ಪಾಂಡೇಶ್ವರ ಕಾಳಿಂಗರಾಯರು

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಹಿನ್ನೆಲೆ ಗಾಯಕರು ಮತ್ತು ಸಂಗೀತ ನಿರ್ದೇಶಕರು – ಪಿ.ಕಾಳಿಂಗರಾಯ. ಪಿ.ಕಾಳಿಂಗರಾಯರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಹಿನ್ನೆಲೆ ಗಾಯಕರು ಮತ್ತು ಸಂಗೀತ ನಿರ್ದೇಶಕರು. ಆದರೆ ಈ ಗಾಯಕನ ಹೆಸರು ಇಂದಿನ ಪೀಳಿಗೆಯ ಬಹಳಷ್ಟು ಜನರಿಗೆ ಸರಿಯಾಗಿ ತಿಳಿದಿಲ್ಲ. ಹಿನ್ನೆಲೆ ಗಾಯಕರಾಗಿ ಮತ್ತು ಸಂಗೀತ ನಿರ್ದೇಶಕರಾಗಿ ಸಂಗೀತ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಎಷ್ಟು ಅಮೂಲ್ಯವಾದುದು ಎಂದು ತಿಳಿಸುವ ಉದ್ದೇಶದಿಂದ ಈ ಲೇಖನವನ್ನು ರಚಿಸಿದ್ದೇನೆ.
  ಕೈವಾರ ಮಹಾತ್ಮೆಯ ಓ ನಮೋ ನಾರಾಯಣ ಮತ್ತು ಕಿತ್ತೂರು ಚೆನ್ನಮ್ಮ ಚಿತ್ರದ ತಾಯಿ ದೇವಿಯನ್ನು ಕಾಣಲು ಹಂಬಲಿಸಿ ಈ ಎರಡು ಹಾಡುಗಳನ್ನು ಕೇಳಿದಾಗ  ಪಿ.ಕಾಳಿಂಗರಾಯರು ಕನ್ನಡ ಚಿತ್ರರಂಗದ ಶ್ರೇಷ್ಠ ಸಂಗೀತ ಮಾಂತ್ರಿಕರು ಎಂದು ಹೇಳುವುದರಲ್ಲಿ ಯಾವ ಸಂದೇಹವಿಲ್ಲ ಎನ್ನುವುದು ಅನ್ನುವುದು ಕೂಡ ಅಷ್ಟೇ ಸತ್ಯದ ವಿಷಯವಾಗಿದೆ.

