ಲೆಫ್ಟಿನೆಂಟ್ ಕರ್ನಲ್ ಆದ “ಅಮರನಾಥ್”

ಯೋಧರಿಗೊಂದು ನಮನ -ಟಿಎನ್ನೆಸ್ಛಲಕ್ಕೆ ಬಿದ್ದು ಆರ್ಮಿ ಸೇರಿ ಲೆಫ್ಟಿನೆಂಟ್ ಕರ್ನಲ್ ಆದ “ಅಮರನಾಥ್”.ಕೋಟು ಮತ್ತು ಟೈ ಧರಿಸಿ ಫೋಟೊ ತೆಗೆಸಿಕೊಳ್ಳುವುದು ಅಧಿಕಾರಿಗಳು ಮಾತ್ರ. ನೀನು ಸಾಮಾನ್ಯ ಸೈನಿಕ. ಅದು ಹೇಗೆ ನೀನು ಕೋಟು ಮತ್ತು ಟೈ ಧರಿಸಿ ಫೋಟೊ ತೆಗೆಸಿದೆ? ಅಧಿಕಾರಿಗಳ ಆ ಪ್ರಶ್ನೆಗೆ ಆ ಸಾಮನ್ಯ ಸೈನಿಕ ಹೆದರಿದ್ದ. ಫೊಟೊ ಚೆನ್ನಾಗಿ ಕಾಣುತ್ತದೆಂದು ಆ ರೀತಿ ಫೋಟೊ ತೆಗೆಸಿದ್ದೇ ಹೊರತು, ಇದರಿಂದ ಅಧಿಕಾರಿಗಳ ಕೋಪಕ್ಕೆ ಗುರಿಯಾಗಬಹುದೆಂದು ತಾನು ಎಣಿಸಿರಲಿಲ್ಲ. “ಸಾರಿ” ಎಂಬ ಒಂದು ಪದದಿಂದ ಆ ಅಧಿಕಾರಿಗಳ ಕೋಪ ಆಕ್ಷಣಕ್ಕೆ ಕಡಿಮೆಯಾಗಿತ್ತಾದರೂ, ಸೈನ್ಯದಲ್ಲಿ ಉನ್ನತ ಹಂತಕ್ಕೆ ಏರಿ, ಮತ್ತದೇ ಕೋಟು ಮತ್ತು ಟೈ ಧರಿಸಿ ಮತ್ತೆ ಫೋಟೊ ತೆಗೆಸಿಕೊಳ್ಳಲೇಬೇಕೆಂಬ ಹೊಸ ಛಲವೊಂದು ಆ ಸಾಮಾನ್ಯ ಸೈನಿಕನಲ್ಲಿ ಹುಟ್ಟಿತ್ತು. ಅಷ್ಟೇ! ಅದರ ಪ್ರತಿಫಲವೆಂಬಂತೆ ಆ ಸಾಮಾನ್ಯ ಸೈನಿಕ ಕೆಲವೇ ದಿನಗಳಲ್ಲಿ ಉನ್ನತ ಹಂತಕ್ಕೆ ಏರಿದ್ದರು. ಭೂಸೇನೆ, ನೌಕಾದಳ, ವಾಯುದಳ – ಮೂರೂ ವಿಭಾಗಗಳಲ್ಲಿ ಏಕಮೇವಾದ್ವಿತೀಯ ನಾಯಕನೆಂದೆನಿಸಿದ್ದರು. ಸೇನೆಯ ಮೂರೂ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಆ ಧೀರಯೋಧ ಮತ್ತಾರೂ ಅಲ್ಲ – ನಮ್ಮ ಕನ್ನಡದವರೇ ಆದ ಲೆಫ್ಟಿನೆಂಟ್ ಕರ್ನಲ್ ಅಮರನಾಥ್. ಇಂದಿನ ಯೋಧರಿಗೊಂದು ನಮನ ಸಂಚಿಕೆಯಲ್ಲಿ ಅಮರನಾಥ್ ರು ನಡೆದ ಹೆಜ್ಜೆಗುರುತುಗಳನ್ನು ನೋಡಿ ಬರೋಣ ಬನ್ನಿ.ಅಮರನಾಥ್ ಮೂಲತಃ ಚಿನ್ನದನಾಡು ಕೋಲಾರದವರು.

ಕೋಲಾರ ಜಿಲ್ಲೆಯ ಸುಗಟೂರು ಎಂಬ ಚಿಕ್ಕ ಹಳ್ಳಿಯ ನಂಜುಂಡಪ್ಪ ಮತ್ತು ರತ್ನಮ್ಮ ದಂಪತಿಗಳ ಮೂರನೇ ಮಗ. ನಂಜುಂಡಪ್ಪ ಪೊಲೀಸ್ ಪೇದೆಯಾಗಿದ್ದರು. ತುಂಬಿದ ಆ ಮನೆ ನಂಜಂಡಪ್ಪನವರ ಚಿಕ್ಕ ಪಗಾರದಿಂದಲೇ ನಡೆಯಬೇಕಿತ್ತು. ಹಾಗಾಗಿ ಕೆಲಸದ ಬಳಿಕ ಬಟ್ಟೆ ಹೊಲಿದು ನಾಲ್ಕು ಕಾಸು ಸಂಪಾದಿಸತ್ತಿದ್ದರು. ಸಂಗೀತ ತಬಲ ಹಾರ್ಮೋನಿಯಂ ಕಲಾವಿದ ಸಹ ಆಗಿದ್ದ ನಂಜುಂಡಪ್ಪನವರು ತಾನು ಬಹಳ ಕಷ್ಟಪಟ್ಟು ಮನೆಯವರ “ಬೇಕು” ಗಳನ್ನು ಸಂಭಾಳಿಸುತ್ತಾ ಮನೆ ನಡೆಸುತ್ತಿದ್ದರು. ದೊಡ್ಡ ದೊಡ್ಡ ಇಂಟರ್ ನ್ಯಾಷನಲ್ ಸ್ಕೂಲುಗಳಲ್ಲಿ ತಮ್ಮ ಮಕ್ಕಳನ್ನು ಓದಿಸಲಾಗದಿದ್ದರೂ ಅದಾವುದೇ ಶಾಲೆಯಲ್ಲೂ ಯಾರೂ ಕಲಿಸದ ಮಹಾನ್ ವಿದ್ಯೆಯೊಂದನ್ನು ತನ್ನ ಮಕ್ಕಳಿಗೆ ತಾನೇ ಸ್ವತಃ ಕಲಿಸಿದ್ದರು. ಅದೊಂದು ವಿದ್ಯೆ ಗೊತ್ತಿದ್ದರೆ ಸಾಕು- ವಿಶ್ವವನ್ನೇ ಆಳಬಹುದು ಎಂದು ಧೃಢವಾಗಿ ನಂಬಿದ್ದ ಆ ತಂದೆಯ ಕನಸುಗಳನ್ನು ಮಕ್ಕಳು ಜಗತ್ತಿಗೆ ಋಜುವಾತು ಪಡಿಸಿದರು ಕೂಡಾ. ಒಬ್ಬ ಮಗ ಅಮರನಾಥ್ ಇಂದು ಸೇನೆಯಲ್ಲಿ ಅತ್ಯುನ್ನತ ಹುದ್ದೆಗೆ ಏರಿದ್ದಾರೆ.

ಮತ್ತೊಬ್ಬ ಮಗ ವಂದೇಮಾತರಂ ಸೋಮಶಂಕರ್ ರವರು ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಮತ್ತು ಬೆರಳು ಮುದ್ರೆ ತಜ್ಞರಾಗಿ ಮುಖ್ಯ ಮಂತ್ರಿಗಳ ಚಿನ್ನದ ಪದಕ , ರಾಷ್ಟ್ರಪತಿಗಳ ಪದಕ ಮತ್ತು ಎರಡು ಬಾರಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಬೆರಳುಮುದ್ರೆ ತಜ್ಞರಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಈ ಒಂದು