“crawl 2019”

"crawl 2019"

ನೀವಿನ್ನೂ ನೋಡಿಲ್ಲ ಎಂದರೆ ಒಮ್ಮೆ ನೋಡಿಬಿಡಿ. ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ. ಇಷ್ಟು ಭಯಾನಕವಾದ ಸಿನೆಮಾ ಬಹುಶಃ ನೀವು ನೋಡಿರಲಾರಿರಿ. ಭಯಾನಕ ಎಂದರೆ ದೆವ್ವವೇ ಆಗಬೇಕಿಲ್ಲ… ಈ ಸಿನೆಮಾ ನೋಡಿದರೆ ಗೊತ್ತಾಗುತ್ತದೆ ಭಯಾನಕ ಪದದ ಅರ್ಥ ಏನು ಅಂತ.

Crawl ಎಂದರೆ ಅಂಬೆಗಾಲಿಡುವುದು.

ಹೌದು… ಇಡೀ ಸಿನೆಮಾದಲ್ಲಿ ಪಾತ್ರಧಾರಿಗಳು ಅಂಬೆಗಾಲಿಡುತ್ತಾರೆ. ಏಕೆಂದರೆ ಸಿನೆಮಾ ನಡೆಯುವುದು ಮನೆಯ ಕೆಳಗಿನ ನೆಲಮಾಳಿಗೆಯಲ್ಲಿ. ಉಸಿರು ಕಟ್ಟುವಂತಹಾ ಸನ್ನಿವೇಶಗಳು ನಮಗೆ ದಿಗ್ಭ್ರಮೆ ಮೂಡಿಸುತ್ತವೆ.

ಇಡೀ ಊರಿಗೆ ಚಂಡಮಾರುತ ಅಪ್ಪಳಿಸಿರುತ್ತದೆ.

ಮನೆಗಳು, ವಾಹನಗಳು, ಸಿಕ್ಕಸಿಕ್ಕ ವಸ್ತುಗಳು ಚಂಡಮಾರುತದ ಧಾಳಿಗೆ ಸಿಲುಕಿ ಹಾರಿ ಹೋಗುತ್ತಿರುತ್ತವೆ. ಅಂತಹಾ ಪರಿಸ್ಥಿತಿಯಲ್ಲಿ ನಾಯಕಿ ಆ ಊರಿನಲ್ಲಿರುವ ತನ್ನ ತಂದೆಯನ್ನು ಕರೆದುಕೊಂಡು ಬರಲು ಹೊರಡುತ್ತಾಳೆ. ಪೊಲೀಸರು ಅತ್ತ ಪಯಣಿಸುವುದು ದುಸ್ಸಾಹಸ ಎಂದರೂ ಕೇಳದೇ ತನ್ನ ತಂದೆಯ ಮನೆಗೆ ಹೋಗುತ್ತಾಳೆ.

ನೋಡಿದರೆ ತಂದೆ ಮನೆಯಲ್ಲಿ ಇರುವುದೇ ಇಲ್ಲ.

ಹುಡುಕಿದಾಗ ಆತ ನೆಲಮಾಳಿಗೆಯೊಳಗೆ ಇಳಿದಿರುವುದು ತಿಳಿಯುತ್ತದೆ. ಆ ನೆಲಮಾಳಿಗೆಯೊಳಗೋ ನಿಲ್ಲಲು ಇರಲಿ ಕೂರಲೂ ಸಹ ಸ್ಥಳವಿರುವುದಿಲ್ಲ‌‌. ತೆವಳಿಕೊಂಡೇ ಸಾಗಬೇಕು ಹಾಗಿರುತ್ತದೆ. ಅಂತಹಾ ಸ್ಥಳದಲ್ಲಿ ಆಕೆಯ ತಂದೆ ಪ್ರಜ್ಞೆ ತಪ್ಪಿ ಬಿದ್ದಿರುತ್ತಾರೆ.

