ಮನುಷ್ಯನ ಬದುಕು ಮತ್ತು ಸಾವಿಗೂ ನಡುವೆ ಇರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ನಮಗೆ ತೋರಿಸುವ ಸಿನೆಮಾ ಇದು. ಬದುಕು ಹೇಗೆ ನಮಗೆ ಮುಖ್ಯವೋ ಹಾಗೆ ಸಾವೂ ಸಹ ಮುಖ್ಯ. ಸಾಯದೇ ಇರುವುದು ಸಾಧನೆಯಲ್ಲ. ಯಶಸ್ವೀ ಜೀವನವೇ ಸಾಧನೆ ಅಂತ ಈ ಸಿನೆಮಾ ಮನದಟ್ಟು ಮಾಡಿಸುತ್ತದೆ.
ಇಬ್ಬರು ಹೆಣ್ಣುಮಕ್ಕಳು. ಒಬ್ಬ ಗಂಡಸು. ಈ ಇಬ್ಬರೂ ಆತನ ಪ್ರೇಮಿಕೆಯರು. ಇದೇ ಕಾರಣದಿಂದಾಗಿ ಆ ಇಬ್ಬರು ಹೆಣ್ಮಕ್ಕಳು ಪರಸ್ಪರ ಶತೃಗಳಾಗಿರುತ್ತಾರೆ. ಒಬ್ಬಳನ್ನು ಆತ ಮದುವೆಯಾಗುತ್ತಾನೆ. ಕ್ರಮೇಣ ದಂಪತಿಗಳಿಗೆ ವಯಸ್ಸಾಗುತ್ತದೆ. ಆದರೆ ಆತನ ಹಳೆಯ ಪ್ರೇಯಸಿ ಮೊದಲಿನಷ್ಟೇ ಯೌವ್ವನ ಭರಿತಳಾಗಿರುತ್ತಾಳೆ. ಇದು ಈತನ ಪತ್ನಿಯ ಮನಸ್ಸಿನಲ್ಲಿ ಈರ್ಷೆ ಉಂಟು ಮಾಡುತ್ತದೆ.
ಕೋಪದ ಕೈಗೆ ಬುದ್ಧಿ ಕೊಟ್ಟು ಗಂಡನ ಪ್ರೇಯಸಿಯಂತೆಯೇ ಆಗಬೇಕೆಂದು ಹಿಂದೆ ಮುಂದೆ ಯೋಚಿಸದೇ ಒಂದೂ ಜಾದೂ ಮಿಶ್ರಣ ಕುಡಿದುಬಿಡುತ್ತಾಳೆ ಆತನ ಪತ್ನಿ. ಕುಡಿದ ಕೂಡಲೇ ಅವಳಿಗೆ ಯೌವ್ವನ ಮರಳಿ ಬಂದುಬಿಡುತ್ತದೆ. ಆದರೆ ಮುಂದೆ ಅದರಿಂದಾಗುವ ಪರಿಣಾಮ ಆಕೆಗೆ ಗೊತ್ತಿರುವುದಿಲ್ಲ ಅಥವಾ ಅವಳಿಗೆ ಬೇಕಾಗಿರುವುದಿಲ್ಲ.
ಖುಷಿಯಿಂದ ಮನೆಗೆ ಬಂದರೆ ಗಂಡ ಆಕೆಯ ಯೌವ್ವನ ಗಮನಿಸದೇ ಆಕೆಯೊಂದಿಗೆ ಜಗಳ ಮಾಡುತ್ತಾನೆ. ಆಗ ಅವಳಿಗೂ ಗಂಡನಿಗೂ ಜಗಳ ಜೋರಾಗಿ ಈಕೆ ಮೆಟ್ಟಿಲಿಂದ ಕೆಳಗೆ ಉರುಳಿ ಬೀಳುತ್ತಾಳೆ. ಗಂಡ ಆಕೆ ಸತ್ತಳೆಂದೇ ತಿಳಿಯುತ್ತಾನೆ. ಆದರೆ ಜಾದೂ ಮಿಶ್ರಣ ಕುಡಿದಿರುವ ಕಾರಣ ಆಕೆಗೆ ಸಾವಿಲ್ಲ. ಬದಲಿಗೆ ಆಕೆಯ ತಲೆ ಹಿಂದುಮುಂದಾಗಿ ತಿರುಗಿಕೊಂಡಿರುತ್ತದೆ. ಹಾಗೆಯೇ ಎದ್ದು ನಿಲ್ಲುತ್ತಾಳೆ. ಗಂಡ ಹೆದರಿದರೂ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಾನೆ.