ವಿದ್ಯೆಯನ್ನು ಹೇಳಿಕೊಟ್ಟರೆ ಸಾಕು. ಮಕ್ಕಳು ಖಂಡಿತ ಎತ್ತರಕ್ಕೆ ಏರುತ್ತಾರೆ ಎಂದು ತಂದೆ ನಂಬಿದ್ದ, ಮಕ್ಕಳು ಸಾಧಿಸಿ ತೋರಿಸಿದ ಆ ವಿದ್ಯೆಯೇ – ಸಂಸ್ಕಾರ. ತಂದೆ ತಾಯಿಬ್ಬರೂ ಒಬ್ಬರಿಗಿಂತ ಒಬ್ಬರು ಸಾಧ್ವಿಗಳು. ತಂದೆ ವೃತ್ತಿಯಲ್ಲಿ ಪ್ರಾಮಾಣಿಕ ಪೊಲೀಸ್ ಆಗಿ ತಮ್ಮ ಕರ್ತವ್ಯ ನಿಷ್ಠೆಯೊಂದಿಗೆ ಸದಾ ಸಾತ್ವಿಕ ಜೀವನಶೈಲಿಯಲ್ಲಿ ತಲ್ಲಿನರಾಗಿದ್ದು ತಮ್ಮ ನಡೆನುಡಿಯಿಂದಲೇ ತಮ್ಮ ಮಕ್ಕಳಿಗೆ ದಾರಿದೀಪವಾಗಿದ್ದರು. ತಾಯಿಯಂತೂ ಸದಾ ನಿಸ್ವಾರ್ಥ ಸೇವಾ ಮನೋಭಾವದವರು. ತಂದೆ ತಾಯಿ ಇಬ್ಬರೂ ಒಬ್ಬರಿಗಿಂತ ಒಬ್ಬರು ಸಂಸ್ಕಾರವನ್ನು ಮಕ್ಕಳಿಗೆ ಕಲಿಸುತ್ತಾ ಸಾಗಿದರು. ತಾಯಿಯೇ ಮೊದಲ ಗುರು ಎಂಬಂತೆ ತಾಯಿ ಕೂಡ ಮಕ್ಕಳಿಗೆ ಸಂಸ್ಕಾರ ಕಲಿಸುವುದರಲ್ಲಿ ಹಿಂದೆ ಬೀಳಲಿಲ್ಲ. ಈಗ ತಾಯಿಗೆ 78 ವರ್ಷ ವಯಸ್ಸು. ಈಗಲೂ ವಯಸ್ಸಿಗೆ ವಿರುದ್ದವಾಗಿ ಒಂದಿಲ್ಲೊಂದು ಸೇವಾಕಾರ್ಯಗಳಲ್ಲಿ ತೊಡಗಿರುತ್ತಾರೆ. ಪ್ರತಿವರ್ಷ ಮಂತ್ರಾಲಯದಲ್ಲಿ ಒಂದು ವಾರ ಸೇವೆ ಸಲ್ಲಸುತ್ತಾರೆ.

ಹರಿದ್ವಾರದ ಗಾಯಿತ್ರಿ ಮಹಾ ಹೋಮದಲ್ಲಿ ಸೇವೆ ಸಲ್ಲಿಸಿದ್ದಾರೆ. ತಿಂಗಳಲ್ಲಿ ಹದಿನೈದರಿಂದ ಇಪ್ಪತ್ತು ದಿನಗಳು ಹಲವಾರು ದೇವಾಲಯ, ಶಿರಡಿ, ತಿರುಪತಿ , ಬೆಂಗಳೂರಿನ ಸತ್ಯ ಸಾಯಿ ಬಾಬರವರ ಆಸ್ಪತ್ರೆ, ಮುಂತಾದ ಎಲ್ಲಾದರೊಂದು ಕಡೆ ಸೇವೆ ಮಾಡುತ್ತಿರುತ್ತಾರೆ. ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ರಲ್ಲಿ ಒಂದು ವಾರ ಸೇವೆ ಮತ್ತು ಆಂದ್ರಪ್ರದೇಶ, ವಿಜಯವಾಡ ಪ್ರಖ್ಯಾತ ಕನಕ ದುರ್ಗ ದೇವಸ್ಥಾನದಲ್ಲಿ ನಡೆಯುವ ಗಾಯತ್ರಿ ಹೋಮ ಸೇವಾ ಕಾರ್ಯದಲ್ಲೂ ಕೈ ಜೋಡಿಸಿದ್ದರು . ಈಗಾಗಲೇ ನೂರಕ್ಕೂ ಹೆಚ್ಚು ಜನಕ್ಕೆ ಸಂಬಂಧಗಳನ್ನು ಬೆರಸಿ ಮದುವೆ ಮಾಡಿಸಿದ್ದಾರೆ.