಗೆ ಪರಿವರ್ತನೆಯಾಗುತ್ತಾನೆ ಎಂಬುದೇ ಚಿತ್ರದ ಕಥಾವಸ್ತು.
ಇನ್ನು ತಾರಾಗಣದ ವಿಚಾರಕ್ಕೆ ಬಂದರೆ ರಿಷಬ್ ಶೆಟ್ಟಿ ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗುವುದು ಖಂಡಿತ. ಅದರಲ್ಲೂ ಕಡೆಯ ಇಪ್ಪತ್ತು ನಿಮಿಷದ ಕ್ಲೈಮ್ಯಾಕ್ಸ್ ನಲ್ಲಂತೂ ಪ್ರೇಕ್ಷಕರನ್ನು ಸೀಟಿನ ಅಂಚಿಗೆ ತಂದು ಕೂರಿಸಿದ್ದಾರೆ ರಿಷಬ್ ಶೆಟ್ಟಿ. ಬೆಂಗಳೂರಿನಿಂದ ನೇರವಾಗಿ ಕುಂದಾಪುರಕ್ಕೇ ನಮ್ಮನ್ನು ಸಿನಿಮಾದ ಮೂಲಕ ಕರೆದುಕೊಂಡು ಹೋಗಿದ್ದಾರೆ. ಪ್ರಕಾಶ್ ಕೇತುಮೀನದು ಮತ್ತು ಪ್ರಮೋದ್ ಶೆಟ್ಟಿಯವರ ಹಾಸ್ಯ ಪಾತ್ರಗಳು ಚಿತ್ರಕ್ಕೆ ಪೂರಕವಾಗಿದೆ. ಯಾವುದೇ ಡಬಲ್ ಮೀನಿಂಗ್ ಇಲ್ಲದೆ, ಪರಿಶುದ್ಧ ಕುಂದಾಪ್ರ ಕನ್ನಡ ಶೈಲಿಯ ಹಾಸ್ಯವನ್ನು ಸವಿಯಲು ಚಿತ್ರಮಂದಿರಕ್ಕೆ ಹೋಗಿ ನೋಡಿ. ಆಗ ಇದರ ರುಚಿ ನಿಮಗೆ ತಿಳಿಯುತ್ತದೆ. ಯಾವುದೇ ಪಾತ್ರಕ್ಕಾದರೂ ಜೀವ ತುಂಬಬಲ್ಲ ಅಚ್ಯುತ್ ರವರು ಈ ಸಿನಿಮಾದ ಮೂಲಕ ಮತ್ತೆ ಮೋಡಿ ಮಾಡಿದ್ದಾರೆ. ಸಿನಿಮಾದ ಬಹುಮುಖ್ಯ ಪಾತ್ರ ಅಚ್ಯುತ್ ರವರದ್ದು. ಈ ಪಾತ್ರ ಇಲ್ಲದೆ ಹೋದರೆ ಸಿನಿಮಾವೇ ಇರಲಾರದಷ್ಟು ಮಟ್ಟಿನ ತೂಕ ಈ ಪಾತ್ರಕ್ಕಿದೆ. ಸಪ್ತಮಿ ಗೌಡ ಕೂಡ ಕತೆಗೆ ಬಹುಮುಖ್ಯ ಕೊಡುಗೆಯನ್ನೇ ನೀಡಿದ್ದಾರೆ. ಒಂದೇ ಒಂದು ಅನವಶ್ಯಕ ಪಾತ್ರಗಳಾಗಲಿ, ಅನವಶ್ಯಕ ದೃಶ್ಯ ಅಥವಾ ಸಂಭಾಷಣೆಯಾಗಲೀ ಚಿತ್ರದಲ್ಲಿಲ್ಲ. ಅಷ್ಟೂ ಪಾತ್ರಗಳೂ, ದೃಶ್ಯಗಳೂ ಚಿತ್ರಕ್ಕೆ ಬೇಕಾಗಿದ್ದು, ಅವುಗಳನ್ನು ನಿಭಾಯಿಸಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಊಹಿಸಲೂ ಆಗದಂತಹ ಘಟನೆಗಳು ಚಿತ್ರದ ಹೈಲೈಟ್.
ಒಟ್ಟಿನಲ್ಲಿ ಅದ್ಭುತವಾದಂತಹ ದೃಶ್ಯಕಾವ್ಯವೊಂದು ಕರ್ನಾಟಕದ ಸಿನಿಮಾ ಪರದೆಯ ಮೇಲೆ ಮೂಡಿಬಂದಿದೆ. ಈ ಸಿನಿಮಾವನ್ನು ಮಿಸ್ ಮಾಡಿಕೊಂಡರೆ ಅದ್ಭುತ ಸಿನಿಮಾವೊಂದನ್ನು ಮಿಸ್ ಮಾಡಿಕೊಂಡಂತೆ. ತಪ್ಪದೆ ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ತಪ್ಪದೆ ಈ ಸಿನಿಮಾ ನೋಡಿ. ಅಂದಹಾಗೆ ಕಾಂತಾರ ಅಂದರೆ ಸೇತುವೆ (ಬ್ರಿಡ್ಜ್) ಎಂದು ಅರ್ಥ. ಈ ಹೆಸರಿಗೂ, ಚಿತ್ರದ ಕತೆಗೂ ಏನು ಸಂಬಂಧ ಎನ್ನುವ ಪ್ರಶ್ನೆಗೆ ಕೂಡ ಸಿನಿಮಾದಲ್ಲೇ ಉತ್ತರ ಇದೆ.
ಕಾಂತಾರ
ತಾರಾಗಣ:- ರಿಷಬ್ ಶೆಟ್ಟಿ, ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್,
ನಿರ್ದೇಶನ:- ರಿಷಬ್ ಶೆಟ್ಟಿ.
ನಿರ್ಮಾಣ:- ವಜಯ್ ಕಿರಗಂದೂರ್( ಹೊಂಬಾಳೆ ಫಿಲ್ಮ್ಸ್)
ಸಂಗೀತ ನಿರ್ದೇಶನ:-ಅಜನೀಶ್ ಲೋಕನಾಥ್.
chitrodyama rating : 4.5 / 5