ಡಾಕ್ಟರ್ ಎಲ್ಲಾ ಟೆಸ್ಟ್ ಮಾಡುತ್ತಾರೆ. ಸೈನ್ಸ್ ಪ್ರಕಾರ ಆಕೆ ಸತ್ತವಳು. ಹೃದಯ ಬಡಿತ, ಉಸಿರಾಟ ಇಲ್ಲದವಳು. ಆದರೆ ಮಾಮೂಲಿ ಮನುಷ್ಯರಂತೆಯೇ ಇರುತ್ತಾಳೆ. ಇದನ್ನು ನೋಡಿ ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯನಿಗೇ ಹಾರ್ಟ್ ಅಟ್ಯಾಕ್ ಆಗಿಬಿಡುತ್ತದೆ. ಗಂಡ ಇದನ್ನು ಅದ್ಭುತ ಎಂದು ತಿಳಿದು ಹೆಂಡತಿಯನ್ನು ಮನೆಗೆ ಕರೆತರುತ್ತಾನೆ.
ಈ ವಿಷಯ ಆತನ ಹಳೆಯ ಪ್ರೇಯಸಿಗೆ ಹೇಗೋ ತಿಳಿಯುತ್ತದೆ. ಸತ್ತಿರುವ ಆಕೆಯನ್ನು ನೋಡಲು ಇವನ ಮನೆಗೆ ಬಂದಾಗ ಈತನ ಪತ್ನಿ ಸಮಯ ಸಾಧಿಸಿ ಹಳೆ ಪ್ರೇಯಸಿಯನ್ನು ಗುಂಡು ಹಾರಿಸಿ ಸಾಯಿಸಿ ಬಿಡುತ್ತಾಳೆ. ಆದರೆ ಆ ಗುಂಡಿನಿಂದ ಪ್ರೇಯಸಿಯೂ ಸಾಯುವುದಿಲ್ಲ. ಬದಲಿ್ಗಗೆ ಗುಂಡು ಬಿದ್ದ ಜಾಗ ಅಂದರೆ ಅವಳ ಹೊಟ್ಟೆ ತೂತಾಗಿರುತ್ತದೆ.
ಆಗ ಇಬ್ಬರಿಗೂ ತಾವಿಬ್ಬರೂ ಆ ಜಾದೂ ಮಿಶ್ರಣ ಕುಡಿದಿದ್ದೇವೆ, ಹಾಗಾಗಿ ತಮಗೆ ಸಾವಿಲ್ಲ ಅಂತ ಗೊತ್ತಾಗುತ್ತದೆ. ಆಗ ಇಬ್ಬರೂ ಜಗಳ ನಿಲ್ಲಿಸಿ ಒಂದಾಗುತ್ತಾರೆ. ನಂತರ ಮಾತನಾಡಿಕೊಂಡು ಆತನಿಗೂ ಈ ಮಿಶ್ರಣ ಕುಡಿಸಿ ತಮ್ಮೊಂದಿಗೇ ಕೊನೆವರೆಗೂ ಇಟ್ಟುಕೊಳ್ಳಬೇಕೆಂದು ನಿರ್ಧರಿಸುತ್ತಾರೆ.
ಆದರೆ ಆತನಿಗೆ ಇದರಲ್ಲಿ ಇಂಟರೆಸ್ಟ್ ಇರುವುದಿಲ್ಲ.
“ಇದನ್ನು ಕುಡಿದರೆ ಸಾವು ಬರುವುದಿಲ್ಲ, ಅಮರರಾಗಬಹುದು….” ಅಂತ ಹೇಳಿದರೆ ಆತ ನಿರುತ್ಸಾಹದಿಂದ “so boring….” ಅಂತ ಹೇಳಿ ಆ ಮಿಶ್ರಣ ಕುಡಿಯಲು ನಿರಾಕರಿಸಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ.
ಸಿನೆಮಾ ನೋಡುತ್ತಿರುವ ನಮಗೆ ದಿಗ್ಭ್ರಮೆ!!
ಅಲ್ಲ…. ಮನುಷ್ಯ ಸಾವೇ ಬಾರದಂತಹ ವರ ಪಡೆಯಲು ಅದೆಷ್ಟು ಕಷ್ಟ ಪಡುತ್ತಿದ್ದಾನೆ. ಈ ಮನುಷ್ಯ ನೋಡಿದರೆ ಆ ವರ ತಾನೇತಾನಾಗಿ ಸಿಕ್ಕರೂ ಬೇಡ ಅಂತ ಓಡಿದನಲ್ಲ, ಮೂರ್ಖ ಎಂದೆನಿಸುತ್ತದೆ. ಆದರೆ ಅವನ ನಿರ್ಧಾರ ಸರಿಯಿತ್ತು ಅಂತ ಅನ್ನಿಸುತ್ತದೆ. ಅದಕ್ಕಾಗಿ ಸಿನೆಮಾದ ಕೊನೆ ನೋಡಬೇಕು.
ಸಿನೆಮಾದ ಕೊನೆಯಲ್ಲಿ ಆತ ಸತ್ತಿರುತ್ತಾನೆ.