ಇಂತಹ ತಾಯಿಯ ಮಕ್ಕಳೆಂದ ಮೇಲೆ ಸಹಜವಾಗಿ ಜನ್ಮತಃ ಆ ಭಾರತೀಯ ಸನಾತನ ಸಂಸ್ಕಾರ ರಕ್ತಗತವಾಗಿ ಬರಲೇಬೇಕಲ್ಲವೇ?ಎಸ್ ಎಸ್ ಎಲ್ ಸಿ ಯನ್ನು ಅಮರನಾಥ್ ಮೊದಲ ದರ್ಜೆಯಲ್ಲಿ ತೇರ್ಗಡೆ ಮಾಡಿದ್ದರು. ಸುಲಭವಾಗಿ ಕೆಲಸ ಸಿಗುವ ಯಾವುದದರೂ ಕೋರ್ಸ್ ಮುಗಿಸಿ, ಕೆಲಸಕ್ಕೆ ಸೇರಿ, ನಾಲ್ಕು ಕಾಸು ಸಂಪಾದಿಸಿ ಸಂಸಾರದ ನೊಗ ಹೊತ್ತಿದ್ದ ಅಪ್ಪನಿಗೆ ಸಹಾಯ ಮಾಡಲೆಂದು ಕೋಲಾರದಲ್ಲಿಯೇ ವೃತ್ತಿಪರ ಐಟಿಐ ಕೋರ್ಸ್ ಸೇರಿದರು. ಐಟಿಐ ಕೋರ್ಸನ್ನು ಓದುತ್ತಿರುವಾಗಲೇ ಹೊಸ ರೀತಿಯ ಆಕರ್ಷಣೆಯೊಂದು ಅವರನ್ನು ಸಂಪೂರ್ಣವಾಗಿ ಆವರಿಸಿತ್ತು. ಹರೆಯಕ್ಕೆ ಕಾಲಿಟ್ಟು ಕಾಲೇಜು ಮೆಟ್ಟಲು ಹತ್ತುತ್ತಲೇ ಆವರಿಸುವ ಪ್ರೀತಿಯ ಹುಚ್ಚೋ, ಅಥವಾ ಮೋಜು ಮಸ್ತಿಯ ಹುಚ್ಚೋ ಎಂದು ನೀವು ಆಲೋಚಿಸುತ್ತಿದ್ದರೆ ಅದು ಸುಳ್ಳು. ಹರಯಕ್ಕೆ ಕಾಲಿಟ್ಟರೂ, ಕಾಲೇಜು ಮೆಟ್ಟಿಲು ಹತ್ತಿದ್ದರೂ, ತಂದೆ -ತಾಯಿ ಕಲಿಸಿದ್ದ ಸಂಸ್ಕಾರ ಇದಾವುದರೆಡೆಗೂ ಗಮನ ಹರಿಯದಂತೆ ಬೆತ್ತ ಹಿಡಿದು ಕಾವಲು ಕಾಯುತ್ತಿತ್ತು. ಅಂದು ಅಮರನಾಥ್ ರಿಗೆ ಹತ್ತಿದ್ದ ಆ ಆಕರ್ಷಣೆ ಬೇರೇನೂ ಅಲ್ಲ – ಬ್ಯಾಸ್ಕೆಟ್ ಬಾಲ್. ಹೌದು ಅಂದು ಬ್ಯಾಸ್ಕೆಟ್ ಬಾಲ್ ಕಡೆಗೆ ಆಕರ್ಷಿತವಾದ ಇವರು ಮನಸ್ಸು ಇವರನ್ನು ಉನ್ನತ ಎತ್ತರಕ್ಕೆ ಕರೆದೊಯ್ಯಲು ಒಳಗೊಳಗೇ ಅವರನ್ನು ಪ್ರೇರೇಪಿಸುತ್ತಿತ್ತು. ದಿನವೂ ಎಡಬಿಡದೇ ಬ್ಯಾಸ್ಕೆಟ್ ಬಾಲ್ ಪ್ರಾಕ್ಟೀಸ್ ಮಾಡಹತ್ತಿದರು.

ಅಷ್ಟೇ! ಕೆಲದಿನಗಳಲ್ಲೇ ಅವರೊಬ್ಬ ಪ್ರೊಫೆಷನಲ್ ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಹಂತಕ್ಕೆ ಏರಿದ್ದರು.ಆ ಹುಡುಗನ ಕೈಲಿ ಸೇವೆ ಮಾಡಿಸಿಕೊಳ್ಳಬೇಕೆಂಬ ಆಸೆ ಭಾರತಾಂಬೆಗೆ ಉಂಟಾಯಿತೇನೋ? ಇವರ ಕುಟುಂಬದ ಹಿರಿಯ ಹಿತೈಷಿಗಳಾದ ಮೋಹನ್ ಕುಮಾರ್ ರೂಪದಲ್ಲಿ ಭರತಾಂಬೆಯೇ ಬಂದು ಅಮರನಾಥ್ ರನ್ನು ಸೇನೆಗೆ ಸೇರಿಸುವಂತೆ ಅವರ ಪೋಷಕರಲ್ಲಿ ಪ್ರೇರೇಪಿಸುತ್ತಾರೆ. ಮೋಹನ್ ಕುಮಾರ್ ರೂಪದಲ್ಲಿ ಭಾರತಾಂಬೆಯೇ ಬಂದಿರುವಾಗ ಇಲ್ಲ ಎನ್ನಲಾದೀತೆ? ಅದರ ಪ್ರತಿಫಲವೆಂಬಂತೆ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ತನ್ನೊಳಗೆ ಅಮರನಾಥರನ್ನು ಬ್ಯಾಸ್ಕೆಟ್ ಬಾಲ್ ಆಟಗಾರನಾಗಿ ಸೇರಿಸಿಕೊಂಡುಬಿಟ್ಟಿತ್ತು.ಎಂ.ಇ.ಜಿ. ಗ್ರೂಪಿನ ಪರವಾಗಿ ಅನೇಕ ಟೂರ್ನಿಮೆಂಟುಗಳನ್ನು ಗೆದ್ದು, ಅತೀ ಕಡಿಮೆ ಸಮಯದಲ್ಲಿಯೇ ಎಂ.ಇ.ಜಿ. ತಂಡದ ಉತ್ತಮ ಬ್ಯಾಸ್ಕೆಟ್ ಬಾಲ್ ಆಟಗಾರನೆಂದು ಗುರ್ತಿಸಿಕೊಳ್ಳುತ್ತಾರೆ. ಇವರು ಪದಕಗಳನ್ನು ಗೆಲ್ಲುತ್ತಾ ಹೋದಷ್ಟೂ, ಮತ್ತಷ್ಟು ಕಠಿಣವಾದ ಟೂರ್ನಿಮೆಂಟುಗಳು, ಕಠಿಣ ಎದುರಾಳಿಗಳು ಎದುರಾಗುತ್ತಾ ಹೋಗುತ್ತವೆ. ನಿರಂತರ ಅಭ್ಯಾಸದಿಂದ ತಮ್ಮಲ್ಲಿಯ ಬ್ಯಾಸ್ಕೆಟ್ ಬಾಲ್ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾರೆ. ಕಡೆದಂತೆಲ್ಲಾ ಕಲ್ಲು ಶಿಲೆಯಾಗುವುದು ಎಂಬುದನ್ನು ಸಾಬೀತು ಮಾಡುತ್ತಾ ಸಾಗುತ್ತಾರೆ.ಎಲ್ಲಾ ಸರಿಯಾಗಿ ನಡೆಯುತ್ತಿದ್ದಾಗಲೇ ಮೊದಲ ಬಾರಿ ಅಡ್ಡಿಯೊಂದು ಎದುರಾಗುತ್ತದೆ. ಬ್ಯಾಸ್ಕೆಟ್ ಬಾಲ್ ತಂಡಕ್ಕೆ ಕೊಡಲೆಂದು ಪಾಸ್ಪೋರ್ಟ್ ಸೈಜ್ ಫೊಟೊ ತೆಗೆಸಿಕೊಳ್ಳಲು ಹೋದಾಗ ಅಚಾತುರ್ಯ ಸಂಭವಿಸಿಬಿಡುತ್ತದೆ. ಕ್ಯಾಮರಾಮ್ಯಾನ್ ಹೇಳಿದಂತೆ ಕೋಟು ಟೈ ಧರಿಸಿ ತೆಗೆಸಿದ ಫೋಟೊ ಆರ್ಮಿಯಲ್ಲಿ ಉನ್ನತ ಹಂತಕ್ಕೆ ಏರಬೇಕೆಂದು ಇವರಲ್ಲಿ ನಿರ್ಲಿಪ್ತವಾಗಿ ಅಡಗಿದ್ದ ಭಾವನೆಯನ್ನು ಬಡಿದೆಬ್ಬಿಸುತ್ತದೆ. ಆ ನಿಟ್ಟಿನಲ್ಲಿಯೇ ತಮಗೆ ಗೊತ್ತಿದ್ದ ಎಲ್ಲಾ ಮೂಲಗಳಿಂದಲೂ ಮಾಹಿತಿಯನ್ನು ಸಂಗ್ರಹಿಸಲು ಆರಂಭಿಸುತ್ತಾರೆ.