  ಪಿ.ಕಾಳಿಂಗರಾಯರು ಅಗಸ್ಟ್ ೩೧, ೧೯೧೪ ರಲ್ಲಿ ಬಾರಕೂರಿನ ಮೂಡಕೇರಿಯಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಪಾಂಡೇಶ್ವರ ಕಾಳಿಂಗರಾಯರು. ಇವರ ತಂದೆ ಪಾಂಡೇಶ್ವರ್ ಪುಟ್ಟಯ್ಯ ಬಹಳ ವರ್ಷಗಳಿಂದ ಯಕ್ಷಗಾನದಲ್ಲಿ ಕಲಾ ಸೇವೆಯನ್ನು ಮಾಡುತ್ತಾ ಉತ್ತಮ ಹೆಸರನ್ನು ಗಳಿಸಿದ್ದರು. ಕಾಳಿಂಗರಾಯರು ತಮ್ಮ ಸೋದರಮಾವನ ಸಹಕಾರದಿಂದ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಹೀಗೆಯೇ ಒಂದು ಸಲ ಅವರ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಆಯೋಜಿಸಿದ್ದರು. ಇಲ್ಲಿ ಕಾಳಿಂಗರಾಯರು ನಿರ್ವಹಿಸಿದ ಚಂದ್ರಹಾಸನ ಪಾತ್ರದ ಅಭಿನಯಕ್ಕೆ ಮೆಚ್ಚಿ ಶರಣಾಗಿದ್ದ ಕಾರ್ಯಕ್ರಮದ ಮುಖ್ಯ ಅತಿಥಿ ಅಂದಿನ ಬ್ರಿಟಿಷ್ ಅಧಿಕಾರಿ ಗೌನ್ ಸಾಹೇಬರು ಚಿನ್ನದ ಪದಕವನ್ನು ನೀಡಿದ್ದರು. ಅಲ್ಲಿಯೇ ಇದ್ದ ರಂಗಭೂಮಿಯ ಪ್ರಖ್ಯಾತ ನಟ ಮುಂಡಾಜೆ ರಂಗನಾಥ ಭಟ್ಟರು ಈ ಬಾಲಕನ ಪ್ರತಿಭೆಯನ್ನು ಗುರುತಿಸಿ ತಮ್ಮ ಅಂಬಾಪ್ರಸಾದ್ ನಾಟಕ ಮಂಡಳಿಗೆ ಸೇರಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ತರಬೇತಿಯನ್ನು ಕೊಡಿಸಿದರು. ರಾಮಚಂದ್ರ ಬುವಾರ ಸಂಗೀತ ಶಾಲೆಯನ್ನು ಸೇರಿದ ನಂತರ ಅವರ ಸಂಗೀತ ಪಾಠದ ಪರಿಣಾಮದಿಂದ ಕಾಳಿಂಗರಾಯರ ಮನಸ್ಸಿನಲ್ಲಿದ್ದ ಸಂಗೀತಗಾರನಿಗೆ ಕೇಳಿ ಎಚ್ಚರವಾಗಿದ್ದರಿಂದ ಕಾಳಿಂಗರಾಯರನ್ನು ಸಂಗೀತವೇ ಬೆಳೆಸಿತು ಅಲ್ಲದೇ ಸಂಗೀತವೇ ಅವರ ಜೀವನವಾಯಿತು.

ಯಾವ ಜನ್ಮದ ಅನುಬಂಧವೋ ತಿಳಿಯದು ಬುವಾವರು ಬಾಲಕನ ಪ್ರತಿಭೆಯು ನಾಟಕದಲ್ಲಿಯೇ ವ್ಯರ್ಥವಾಗಬಾರದು ಎಂದು ನಿರ್ಧರಿಸಿ ಆಗ ಚಿತ್ರ ರಂಗದ ಕೇಂದ್ರ ಸ್ಥಾನವಾಗಿದ್ದ ಮದ್ರಾಸ್ ಗೆ ಕರೆದುಕೊಂಡು ಹೋಗಿ ಸಂಗೀತ ಶಾಲೆಯಲ್ಲಿ ಶಿಕ್ಷಕರನ್ನಾಗಿ ಸೇರಿಸಿದರು. ತನ್ನ ಗುರುಗಳು ತನ್ನ ಮೇಲೆ ಇಟ್ಟ ನಂಬಿಕೆ, ವಿಶ್ವಾಸ ವನ್ನು ಉಳಿಸಿಕೊಂಡ ರಾಯರು ಅಲ್ಲಿಯು ಉತ್ತಮ ಹೆಸರು ಗಳಿಸಿ ಮುಂದೆ ಅದೇ ಶಾಲೆಯ ಪ್ರಾಚಾರ್ಯರು ಆದರು. ಇಲ್ಲಿಂದಲೇ ಸಿನಿಮಾ ಒಡನಾಟ ಆರಂಭಿಸಿದ ರಾಯರು ತಮ್ಮ ೨೨ ನೇ ವಯಸ್ಸಿನಲ್ಲಿ ತಮ್ಮ ಸಂಬಂಧಿಯಾದ ೧೨ ವರ್ಷದ ಮೀನಾಕ್ಷಿ ಎಂಬ ಹುಡುಗಿಯನ್ನು ಮದುವೆಯಾದರು. ಇವರು ಮೂಲತಃ ಕನ್ನಡದವರಾದರು ಮೊದಲ ಬಾರಿಗೆ ಪ್ರೇಮ ಸಾಗರ್ ಎಂಬ ಹಿಂದಿ ಚಿತ್ರಕ್ಕೆ ಸಂಗೀತ ನೀಡಿದರು. ಇದೇ ಸಂದರ್ಭದಲ್ಲಿ ರಾಯರಿಗೆ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ನಿರ್ಮಾಪಕ ನಾಗೇಂದ್ರ ರಾಯರ ಪರಿಚಯವಾಯಿತು. ೧೯೫೫ ರಲ್ಲಿ ನಾಟಕ ರತ್ನ ಗುಬ್ಬಿ ವೀರಣ್ಣನವರು ಮಹಾನಾಟಕ ದಶಾವತಾರವನ್ನು ರಂಗಕ್ಕೆ ತಂದು ತಾವು ಗುರುತಿಸಿದ್ದ ಕಾಳಿಂಗರಾಯರಿಗೆ ಸಂಗೀತ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿದರು. ಗುಬ್ಬಿ ಕಂಪನಿಯಲ್ಲಿ ೫ ರಿಂದ ೬ ವರ್ಷಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ನಿರ್ವಹಿಸಿ ರಂಗ ನಾಟಕಗಳಿಗೂ ಹೊಸ ಶೈಲಿಯ ಹೊಸ ರಾಗವನ್ನು ಸಂಯೋಜಿಸಿ ಪ್ರಖ್ಯಾತರಾದರಲ್ಲದೆ ಕನ್ನಡದಲ್ಲಿ ಸುಗಮ ಸಂಗೀತ ಕ್ಷೇತ್ರಕ್ಕೆ ಭದ್ರವಾದ ಬುನಾದಿಯನ್ನು ಹಾಕಿದ್ದಾರೆ.

ಮುಂದುವರೆಯುವುದು…
ಲೇಖಕರು : ಶ್ರೀ ಸಂದೀಪ್ ಜೋಶಿ

ನನ್ನ ಹೆಸರು ಸಂದೀಪ ಜೋಶಿ, ಗಂಗಾವತಿ, ಜಿಲ್ಲೆ.ಕೊಪ್ಪಳ. ನಾನು ಮೂಲತಃ ಸ್ವ ಉದ್ಯೋಗಿಯಾಗಿದ್ದು ಹವ್ಯಾಸಿ ನಟ ಮತ್ತು ಬರಹಗಾರನಾಗಿದ್ದು ಇದುವರೆಗೂ ಹಲವಾರು ಲೇಖನಗಳನ್ನು ರಚಿಸಿದ್ದೇನೆ. ಇಂದಿನ ಮತ್ತು ಮುಂದೆ ಬರುವ ತಲೆಮಾರುಗಳಿಗೆ ನಮ್ಮ ಕನ್ನಡ ಚಿತ್ರರಂಗದ ಇತಿಹಾಸ ಮತ್ತು ಹಳೆಯ ಕನ್ನಡ ಕಲಾವಿದರ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ಕಲಾವಿದರ ಬಗ್ಗೆ ದೊರೆತ ಮಾಹಿತಿಯ ಆಧಾರದ ಮೇಲೆ ಅಧ್ಯಯನ ಮಾಡಿ ಕೆಲವು ಲೇಖನಗಳನ್ನು ರಚಿಸಿದ್ದೇನೆ. ಈ ಲೇಖನಗಳನ್ನು ಒಂದೆಡೆ ಸೇರಿಸಿ, ಚಿತ್ರೋದ್ಯಮ ವೆಬ್ಸೈಟ್ ನಲ್ಲಿ ಈ ಲೇಖನಗಳನ್ನು ಅಂಕಣಗಳ ರೂಪದಲ್ಲಿ ನಿಯಮಿತವಾಗಿ ಪ್ರಕಟಿಸಲಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ,
ಧನ್ಯವಾದಗಳು,
ಸಂದೀಪ್ ಜೋಶಿ, ಬರಹಗಾರರು

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply