‘ಗಂಡೊಂದು ಹೆಣ್ಣಾರು’

ಆನಂದ್ ಅತಿ ಶ್ರೀಮಂತ. ಅವನಿಗೆ ಸಿಕ್ಕ ಅತಿ ವೃದ್ಧ ದಂಪತಿಗಳು ಹೆಂಡತಿಗಿರಬೇಕಾದ ಆರು ಗುಣಗಳನ್ನು ಹೇಳುತ್ತಾರೆ. ಆನಂದ್ ಅವಳನ್ನು ಹುಡುಕಿ ಹೊರಡುತ್ತಾನೆ. ಒಬ್ಬ ಹಾವಾಡಿಗರ ಹುಡುಗಿ, ಒಬ್ಬ ಹುಚ್ಚಿಯಂತೆ ನಟಿಸುವವಳು, ಒಬ್ಬ ನಾಟಕದ ಹುಡುಗಿ ಸಿಗುತ್ತಾರೆ. ಮೂವರೂ ಅವನ ಮನೆಗೆ ಪ್ರಸಾದನಗಳನ್ನು ಮಾರಲು ಬಂದಿದ್ದ ವೀಣಾಳನ್ನು ಹೋಲುತ್ತಾರೆ. ಇವನು ವೀಣಾಳನ್ನು ಹುಡುಕಿ ಹೋದಾಗ ಅವಳ ಮನೆಗೆ ಬೆಂಕಿ ಬಿದ್ದು ಅವಳೂ, ಅವಳ ತಂದೆಯೂ ತೀರಿಕೊಂಡಿರುತ್ತಾರೆ.

ಇವನ ಗೆಳೆಯ ಡಿಕ್ಕಿ ತಪ್ಪು ವಿಳಾಸಕ್ಕೆ ಹೋಗಿ ತನಗಾಗಿ ಒಬ್ಬ ಹುಡುಗಿಯನ್ನು ದಕ್ಕಿಸಿಕೊಳ್ಳುತ್ತಾನೆ.

ಆನಂದ ತನಗೆ ಸಿಕ್ಕವಳೇ ಸರಿಯಾದ ಆರು ಗುಣವುಳ್ಳವಳು ಎಂದು ಅವಳನ್ನು ವರಿಸಲು ನಿಶ್ಚಯಿಸಿಕೊಳ್ಳುವ ವೇಳೆಗೆ ಅವಳೊಬ್ಬ ಕೃತ್ರಿಮ ಹೆಣ್ಣು ಎಂದು ತಿಳಿಯುತ್ತದೆ. ಅವಳ ಕೊಲೆ ಆಪಾದನೆ ಇವನ ಮೇಲೇ ಬರುತ್ತದೆ.

ಆನಂದ ಈ ಎಲ್ಲ ಗೋಜಲುಗಳಿಂದ ಬಿಡಿಸಿಕೊಳ್ಳುವುದೇ ಚಿತ್ರದ ಉಳಿದ ಭಾಗ. ಸರಿಸುಮಾರು 3 ಗಂಟೆ ಕಾಲದ ಈ ಚಿತ್ರದಲ್ಲಿ ಬಂದೆ ನೀ ಬಂದೆ, ಬೆಳದಿಂಗಳಾಗಿ ಬಂದೆ, ಕಾರಿನ ಸಾಮ್ಯೋರಾ, ಬಂಗಾರ ನೋಟ ಹಾಡುಗಳು ರಾಜ್, ಭಾರತಿಗೆ. ಮುಟ್ಟಬೇಡ ಮಾತಾಡಬೇಡ ನರಸಿಂಹರಾಜು, ಮೈನಾವತಿಗೆ. ಕೃಷ್ಣ ಪಾರಿಜಾತದ ಒಂದು ಸುಂದರ ನಾಟಕದ ಹಾಡಿದೆ. 

ಬೆಡಗಿ ಭಾರತಿ ಅನೇಕ ರೂಪಗಳಲ್ಲಿ, ವೇಷಗಳಲ್ಲಿ ನಮಗೆ ದರ್ಶನ ಕೊಡುತ್ತಾರೆ. ಆದರೆ ಇದರಲ್ಲಿನ ಅತ್ಯಂತ ಸುಂದರ ನೋಟವೆಂದರೆ ರಾಜ್‍ಕುಮಾರ್. ಈ ಸಿನಿಮಾದಲ್ಲಿ ಬಹಳ ಅಂದವಾಗಿ ಕಾಣುತ್ತಾರೆ. ನಡುವೆ ಶ್ರೀಕೃಷ್ಣನ ವೇಷ ಹಾಕಲು ಮೀಸೆ ತೆಗೆದ ನಂತರ ಸಿನಿಮಾದ ಮುಂದಿನ ದೃಶ್ಯಗಳಲ್ಲಿ ಮೀಸೆ ಇಲ್ಲದೆ ಬೆಣ್ಣೆ ಕೃಷ್ಣನಂತೆ ಮುದ್ದಾಗಿ ಕಾಣುತ್ತಾರೆ.

ಹಳೆಯ ಅನೇಕ ಡ್ಯೂಯೆಟ್‍ಗಳಿಗೆ ರಾಜ್ ಭಾರತಿ ಒಂದು ಸನ್ನಿವೇಶದಲ್ಲಿ ಹೆಜ್ಜೆ ಹಾಕಿದ್ದಾರೆ. 

ಒಟ್ಟಿನಲ್ಲಿ ರಾಜ್ ಅವರನ್ನು ನೋಡಲೆಂದೇ ಈ ಚಿತ್ರ ನೋಡಬಹುದು. ಬಹಳವೇ ಆನಂದ ಕೊಟ್ಟ ಚಿತ್ರ ‘ಗಂಡೊಂದು ಹೆಣ್ಣಾರು’.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply