ನಮ್ಮ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ..
ಬೆಲೆ ಕಟ್ಟಲಾಗದ ಬೆಟ್ಟದ ಹೂವು ನೀವು. ಮಿಸ್ಟರ್ ಪಫೆ೯ಕ್ಟ್ ನೀವು.
ಕನ್ನಡಿಗರ ಆರಾಧ್ಯ ದೈವ, ಅಭಿಮಾನಿಗಳ ಹೃದಯ ಸಿಂಹಾಸನಾಧೀಶ್ವರ, ಕರುನಾಡ ಕಲಾ ತಪಸ್ವಿ, ಕನ್ನಡ ಕಣ್ಮಣಿ, ಕಲೆಗಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟ ನಟಸಾರ್ವಭೌಮ, ಅಭಿಮಾನಿಗಳನ್ನೇ ದೇವರೆಂದು ಕರೆದ ಸರಳತೆಯ ಸಾಹುಕಾರ, ನಗುವಿನ ರಾಜಕುಮಾರ – ಪ್ರೀತಿಯ ಮುತ್ತು ಮುತ್ತು ರಾಜ್ ಜನಿಸಿದ ಗಾಜನೂರು. ಇಡೀ ವಿಶ್ವವೇ ಮೆಚ್ಚಿದ ಅಣ್ಣಾವ್ರು .
ನಮ್ಮ ಮನವಿ ಅಣ್ಣಾವ್ರು ಹುಟ್ಟಿ ಬೆಳೆದ ಆ ದೇವರ ಮನೆಯನ್ನು ನೋಡಲು ಸಹಸ್ರಾರು ಅಭಿಮಾನಿಗಳು ಹೋಗುತ್ತಿರುತ್ತಾರೆ. ಅಣ್ಣಾವ್ರು ಹುಟ್ಟಿ ಬೆಳೆದ ಈ ಮನೆ ನಮ್ಮಂತಹ ಅಸಂಖ್ಯಾತ ಕನ್ನಡಿಗರಿಗೆ ದೇವಾಲಯವೇ ಸರಿ. ಒಮ್ಮೆ ಆ ಸ್ಥಳಕ್ಕೆ ಹೋಗಿ ಸ್ವಲ್ಪ ಹೊತ್ತು ಕಾಲ ಕಳೆದರೆ ಮನಸ್ಸಿಗೆ ನೆಮ್ಮದಿ ಸಿಗುವುದು ಎನ್ನುವ ಭಾವನೆ ಎಲ್ಲರದು. ಅಪ್ಪಾಜಿ ಕುಳಿತ ಜಾಗದಲ್ಲಿ ನಾವು ಕೂತರೆ ಮರಳಿ ಅಲ್ಲಿಂದ ನಮ್ಮ ಮನೆಗೆ ಬರಲು ಮನಸ್ಸೇ ಬಾರದು. ಆ ಜಾಗದಲ್ಲಿ ಒಂದು ದಿವ್ಯ ಶಕ್ತಿ ಇದೆ.
ಅಣ್ಣಾವ್ರ 90 ನೇ ಜನುಮ ದಿನದ ಅಂಗವಾಗಿ ಮೊದಲ ಬಾರಿಗೆ ಅವರ ಹುಟ್ಟೂರಿಗೆ ಹೋಗಿ ನೋಡಿಕೊಂಡು ಬರುವ ಭಾಗ್ಯ ನನಗೆ ಸಿಕ್ಕಿತು. ಅಣ್ಣಾವ್ರು ಬಾಳಿ ಬದುಕಿದ ಆ ಸ್ಥಳಕ್ಕೆ ಹೋಗುವಾಗ ನಿಜಕ್ಕೂ ಮೈ ಝುಮ್ ಅನ್ಸುತ್ತೆ. ಏನೋ ಒಂದು ರೀತಿಯ ಧನ್ಯತಾ ಭಾವ. ಲೋಕದ ಎಲ್ಲಾ ಜಂಜಾಟಗಳಿಂದ ಕಳಚಿ ಹೊರಬಂದ ಮನಸ್ಸು ಶಾಂತ ಸಾಗರದ ಅಲೆಗಳ ಮೇಲೆ ಬೀಸುತ್ತಿರುವ ತಿಳಿಗಾಳಿಯಂತೆ ಯೋಗನಿದ್ರೆಗೆ ಜಾರಿ, ನಿರ್ವಾತ ಸ್ಥಿತಿಯನ್ನು ಮುಟ್ಟಿದ ಅನುಭವ. ಯಾವುದೋ ಪವಿತ್ರ ಕ್ಷೇತ್ರಕ್ಕೆ ಕಾಲಿಟ್ಟಿದ್ದೀನೇನೋ ಎಂಬ ಅಮೂರ್ತ ಭಾವ. ಇನ್ನೂ ಮನೆಯ ಒಳಗೆ ಹೋದಂತೆಲ್ಲಾ ನನ್ನ ಕಣ್ಣ ಮುಂದೆ ಅಣ್ಣಾವ್ರು ಪ್ರತ್ಯಕ್ಷ ಆಗೋ ಅನುಭವ ಮತ್ತು ದೇವಲೋಕದಲ್ಲಿ ಇರುವ ಹಾಗಾಯಿತು.
ಮಾನವನಾಗಿ ಹುಟ್ಟಿದ ಮೇಲೆ ಒಮ್ಮೆಯಾದರೂ ಜೋಗದ ಗುಂಡಿ ನೋಡಬೇಕು ಎನ್ನುವ ಹಾಗೆ ಕನ್ನಡ ಕಲಾಭಿಮಾನಿಗಳು, ಕಲೆಯನ್ನು ಪ್ರೀತಿಸುವವರು ಒಮ್ಮೆಯಾದರೂ ಈ ಪವಿತ್ರ ರಾಜಾಲಯ ನೋಡಲೇಬೇಕು. ಆಗಲೇ ನಾವು ಹುಟ್ಟಿದ್ದಕ್ಕೂ ಸಾಥ೯ಕವಾಗುವುದು.
ಪ್ರಿಯ ಮಿತ್ರರೇ, ಒಮ್ಮೆ ಬಿಡುವು ಮಾಡಿಕೊಂಡು ನಿಮ್ಮ ಗೆಳೆಯರ, ಕುಟುಂಬದ ಜೊತೆ ಹೋಗಿ ಬನ್ನಿ ಆ ಪುಣ್ಯವಂತರ ದೇವಾಲಯಕ್ಕೆ..
ಅಣ್ಣಾವ್ರು ತನ್ನ ಪುಟ್ಟ ಪುಟ್ಟ ಹೆಜ್ಜೆಗಳಿಂದ ಓಡಾಡಿದ್ದ ಆ ಮನೆ ನಮ್ಮಗಳ ಪಾಲಿನ ಬೃಂದಾವನ. ಈ ಜಾಗವನ್ನು ಪ್ರವಾಸಿಗರ ತಾಣವಾಗಿ ಮಾಡಿದರೆ ಅಭಿಮಾನಿಗಳು ತುಂಬಾ ಸಂತಸ ಪಡುತ್ತಾರೆ.
ನನ್ನಂತಹ ಕೋಟಿ ಕೋಟಿ ಅಭಿಮಾನಿಗಳು ನಿಮ್ಮ ನಿರೀಕ್ಷೆಯಲ್ಲಿ…