ಕಾಲೇಜ್ ಆಫ್ ಮಿಲಿಟರಿ ಇಂಜಿನಿಯರಿಂಗ್ (ಸಿಎಂ ವಿ) ನಲ್ಲಿ ಡಿಪ್ಲೋಮೋ ಕೋರ್ಸ್ ಮೂಲಕ ಆ ಮಹದಾಸೆಗೆ ನಾಂದಿ ಹಾಡುತ್ತಾರೆ. ಸೇನೆಯಲ್ಲಿ ಅಧಿಕಾರಿಯಾಗಲು ಬೇಕಾಗುವ ಪರೀಕ್ಷೆಗಳನ್ನೆಲ್ಲಾ ಉತ್ತಮ ಹಂತದಿಂದಲೇ ತೇರ್ಗಡೆ ಹೊಂದುತ್ತಾ ಹೋದ ಅಮರನಾಥ್ ಮುಂದೆಂದೂ ಸೋಲನ್ನೇ ಕಾಣಲಿಲ್ಲ. ಸುಮಾರು 150 ಮಂದಿ ಅಭ್ಯರ್ಥಿಗಳ ಪೈಕಿ ಅಮರನಾಥ್ ಮೊದಲ ಸ್ಥಾನವನ್ನು ಪಡೆಯುತ್ತಾರೆ. ಇವರೊಂದಿಗೆ CME ಎಲ್ಲಿ ಎಲೆಕ್ಟ್ರಿಕಲ್ ಮೆಕಾನಿಕಲ್ ಡಿಪ್ಲೋಮಗೆ ಸೇರ್ಪಡೆಗೊಳ್ಳುತ್ತಾರೆ. ಆ ಕೋರ್ಸ್ ನಲ್ಲಿಯೂ ಕೂಡ ಮೇಲುಗೈ ಸಾಧಿಸುವ ಅವರು ಮತ್ತೆ ಮೊದಲ ಸ್ಥಾನದಲ್ಲಿಯೇ ಬೆಳ್ಳಿ ಪದಕ ಗೆಲ್ಲುತ್ತಾರೆ. ಪುಣೆಯಲ್ಲಿ ಡಿಪ್ಲೋಮಾ ಕೋರ್ಸ್ ಪೂರ್ಣಗೊಂಡ ಬಳಿಕ ಅವರಿಗೆ ಮದ್ರಾಸ್ ಸ್ಟಾಫರ್ ನ ಮೂಲಕ ಜೂನಿಯರ್ ಇಂಜಿನಿಯರ್ ಆಗಿ ನೇಮಕವಾದ ಅಮರನಾಥ್ ತಮ್ಮ ಮೊದಲ ಪೋಸ್ಟಿಂಗಿಗಾಗಿ ಪಟಿಯಾಲಕ್ಕೆ ಹೊರಡುತ್ತಾರೆ. ಎರಡೂವರೆ ವರ್ಷ ಸೇವೆಯ ಬಳಿಕ, ಬೆಂಗಳೂರಿನ ವಾಯುಪಡೆಯ ಆರ್ ಎ ತರಬೇತಿ ಕಮಾಂಡ್ ಗೆ ವರ್ಗಾವಣೆಯಾಗಿ ಬರುತ್ತಾರೆ.ಅಧಿಕಾರಿಯಾಗಬೇಕೆಂಬ ತನ್ನ ಆಸೆ ಅವರೊಳಗೆ ಇನ್ನೂ ಸುಪ್ತ ಜ್ವಾಲೆಯಂತೆ ಸುಡುತ್ತಲೇ ಇರುತ್ತದೆ. ಆ ನಿಟ್ಟಿನಲ್ಲಿ ಸರ್ವಿಸ್ ಸೆಲೆಕ್ಷನ್ ಬೋರ್ಡ್ ನ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಆ ವರ್ಷ ನಡೆದ ಪರೀಕ್ಷೆಯಲ್ಲಿ ಹಾಜರಿದ್ದ 127 ಮಂದಿ ಅಭ್ಯರ್ಥಿಗಳ ಪೈಕಿ ಆಯ್ಕೆಯಾದವರು ಕೇವಲ ಒಬ್ಬರು ಎಂದರೆ ಅದು ಎಂತಹ ಕಠಿಣ ಪರೀಕ್ಷೆ ಎಂಬ ಅರಿವು ನಮಗಾಗುತ್ತದೆ. ಹೀಗೆ ನಿರಂತರ ಕಠಿಣ ಪರಿಶ್ರಮದ ಫಲವಾಗಿ ಸೇನೆಯಲ್ಲಿ ಆಫೀಸರ್ ಆಗುವ ಅಮರನಾಥ್ ಅವರ ಕನಸು 2003ರ ಜುಲೈ ತಿಂಗಳಿನಲ್ಲಿ ಇಂಡಿಯನ್ ಮಿಲ್ಟ್ರಿ ಅಕಾಡೆಮಿಯಲ್ಲಿ ನೌಕಾಪಡೆಗೆ ಲೆಫ್ಟಿನೆಂಟ್ ಆಗುವುದರ ಮೂಲಕ ಸಾಕಾರಗೊಳ್ಳುತ್ತದೆ. ಅಂದಿನಿಂದ ಇಂದಿನವರೆಗೂ ಮೂಲಸೌಕರ್ಯ ಮತ್ತು ಇಂಜನಿಯರಿಂಗ್ ವಿಭಾಗದಲ್ಲಿ ಆರ್ಮಿಯ ವಿವಿಧ ಆಪರೇಶನ್ ಗಳಲ್ಲಿ ಭಾಗಿಯಾಗಿದ್ದಾರೆ. ತನ್ನನ್ನು ಈ ಹಂತಕ್ಕೆ ತಂದ ಬ್ಯಾಸ್ಕೆಟ್ ಬಾಲ್ ಮೇಲೆ ಅವರಿಗೆ ಇಂದಿಗೂ ಅಪಾರ ಪ್ರೇಮ. ಮಿಲಿಟರಿಯ ಅನೇಕ ಟೂರ್ನಮೆಂಟುಗಳಲ್ಲಿ ಭಾಗವಹಿಸಿ ಕೀರ್ತಿ ತಂದಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಇವರ ಟೀಂ ಆಸ್ಟ್ರೇಲಿಯಾದ ಟೂರ್ನಮೆಂಟ್ ಒಂದರಲ್ಲಿ ಆಸ್ಟ್ರೇಲಿಯಾದಲ್ಲಿ

ಭಾಗವಹಿಸಿದ್ದರು.ಆರ್ಮಿಯಲ್ಲಿ ಇವರು ಭಾಗವಹಿಸಿದ್ದ ಆಪರೇಶನ್ ಗಳ ಬಗ್ಗೆ ಹೇಳುವುದು ಅಷ್ಟು ಸುಲಭವಲ್ಲ. ಭೂಸೇನೆ, ನೌಕಾದಳ, ವಾಯುಸೇನೆಯ ಅತಿ ಸೂಕ್ಷ್ಮ ಹಾಗು ಅತಿಸೂಕ್ಷ್ಮ ಆಪರೇಶನ್ ಗಳಲ್ಲಿ ಇವರು ಭಾಗವಹಿಸಿದ್ದಾರೆ. ಇಂಜಿನಿಯರಿಂಗ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಎಷ್ಟು ಕಷ್ಟ ಎಂಬುದು ನಮಗೆಲ್ಲಾ ಗೊತ್ತು. ಅದರಲ್ಲೂ ಆರ್ಮಿಯಲ್ಲಿ ಇನ್ನೆಷ್ಟು ಕಠಿಣವಿದ್ದಿರಬೇಕು ಅಲ್ಲವೇ? ತನ್ನಂತೆಯೇ ಇನ್ನಷ್ಟು ಯುವಕರು ಸೈನ್ಯದತ್ತ ಆಕರ್ಷಿತರಾಗಬೇಕು, ಸೈನಿಕರನ್ನು ಎಲ್ಲೆಡೆ ಗೌರವಿಸಬೇಕೆಂಬ ಮಹದಾಸೆಯಿಂದ ಆ ನಿಟ್ಟಿನಲ್ಲಿ ಕೆಲಸ ಮಾಡುವ ಸಮಾನ ಮನಸ್ಕರ “ಟೀಂ ಯೋಧ ನಮನ” ವನ್ನು ಉದ್ಘಾಟನೆ ಮಾಡಿದ್ದು ಇವರೇನೇ. ಗಲ್ವಾನ್ ಕಣಿವೆಯಲ್ಲಿ ಇವರ ನಿರ್ಧಾರದಿಂದ ಸೇನೆಗ ಕೋಟ್ಯಂತರ ರುಪಾಯಿ ಉಳಿತಾಯವಾಯಿತು. ಹೋದೆಡೆಯಲ್ಲೆಲ್ಲ ಇವರ ಮನೆಕೆಲಸದವರ ಮಕ್ಕಳ ಜವಾಬ್ದಾರಿಯನ್ನು ಇವರೇ ಹೊತ್ತುಕೊಳ್ಳುತ್ತಾರೆ. ತಮ್ಮ ಕ್ರೀಡಾ ಕೌಶಲ್ಯವನ್ನ ಕೇವಲ ಬ್ಯಾಸ್ಕೆಟ್ ಬಾಲಿಗಷ್ಟೇ ಸೀಮಿತಗೊಳಿಸದೆ ಗಾಲ್ಫ್ ನಲ್ಲಿ ಕೂಡ ತಮ್ಮ ಪ್ರತಿಭೆಯ ಮೂಲಕ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಕೋಲಾರದ ಕಾರ್ಗಿಲ್ ಮೆಮೋರಿಯಲ್ ಕೂಡ ಇವರ ಪ್ರಯತ್ನದ ಫಲವೇ. ಹೀಗೆ ಇವರು ಕಾಲಿಡದ ಕ್ಷೇತ್ರ ಇಲ್ಲ. ಸೇನೆಗೆ ಇವರು ಮಾಡದಿರುವ ಸೇವೆ ಇಲ್ಲ. ಒಬ್ಬ ಸೈನಿಕ, ವೃತ್ತಿಪರ ಬ್ಯಾಸ್ಕೆಟ್ ಬಾಲ್ ಆಟಗಾರ, ವೃತ್ತಿಪರ ಗಾಲ್ಫ್ ಆಟಗಾರ, ಸಮಾಜಸೇವಕ, ಯೋಧಪ್ರೇಮಿ, ಪ್ರಖರ ರಾಷ್ಟ್ರೀಯವಾದಿ ಎಲ್ಲವೂ ಸಮ್ಮಿಳಿತಗೊಂಡಿರುವ ಸಿಂಪಲ್ ವ್ಯಕ್ತಿ ಇವರು. ತ್ರಿವಿಕ್ರಮನಷ್ಟು ಎತ್ತರ ಬೆಳೆದಿದ್ದರೂ ಎನಗಿಂತ ಕಿರಿಯರಿಲ್ಲ ಎನ್ನುವ ನಿಗರ್ವಿ. ಅಸಾಧ್ಯವಾದುದನ್ನೂ ಸಾಧ್ಯವಾಗಿಸಬಹುದಾದ ತಾಕತ್ತು ಮನುಷ್ಯನ ಹಠಕ್ಕಿದೆ ಎಂಬುದನ್ನು ಸಾಕ್ಷಿ ಸಮೇತ ಅಮರನಾಥ್ ಸಾಬೀತುಪಡಿಸಿದರು. ಮನುಷ್ಯನ ಛಲವೊಂದೇ “ಅಮರ” ಎಂಬುದನ್ನು ಸಾಬೀತುಪಡಿಸಲೆಂದೇ ಇವರಿಗೆ “ಅಮರನಾಥ್” ನೆಂದು ನಾಮಕರಣ ಮಾಡಿದ್ದಿರಲೂಬಹುದು. ಹರೆಯದಲ್ಲಿ ಪ್ರೀತಿ,ಪ್ರೇಮ,ಪ್ರಣಯ,ಸಿನಿಮಾ, ಪಬ್, ಶಾಪಿಂಗ್ ಗಳೆಂದು ಯೌವನವನ್ನು ವೃಥಾ ಮಾಡುತ್ತಿರುವ ಯುವಕರೇ – ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ಅವರತ್ತ ಒಮ್ಮೆ ನೋಡಿ. ನಿಮಗೂ ಇವರು ಖಂಡಿತ ಸ್ಪೂರ್ತಿಯಾಗಬಲ್ಲರು. ಜೈಹಿಂದ್

All reactions:7070

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply