“Shutter Island” (ಇಂಗ್ಲೀಷ್)

ಹೆಸರೇ ಹೇಳುವಂತೆ ಇಡೀ ಸಿನೆಮಾ ನಡೆಯುವುದು ಒಂದು ದ್ವೀಪದಲ್ಲಿ. ಮಾನಸಿಕ ರೋಗಿಗಳ ಕೇಂದ್ರ ಅದು. ಅಲ್ಲಿಂದ ಒಬ್ಬಳು ರೋಗಿ ತಪ್ಪಿಸಿಕೊಂಡು ಬಿಡುತ್ತಾಳೆ. ಕಳೆದು ಹೋಗಿರುವ ಅವಳನ್ನು ಕಂಡುಹಿಡಿಯಲು ‌ನಮ್ಮ ಪೊಲೀಸ್ ನಾಯಕ (ಲಿಯೋನಾರ್ಡೋ ಡಿಕ್ಯಾಪ್ರಿಯೋ) ಬರುತ್ತಾನೆ.

ಆ ದ್ವೀಪಕ್ಕೆ ಬರಲು ಮತ್ತು ಹೋಗಲು ಒಂದೇ ದಾರಿ ಇರುವುದು. ಆ ದಾರಿಯ ಮುಖಾಂತರವೇ ನಾಯಕ ಟೆಡ್ಡಿ ತನ್ನ ಸಂಗಡಿಗನಾದ ಚಕ್ ನೊಂದಿಗೆ ದ್ವೀಪ ಪ್ರವೇಶಿಸುತ್ತಾನೆ.‌ ಪ್ರಾಥಮಿಕ ಹಂತದ ತನಿಖೆ ಮತ್ತು ಪೂರ್ವಾಪರ ವಿಚಾರಣೆ ನಂತರ ನಾಯಕ ಬಹಳ ದಣಿದು ಬಿಡುತ್ತಾನೆ. ಯಾಕೋ ತಲೆ ನೋವು ಶುರುವಾಗುತ್ತದೆ ಆತನಿಗೆ. ಡಾಕ್ಟರ್ ಬಳಿ ಮಾತ್ರೆ ಪಡೆದು ಮಲಗುತ್ತಾನೆ.

ಆದರೆ ಆ ಮಾತ್ರೆ ತೆಗೆದುಕೊಂಡಾಗಿನಿಂದಲೂ ಅವನಿಗೆ ಭ್ರಮೆಗಳು ಶುರುವಾಗುತ್ತವೆ. ಸತ್ತಿರುವ ಆತನ ಹೆಂಡತಿ ಕಾಣತೊಡಗುತ್ತಾಳೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಆತ ಭಾಗವಹಿಸಿದ್ದ ಯುದ್ಧದ ದೃಶ್ಯಗಳು ಪ್ರತೀರಾತ್ರಿ ಕನಸಿನಲ್ಲಿ ಬರತೊಡಗುತ್ತವೆ. ಆ ಕನಸುಗಳಲ್ಲಿ ಒಬ್ಬ ಪುಟ್ಟ ಬಾಲಕಿ ಜೀವಂತವಾಗಿ ಎದ್ದು ನಿಂತು “ನಾವು ಸಾಯುವುದನ್ನು ನೀನು ತಡೆಯಬಹುದಿತ್ತು” ಎನ್ನುತ್ತಿರುತ್ತಾಳೆ.

ಆ ಭ್ರಮೆಗಳು ಆತನ ತನಿಖೆಯ ದಿಕ್ಕನ್ನೇ ಬದಲಿಸಿ ಬಿಡುತ್ತವೆ. ಈಗ ಆತ ಕಾಣೆಯಾಗಿರುವ ಹೆಂಗಸನ್ನು ಹುಡುಕುವುದು ಬಿಟ್ಟು ಅದೇ ದ್ವೀಪದಲ್ಲಿ ಖೈದಿಯಾಗಿರುವ ತನ್ನ ಹೆಂಡತಿಯ ಕೊಲೆಗಾರನನ್ನು ಹುಡುಕಲು ಶುರು ಮಾಡುತ್ತಾನೆ. ಈ ನಡುವೆ ‘ಆತನಿಗೆ ಯಾರೂ ಸಹಾಯಕರು ಇರಲಿಲ್ಲ, ಆತ ಒಬ್ಬಂಟಿಯಾಗಿ ಈ ದ್ವೀಪಕ್ಕೆ ಬಂದಿದ್ದ, ಸಹಾಯಕ ಇದ್ದಾನೆ ಎಂಬುದು ಆತನ ಭ್ರಮೆ’ ಅಂತ ನಮಗೆ ಗೊತ್ತಾಗುತ್ತದೆ.

