ಕಾಲ ಉಲ್ಟಾ ಓಡುವುದು ಸಾಧ್ಯವೇ….?
ಒಂದು ವೇಳೆ ಸಾಧ್ಯವಾದರೂ ಮನುಷ್ಯನ ಜೀವನ ಹಿಂದೋಡುವುದು ಸಾಧ್ಯವೇ…? ನೆನಪುಗಳಲ್ಲಿ ಗತಕಾಲವನ್ನು ನೆನೆಯುತ್ತಾ ಆಗಾಗ ಕಾಲವನ್ನು ಹಿಂದೆ ಓಡಿಸಿಕೊಳ್ಳುತ್ತಿರುತ್ತೇವೆ ಅನ್ನಬೇಡಿ. ನಾನು ಹೇಳಿದ್ದು ಆ ರೀತಿಯಲ್ಲ.
ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವ್ವನ ಮತ್ತು ಮುಪ್ಪು ಕ್ರಮವಾಗಿ ಬರುತ್ತವೆ. ನಮ್ಮೆಲ್ಲರಿಗೂ ಅದೇ ರೀತಿ ಆಗುತ್ತದೆ. ನಮ್ಮ ಸುತ್ತಮುತ್ತ ಇರುವ ಎಲ್ಲರಿಗೂ ಅದೇ ರೀತಿ ಆಗುವುದು. ಮಗುವಾಗಿ ಹುಟ್ಟಿ, ಯುವಕ/ಯುವತಿಯರಾಗಿ, ಕಡೆಗೆ ವಯಸ್ಸಾಗಿ ಸಾಯುತ್ತೇವೆ. ಅಲ್ವಾ?
ಇಲ್ಲೊಬ್ಬನಿದ್ದಾನೆ…… ಬೆಂಜಮಿನ್ ಬಟನ್!!!
ಅವನು ಹುಟ್ಟಿದಾಗ ತೀರಾ ವಿಕಾರವಾಗಿರುತ್ತಾನೆ. ಅದೆಷ್ಟು ಎಂದರೆ ನೋಡಲೇ ಅಸಹ್ಯ ಪಡುವಷ್ಟು… ಆತ ತನ್ನ ಬಾಲ್ಯದಲ್ಲಿ ನೂರಾರು ವರ್ಷಗಳಾಗಿರುವ ಹಾಗೆ ಕಾಣತೊಡಗುತ್ತಾನೆ. ನೋಡಿದವರು ‘ನಿನಗೆ ಏಳು ವರ್ಷವಾ? ಹಾಗೆ ಕಾಣುವುದಿಲ್ಲ… ತೀರಾ ವಯಸ್ಸಾದ ಹಾಗೆ ಕಾಣುತ್ತಿದ್ದೀಯ’ ಅನ್ನುತ್ತಿರುತ್ತಾರೆ.
ಆಗ ನಮಗೆ ಅನ್ನಿಸುತ್ತದೆ… ಇವನಿಗೆ ಚಿಕ್ಕ ವಯಸ್ಸಿಗೇ ಮುದುಕನಾಗಿ ಸತ್ತು ಹೋಗುವ ಖಾಯಿಲೆ ಇರಬಹುದೇನೋ ಅಂತ.. ಆತನೂ ಬಹುಶಃ ಹಾಗೆಯೇ ತಿಳಿದಿರುತ್ತಾನೆಯೋ ಏನೋ… ನೋಡಲು ವಯಸ್ಸಾದವನಂತೆ ಕಂಡರೂ ಮನಸ್ಸು ಇನ್ನೂ ಮಗುವಿನದ್ದೇ ತಾನೇ? ಆ ಮಗುವಿನ ಮನಸ್ಸಿನಲ್ಲಿ ಅದೇನಿತ್ತೋ..?
ಪುಟ್ಟ (!?) ಬಾಲಕ ಬೆಂಜಮಿನ್ ಗೆ ಒಬ್ಬ “ಡೈಸಿ” ಹೆಸರಿನ ಗೆಳತಿ ಸಿಗುತ್ತಾಳೆ. ಡೈಸಿಗೆ ಆಗ ಏಳು ವರ್ಷ. ಬೆಂಜಮಿನ್ ಗೂ ಅದೇ ವಯಸ್ಸು. ಇಬ್ಬರ ಸ್ನೇಹ ಗಾಢವಾಗುತ್ತದೆ. ಏಕೆಂದರೆ ಚಿಕ್ಕಮಕ್ಕಳಲ್ಲಿ ಕಲ್ಮಶ ಇರುವುದಿಲ್ವಲ್ಲ.
ನಂತರ ಜೀವನದ ತಿರುವುಗಳಲ್ಲಿ ಇಬ್ಬರೂ ಬೇರೆಯಾಗುತ್ತಾ ಹೋಗುತ್ತಾರೆ. ಆಗಾಗ ಇವರಿಬ್ಬರ ಭೇಟಿ ನಡೆಯುತ್ತಿರುತ್ತದೆ. ಆಗ ಡೈಸಿ ಗಮನಿಸುವ ಭಯಾನಕ ವ್ಯತ್ಯಾಸವೆಂದರೆ ಮುದುಕನ ಹಾಗೆ ಕಾಣುತ್ತಿದ್ದ ಬೆಂಜಮಿನ್ ವರ್ಷಗಳು ಉರುಳಿದಂತೆ ಮತ್ತಷ್ಟು ಮುದುಕನಾಗುವ ಬದಲು ಯೌವ್ವನಿಗನಾಗುತ್ತಿದ್ದಾನೆ ಎನ್ನುವುದು.
ಇದು ನಿಜಕ್ಕೂ ಅದ್ಭುತ….!!!
ಈ ಸಿನೆಮಾ ಒಂದು ಕಿರುಗಥೆಯಿಂದ ಸ್ಫೂರ್ತಿಗೊಂಡದ್ದಂತೆ. ಆದರೆ ಒಬ್ಬ ಲೇಖಕ ಬರೆಯಲಾಗದ ದೃಶ್ಯವನ್ನು ಈ ಸಿನೆಮಾದ ನಿರ್ದೇಶಕರು ತೋರಿಸಿದ್ದಾರೆ.
ಹೇಗೆಂದರೆ…..
ಪ್ರತೀಬಾರಿ ಡೈಸಿ ಅವನನ್ನು ಭೇಟಿ ಮಾಡುವಾಗ ಬೆಂಜಮಿನ್ ಎಂಟ್ರಿಯಾದೊಡನೆಯೇ ಯಾರೂ ಏನೂ ಹೇಳದೇ ನಮಗೇ ಹೊಳೆಯುತ್ತದೆ… ಅರೆ!!! ಇವನು ಅವನಾ? ಆ ಮುದುಕನ ಹಾಗಿದ್ದವನು ಇಷ್ಟು ಯಂಗ್ ಕಾಣುತ್ತಿದ್ದಾನಾ? ಅಂತ…
ಹೌದು… ಈ ಜ್ಞಾನೋದಯ “ನಮಗೇ” ಮೂಡುವಂತೆ ನಿರ್ದೇಶಕರು ಚಿತ್ರಿಸಿದ್ದಾರೆ. ಒಬ್ಬ ಲೇಖಕನ ಕೈಲಿ ಸಾಧ್ಯವಾಗದ ಈ ಸ್ವಯಂ-ಜ್ಞಾನೋದಯವನ್ನು ನಿರ್ದೇಶಕರು ದೃಶ್ಯ ಮಾಧ್ಯಮದಲ್ಲಿ ಸಶಕ್ತವಾಗಿ ಬಳಸಿಕೊಂಡಿದ್ದಾರೆ.
ನಂತರವಂತೂ ನಮಗೆ ಮೇಲಿಂದ ಮೇಲೆ ಆಶ್ಚರ್ಯವಾಗುವ ಹಾಗೆ ಆತ ತರುಣನಾಗಿ, ನವತರುಣನಾಗಿ, ಬಾಲಕನಾಗುವತ್ತ ಸಾಗುತ್ತಿರುತ್ತಾನೆ. ಅದೇ ಆತನ ಗೆಳತಿ ಡೈಸಿ ಮುಪ್ಪಿನತ್ತ ಸಾಗುತ್ತಿರುತ್ತಾಳೆ. ಇಬ್ಬರಿಗೂ ಒಂದೇ ವಯಸ್ಸು….. ಆದರೆ ಒಬ್ಬಳು ಮುದುಕಿ, ಮತ್ತೊಬ್ಬ ಬಾಲಕ…!!!!
ಕಾಲ ಎನ್ನುವುದು ಬೆಂಜಮಿನ್ನನಿಗೆ ಮಾತ್ರ ಹಿಂದೋಡುತ್ತಿರುತ್ತದೆ… !!!!
ಕಡೆಗೆ 84(!?) ವರ್ಷದ ಬೆಂಜಮಿನ್ ಅವನಷ್ಟೇ ವಯಸ್ಸಿನ (ಮುದುಕಳಾದ) ಡೈಸಿಯ ಕೈಗಳಲ್ಲಿ ಪುಟ್ಟ ಶಿಶುವಾಗಿ ಸಾಯುತ್ತಾನೆ….
ಮುದುಕನಾಗಿ ಹುಟ್ಟಿ ತನ್ನ ಜೀವನವನ್ನು ತಿರುಗುಮುರುಗಾಗಿ ಕಳೆದು, ಕಡೆಗೆ ಶಿಶುವಾಗಿ ಸಾಯುವ ಒಂದು ಕಾಲ್ಪನಿಕ ಕಥೆಯನ್ನು ನಿರ್ದೇಶಕರು ಅದ್ಭುತವಾದ ಸಿನೆಮಾವನ್ನಾಗಿಸಿದ್ದಾರೆ.
ಅದಕ್ಕೆ ಇದು “The Curious Case” !!!!