ಅವರನ್ನು ಎಚ್ಚರಿಸಿ ಏನಾಯ್ತೆಂದು ಕೇಳುವಷ್ಟರಲ್ಲಿ ಚಂಡಮಾರುತದಿಂದ ನೀರಿನ ಹರಿವು ಹೆಚ್ಚಾಗಿ ನೆಲಮಾಳಿಗೆಯೊಳಗೆ ನೀರು ನುಗ್ಗಿ ಬಿಡುತ್ತದೆ. ನೀರಿನ ಹರಿವು ಹೆಚ್ಚಾಗುತ್ತಲೇ ಇರುವ ಕಾರಣ ನಾಯಕಿ ತಂದೆಯನ್ನು ಅಲ್ಲಿಂದ ಮನೆಯೊಳಗೆ ಕರೆದುಕೊಂಡು ಹೋಗಬೇಕೆಂದಿರುತ್ತಾಳಷ್ಟೇ…..

ಆಗೊಂದು ಆಘಾತ ಎದುರಾಗುತ್ತದೆ….!!!

ನೀರಿನ ಹರಿವಿನ ಜೊತೆಜೊತೆಯಲ್ಲಿ ಒಂದು ದೊಡ್ಡ ಮೊಸಳೆಯೂ ಇವರ ನೆಲಮಾಳಿಗೆಯೊಳಗೆ ಬಂದುಬಿಟ್ಟಿರುತ್ತದೆ. ತಕ್ಷಣ ಚಾಣಾಕ್ಷತೆಯಿಂದ ಆಕೆ ತಂದೆಯನ್ನು ಎಳೆದುಕೊಂಡು, ಮೊಸಳೆ ನುಗ್ಗಿ ಬರಲಾಗದ ಸಂದಿಯೊಳಗೆ ತೆವಳುತ್ತಲೇ ಹೋಗಿ ಅಡಗುತ್ತಾಳೆ. ಈ ನಡುವೆ ತಂದೆ ಅವಳಿಂದ ಬೇರೆಯಾಗುತ್ತಾರೆ.

ಮೊಸಳೆ ಒಂದಲ್ಲ ಎರಡಲ್ಲ, ನಾಲ್ಕು ನಾಲ್ಕು ಇರುತ್ತವೆ.

ಈ ಎಲ್ಲಾ ಸಾಹಸಕ್ಕೂ ಆಕೆ ತೆವಳುತ್ತಲೇ ಅಡ್ಡಾಡುತ್ತಾಳೆ. ನೋಡುತ್ತಿರುವ ನಮಗೆ ಅಲ್ಲಿ ನಾವೇ ಸಿಕ್ಕಿಬಿದ್ದಿರುವಂತೆ ಅನಿಸತೊಡಗುತ್ತದೆ. ಅಲ್ಲಿಂದ ಹೊರ ಬರುವ ದಾರಿಯೇ ಇಲ್ಲವೇನೋ ಎಂಬಂತೆ ಹತಾಶರಾಗುತ್ತೇವೆ.

ಆಗ ಆಕೆ ಒಂದು ಉಪಾಯ ಮಾಡುತ್ತಾಳೆ.

ಆ ಉಪಾಯ ಏನು? ಅದರಿಂದ ಆಕೆ ಪಾರಾದಳೆ? ತನ್ನ ತಂದೆಯನ್ನು ಕಾಪಾಡಿದಳೇ? ಇವೆಲ್ಲವನ್ನೂ ನೋಡಿಯೇ ಅನುಭವಿಸಬೇಕು. ನೀರಿನಲ್ಲಿ ಮೊಸಳೆಯೊಡನೆ ಸೆಣೆಸಾಟ ಸುಲಭವಲ್ಲ. ಅದೂ ಸಹ ತೆವಳುವ ಸ್ಥಿತಿಯಲ್ಲಿ….

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

One thought on ““crawl 2019”

Leave a Reply