ಆಗ ನಮಗೆ ಈತನ ತನಿಖೆ ಹಳ್ಳ ಹಿಡಿಸಲು ಯಾರೋ ಪ್ಲಾನ್ ಮಾಡುತ್ತಿದ್ದಾರೆ ಎಂದೆನಿಸುತ್ತದೆ. ಅವರೆಲ್ಲರೂ ಸೇರಿ ನಾಯಕನಿಂದ ಏನೋ ಮುಚ್ಚಿಡುತ್ತಿದ್ದಾರೆ ಅಂತಲೂ ಅನಿಸುತ್ತದೆ. ಆ ರಹಸ್ಯ ವಿಷಯ ಆತನಿಗೆ ಗೊತ್ತಾಗದೇ ಇರಲಿ ಅಂತ ಆಗಾಗ ತಲೆನೋವಿನ ನೆಪ ಹೇಳಿ, ಯಾವುದೋ ಮಾತ್ರೆ ಕೊಡುತ್ತಾ, ನಿಧಾನವಾಗಿ ಆತನನ್ನೂ ಹುಚ್ಚನನ್ನಾಗಿಸುತ್ತಿರುತ್ತಾರೆ. ಈ ವಿಷಯ ನಾಯಕನಿಗೆ ಹೇಗೋ ತಿಳಿಯುತ್ತದೆ. ಆದರೆ ಒಮ್ಮೆ ಹುಚ್ಚ ಎಂಬ ಪಟ್ಟ ಬಂದುಬಿಟ್ಟರೆ ಮುಗಿಯಿತು…. ಆತ ಏನು ಹೇಳಿದರೂ ಯಾರೂ ನಂಬುವುದಿಲ್ಲ.

ಆತ ಹೇಳಬೇಕಾದ ವಿಷಯ ಏನೆಂದರೆ ಆ ದ್ವೀಪದ ಲೈಟ್ ಹೌಸಿನಲ್ಲಿ ಕೆಲವು ಕಾನೂನುಬಾಹಿರ ಬ್ರೈನ್ ಸರ್ಜರಿ ನಡೆಯುತ್ತಿವೆ ಎಂಬುದು. ಆ ಸರ್ಜರಿಗಳನ್ನು ಸಾಮಾನ್ಯ ಮನುಷ್ಯ ಮೇಲೆ ಮಾಡಲಾಗದೇ ಅಲ್ಲಿನ ಪೇಷೆಂಟುಗಳ ಮೇಲೆ ಪ್ರಯೋಗಿಸಿ, ಅವರು ಸರ್ಜರಿ ತಡೆಯದೇ ಸತ್ತಾಗ ಕಾಣೆಯಾಗಿದ್ದಾರೆ ಎಂದು ಕಂಪ್ಲೇಂಟ್ ಕೊಡುತ್ತಿರುತ್ತಾರೆ ಅಂತ ನಾಯಕನ ದೂರು.

ಅದಕ್ಕಾಗಿ ಆತ ಲೈಟ್ ಹೌಸಿಗೆ ಹೋಗಬೇಕು.

ಅಲ್ಲಿ್ಗೆಗೆ ಹೋಗಲೂ ಒಂದು ಕಾರಣವಿದೆ. ತನಿಖೆಯ ಮಧ್ಯದಲ್ಲಿ ತನ್ನ ಸಂಗಡಿಗನಾಗಿದ್ದ ಚಕ್ ನನ್ನು ಅಸ್ತಿತ್ವವೇ ಇಲ್ಲದಂತೆ ಮಾಡಲಾಗಿದೆ. ಈಗ ಆತನನ್ನು ಅಪಹರಿಸಿ ಲೈಟ್ ಹೌಸಿನಲ್ಲಿ ಬ್ರೈನ್ ಸರ್ಜರಿ ಮಾಡುತ್ತಿರಬಹುದು ಅಂತ ನಾಯಕನ ಅನುಮಾನ. ಹಾಗಾಗಿ ತನ್ನ ಸಂಗಡಿಗನನ್ನು ಉಳಿಸಿಕೊಳ್ಳಲು ಆತುರಾತುರವಾಗಿ ಹೋಗುತ್ತಾನೆ ನಾಯಕ.

ಆಗ ಅಲ್ಲಿ ಏನು ನಡೆಯುತ್ತದೆಯೋ ಅದೇ ಇಡೀ ಸಿನೆಮಾದ ಜೀವಾಳ……!!!

ಬಹುಶಃ ಯಾರೆಂದರೆ ಯಾರೂ ಸಹ ಈ ಸಿನೆಮಾದ ಕಥೆ ಹೀಗ್ಹೀಗೆ ಅಂತ ಊಹಿಸಲು ಸಾಧ್ಯವಿಲ್ಲ. ಆ ಅನುಭವ ಸಿಗಬೇಕೆಂದರೆ ಪ್ರೇಕ್ಷಕರು ಸಿನೆಮಾ ನೋಡಿಯೇ ಕಂಡುಕೊಳ್ಳಬೇಕು. ಈ ಸಿನೆಮಾ ಟಿವಿಯಲ್ಲಿ ಬಂದಿದ್ದಾಗ ರೆಪ್ಪೆ ಮಿಟುಕಿಸದೇ ನೋಡಿದ್ದೇನೆ ನಾನು. ಅಂತಹಾ ಬಿಗಿ ಚಿತ್ರಕಥೆ ಇದರದ್ದು. ಜೊತೆಯಲ್ಲಿ ಎರಡನೇ ಮಹಾಯುದ್ಧ, ಹಿಟ್ಲರನ ನಾಜೀ ಪಡೆ, ಜ್ಯೂಗಳ ಮಾರಣಹೋಮ ಇವೆಲ್ಲದರ ಲಿಂಕ್ ಇರುವುದರಿಂದ ಯೋಚಿಸಲು ಸಹ ಪುರಸೊತ್ತಿಲ್ಲದೇ ಈ ಅದ್ಭುತಗಳನ್ನು ಕಣ್ತುಂಬಿಕೊಂಡಿದ್ದಾಯ್ತು.

ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

One thought on ““Shutter Island” (ಇಂಗ್ಲೀಷ್)

Leave a Reply