ಆತನ ಮರಣದ ಶೋಕ ಸಭೆಗೆ ಇಬ್ಬರೂ ಅಮರ ಜೀವಿಗಳಾದ ಹೆಣ್ಮಕ್ಕಳು (ಆತನ ಹೆಂಡತಿ ಮತ್ತು ಪ್ರೇಯಸಿ) ಬಂದಿರುತ್ತಾರೆ. ಸಭೆಯಲ್ಲಿ ಆತನ ಗುಣಗಾನ ನಡೆಯುತ್ತಿರುತ್ತದೆ. ಇದು ನಾವು ಸತ್ತಾಗಲಷ್ಟೇ ನಮ್ಮನ್ನು ಹೊಗಳುವುದು ಎಂಬುದರ ಸಂಕೇತ ಇರಬಹುದು. ಅದನ್ನು ಕೇಳಿ ಸಾಕಾಗಿ ಇವರಿಬ್ಬರೂ ಎದ್ದು ಹೊರಡಬೇಕು….. ಅಷ್ಟರಲ್ಲಿ ಫಾದರ್ “ಆತ ಸತ್ತಿಲ್ಲ..” ಎಂದು ಬಿಡುತ್ತಾರೆ.
‘ಏನು ಸತ್ತಿಲ್ವಾ?’ ಅಂತ ಇವರಿಬ್ಬರೂ ಆಶ್ಚರ್ಯದಿಂದ ತಿರುಗಿ ನೋಡುವಷ್ಟರಲ್ಲಿ ಫಾದರ್ “ಆತ ಸತ್ತಿಲ್ಲ… ಆತನ ತನ್ನ ಮಕ್ಕಳ ಮನಸ್ಸಿನಲ್ಲಿ ಜೀವಂತವಾಗಿದ್ದಾನೆ… ಮೊಮ್ಮಕ್ಕಳ ಹೃದಯದಲ್ಲಿ ಅಮರನಾಗಿದ್ದಾನೆ…” ಅಂತ ಹೇಳುತ್ತಿರುತ್ತಾರೆ.
ಇವರಿಬ್ಬರಿಗೆ ಪಿಚ್ಚೆನಿಸುತ್ತದೆ.
ತಾವು ಎಷ್ಟೆಲ್ಲಾ ಕಷ್ಟಪಟ್ಟು ಬದುಕಿದ್ದೀವಿ. ಈತ ನೋಡಿದ್ರೆ ಸತ್ತ ಮೇಲೆ ಹೊಗಳಿಸಿಕೊಳ್ಳುತ್ತಿದ್ದಾನಲ್ಲ ಎಂದುಕೊಳ್ಳುತ್ತಾ ಹೊರ ಬರುತ್ತಾರೆ. ಸಾವೇ ಇಲ್ಲದ ವರ ಪಡೆದಿರುವ ಅವರಿಗೆ ಜೀವನವೇ ದೊಡ್ಡ ಬೇಸರವಾಗಿಬಿಟ್ಟಿರುತ್ತದೆ. ಎಷ್ಟೂಂತ ಬದುಕುವುದು? ಈಗಾಗಲೇ ಅವರ ಚರ್ಮ ಅಲ್ಲಲ್ಲಿ ಬಿರುಕುಬಿಟ್ಟು ನೋಡಲು ವಿಕಾರವಾಗಿ ಬದಲಾಗಿರುತ್ತಾರೆ. ಇನ್ನು ಬದುಕಿದಷ್ಟೂ ಈ ವಿಕಾರತೆ ಹೆಚ್ಚುತ್ತಲೇ ಹೋಗುತ್ತದಷ್ಟೇ.
ಆದರೆ ಏನು ಬದಲಾದರೂ ಇಬ್ಬರ ಬುದ್ಧಿ ಬದಲಾಗಿರುವುದಿಲ್ಲ. ಅಲ್ಲಿ ಹೊರಗಡೆಯೇ ಇಬ್ಬರಿಗೂ ಚಿಕ್ಕ ಜಗಳವಾಗುತ್ತದೆ. ಇಬ್ಬರೂ ಮಾರಾಮಾರಿ ಹೊಡೆದಾಡಿಕೊಳ್ಳುತ್ತಾ ಮೆಟ್ಟಿಲಿನಿಂದ ಜಾರಿ ಬೀಳುತ್ತಾರೆ. ಇಬ್ಬರ ದೇಹ ನೆಲಕ್ಕೆ ಅಪ್ಪಳಿಸಿ ಸಿಡಿದು ಚೆಲ್ಲಾಪಿಲ್ಲಿಯಾಗುತ್ತದೆ. ಆದರೂ ಅವರಿಗೆ ಸಾವಿಲ್ಲವಾದ್ದರಿಂದ ಇಬ್ಬರೂ ದೇಹದಿಂದ ಬೇರಾದ ರುಂಡದಿಂದ ಪಿಳಿಪಿಳಿ ನೋಡುತ್ತಿರುತ್ತಾರೆ. ಸಿನೆಮಾ ಮುಗಿಯುತ್ತದೆ.
ಸಾವು-ಬದುಕಿನ ಮಹತ್ವದ ಕುರಿತಾಗಿ ಇದಕ್ಕಿಂತಲೂ ಉತ್ತಮ ಉದಾಹರಣೆ ಕೊಡುವ ಸಿನೆಮಾ ಇನ್ನೂ ಬಂದಿಲ್ಲ ಅಂತಲೇ ನನ್ನ ಭಾವನೆ.