“The Mummy 3” (ಇಂಗ್ಲೀಷ್)

“Tomb of the dragon emperor”

ಇದು ಚೀನಾದಲ್ಲಿ ನಡೆಯುವ ಕಥೆಯಾಗಿದೆ.

ಇದೂ ಸಹ ರಾಜ್ಯ ದಾಹದಿಂದ ಯುದ್ಧ ಮಾಡುವ ರಾಜನ ಕಥೆಯೇ….. ಸಿಕ್ಕಷ್ಟರಲ್ಲಿ ತೃಪ್ತರಾಗದ ರಾಜನಿರುವ ರಾಜ್ಯದಲ್ಲಿ ಸೈನಿಕರ ಗೋಳನ್ನು ಕೇಳುವವರಿಲ್ಲ. ಭಗವಂತ ಆ ರಾಜನಿಗೆ ಎಲ್ಲವನ್ನೂ ಕೊಟ್ಟಿದ್ದರೂ, ಇವನಿಗೆ ಇನ್ನಷ್ಟು ಮತ್ತಷ್ಟು ಬೇಕೆನ್ನುವ ಆಸೆ. ಈ ಆಸೆಗೆ ಬಲಿಯಾಗುವುದು ಮಾತ್ರ ಬಡಪಾಯಿ ಸೈನಿಕನೇ.

ಈ ಚೀನಾದ ಮಹಾರಾಜ ತನ್ನ ವೈರಿಗಳನ್ನೆಲ್ಲ ಮಟ್ಟ ಹಾಕಿ ಅವರ ಶವದ ಮೇಲೆಯೇ ಮಹಾಗೋಡೆ ಕಟ್ಟುತ್ತಾನೆ. ಅಷ್ಟೇ ಅಲ್ಲದೇ ಐದು ತತ್ತ್ವಗಳಾದ ಬೆಂಕಿ, ನೀರು, ಭೂಮಿ, ಲೋಹ ಮತ್ತು ಮರದ ತತ್ತ್ವಗಳನ್ನು ತನ್ನ ವಶ ಮಾಡಿಕೊಳ್ಳುತ್ತಾನೆ. ಇವೆಲ್ಲದರಿಂದ ಅವನೊಬ್ಬ ಶಕ್ತಿಶಾಲಿ ರಾಜನಾಗಿದ್ದ‌. ಅವನನ್ನು ಸೋಲಿಸುವವರೇ ಇರಲಿಲ್ಲ.

ಆದರೆ ಮುದಿತನವೊಂದೇ ಆತನ ಶತೃವಾಗಿತ್ತು.

ಹಾಗಾಗಿ ಸಾವನ್ನು ಸಹ ಸೋಲಿಸಲು ಆತ ಒಬ್ಬ ಮಾಟಗಾತಿಯನ್ನು ಕಂಡು ಹಿಡಿಯುತ್ತಾನೆ. ಆಕೆಯ ಮಂತ್ರ-ತಂತ್ರದ ನೆರವಿನಿಂದ ತಾನು ಅಮರನಾಗಬೇಕು ಎಂದುಕೊಳ್ಳುತ್ತಾನೆ. ಆದರೆ ನಿಷ್ಠೆಯಿರದ ರಾಜ ಆ ಮಾಟಗಾತಿಗೇ ಮೋಸ ಮಾಡಲು ಹೋದಾಗ ಅವಳಿಗೆ ಅದು ಅರ್ಥವಾಗಿ ರಾಜನನ್ನು ಮತ್ತು ಆತನ ಇಡೀ ಸೈನ್ಯವನ್ನು ಶಪಿಸಿ ಅಲ್ಲಿಂದ ಪಾರಾಗುತ್ತಾಳೆ.

ರಾಜ ಇಡೀ ಸೈನ್ಯದೊಡನೆ ಬೊಂಬೆಯಾಗಿ ಬದಲಾಗುತ್ತಾನೆ!!

ಆ ರಾಜನನ್ನು ಮತ್ತೊಮ್ಮೆ ಎಚ್ಚರಗೊಳಿಸಿದರೆ ಮನುಕುಲದ ಸರ್ವನಾಶ ಖಂಡಿತಾ ಎಂದು ಆ ಮಾಟಗಾತಿ ಹೇಳಿರುತ್ತಾಳೆ. ಆದರೆ ಈ ಘಟನೆ ನಡೆದ ಸಹಸ್ರಾರು ವರ್ಷಗಳ ನಂತರ ನಾಯಕನ ಮಗ ಅಲೆಕ್ಸ್ ಅದೇ ರಾಜನ ಶೋಧನೆಯಲ್ಲಿ ತೊಡಗಿರುತ್ತಾನೆ.

ಜನ ಹೇಗಿರುತ್ತಾರೆ ನೋಡಿ….

ಅವರಿಗೆ ಇಂದಿನ ಪರಿಸ್ಥಿತಿಯಾಗಲೀ, ಮುಂದೆ ತಮ್ಮ ಜೀವನ ಹೇಗಿರುತ್ತದೆ ಎಂಬ ಕಲ್ಪನೆಯಾಗಲಿ ಇಲ್ಲ. ಬದಲಿಗೆ ಯಾವುದೋ ಗ್ರಂಥದಲ್ಲಿ ಬರೆದಿರುವ ಯಾವುದೋ ಪುರಾಣದ ಮೇಲೆ ಕುತೂಹಲ. ಈಗ ಶಾಪಿತನಾಗಿ ಬೊಂಬೆಯಾಗಿ ಹೋಗಿರುವ ರಾಜನನ್ನು ಎಚ್ಚರಿಸಲು ಕೆಲವು ಜನ ಪರದಾಡುತ್ತಿದ್ದಾರೆ. ಅದಕ್ಕಾಗಿ ಅಮೃತ ಬೇಕಿದೆ. ಅದು ನಾಯಕ-ನಾಯಕಿಯ ಬಳಿ ಇರುವ ‘ಶಾಂಗ್ರೀಲಾದ ಕಣ್ಣು’ ಎಂಬ ವಸ್ತುವಿನಲ್ಲಿದೆ.

ಆ ಜನ ಯಾಕಾಗಿ ಆ ಶಾಪಿತ ರಾಜನನ್ನು ಎಬ್ಬಿಸಬೇಕೆಂದಿದ್ದಾರೆ ಅಂತ ಸ್ಪಷ್ಟವಾಗಿ ಅರ್ಥವಾಗುತ್ತಿಲ್ಲ. ಏಕೆಂದರೆ ಮೊದಲೇ ನಿಯತ್ತಿಲ್ಲದ ರಾಜ ಅವನು. ತಾನು ಎಚ್ಚರಗೊಳ್ಳಲು ಕಾರಣ ಇವರೇ ಅಂತ ತಿಳಿದು ಸನ್ಮಾನ ಮಾಡುವವನಲ್ಲ. ಆದರೂ ಈ‌ ಜನರಿಗೆ ಅವನನ್ನು ಎಚ್ಚರಿಸುವ ಆಸೆ. ಏಕೆಂದರೆ ಆತನ ನೆರವಿನಿಂದ ಭೂಮಂಡಲವನ್ನು ಆಳಬಹುದು ಎಂಬ ಹಪಾಹಪಿ. ಅದಕ್ಕಾಗಿ…..

1) ಶಾಪಿತ ರಾಜನ ಸಮಾಧಿ ಹುಡುಕಲು ಅಲೆಕ್ಸ್ ಅನ್ನು ಬಳಸಿಕೊಳ್ಳುತ್ತಾರೆ.

2) ಆ ರಾಜನನ್ನು ಎಚ್ಚರಿಸುವ ದ್ರವಕ್ಕಾಗಿ ನಾಯಕ-ನಾಯಕಿಯರನ್ನು ಬಳಸಿಕೊಳ್ಳುತ್ತಾರೆ.

ಆದರೆ ಒಂದನ್ನು ಮರೆಯುತ್ತಾರೆ.

ಏನೆಂದರೆ “ಆ ಶಾಪಿತ ರಾಜ ಎದ್ದರೆ ಮನುಕುಲ ಸರ್ವನಾಶವಾಗುತ್ತದೆ” ಮತ್ತು ಆ ಮನುಕುಲದಲ್ಲಿ ತಾವೂ ಇದ್ದೇವೆ, ಹಾಗಾಗಿ ತಾವೂ ನಾಶವಾಗುತ್ತೇವೆ ಎಂಬುದು. ಮನುಷ್ಯ ಇರುವುದೇ ಹಾಗೆ. ತನ್ನ ಬುಡಕ್ಕೆ ಬರುವವರೆಗೂ ಆ ವಿಷಯ ಅಪಾಯಕಾರಿ ಅನ್ನಿಸುವುದೇ ಇಲ್ಲ.

ಅಂದುಕೊಂಡ ಹಾಗೆಯೇ ಆ ಕೆಲವು ದುಷ್ಟ ಜನರು ಆ ಶಾಪಿತ ರಾಜನನ್ನು‌ ಎಚ್ಚರಿಸಿಯೇ ಬಿಡುತ್ತಾರೆ. ಆ ರಾಜನೋ ಸೂಪರ್ ಫಾಸ್ಟ್ ವೇಗದಲ್ಲಿ ತನ್ನಂತೆಯೇ ಸಮಾಧಿಯಾಗಿದ್ದ ತನ್ನ ಸೈನ್ಯವನ್ನು ಎಚ್ಚರಿಸಲು ಹೊರಡುತ್ತಾನೆ. ಅವರೆಲ್ಲರೂ ಎಚ್ಚರಗೊಂಡರೆ ಪ್ರಪಂಚದ ಸರ್ವನಾಶ ಖಂಡಿತಾ. ಈಗ ನಾಯಕ ಅದನ್ನು ತಡೆಯುತ್ತಾನೆಯೋ ಇಲ್ಲವೋ ಎಂಬುದೇ ಸಿನೆಮಾದ ಕಥೆ.

ಹಿಂದಿನ ಮಮ್ಮಿ ಸಿನೆಮಾಗೆ ಹೋಲಿಸಿದರೆ ಇದರಲ್ಲಿ ಬಹಳ ನಿಧಾನದ ನಿರೂಪಣೆ ಮೊದಲ ನಕಾರಾತ್ಮಕ ಅಂಶ. ಎರಡನೇ ಅಂಶವೇ ಜೊನಾಥನ್. ಇಲ್ಲಿ ಆತನ ತಮಾಷೆಯೇ ಇಲ್ಲ. ಇರುವ ಹಾಸ್ಯವನ್ನೂ ಬೇಕಂತಲೇ ಬಲವಂತವಾಗಿ ತುರುಕಿದಂತಿದೆ. ಹಾಗಾಗಿ ನಗು ಬರುವುದೇ ಇಲ್ಲ. ಇಡೀ ಸಿನೆಮಾ ಬಹಳ ಬೋರಿಂಗ್ ಎನಿಸುತ್ತದೆ. ಯಾಕಾದರೂ ನೋಡಲು ಕುಳಿತೆನೋ ಎಂದು ಪಶ್ಚಾತ್ತಾಪವಾಗುತ್ತದೆ.

ಯಾವುದೇ ಸಿನೆಮಾ ತನ್ನ ಚಿತ್ರಕಥೆಯಿಂದಲೇ ಗೆಲ್ಲಬೇಕು ಹೊರತೂ ಹಳೆಯ ಸಿನೆಮಾದ ಯಶಸ್ಸಿನಿಂದ ಹೊಸ ಸಿನೆಮಾ ಗೆಲ್ಲಲಾರದು. ಕಡೆಯಲ್ಲಿ ಮಕ್ಕಳಾಟದ ಕ್ಲೈಮಾಕ್ಸ್‌ಗೆ ನಗು ಬರುತ್ತದೆ. ಮತ್ತೊಂದು ದೌರ್ಬಲ್ಯವೆಂದರೆ ಯಾವುದ್ಯಾವುದೋ ಜಾಗದಲ್ಲಿ ಯಾವುದ್ಯಾವುದೋ ವಸ್ತುಗಳನ್ನು ಅವಿತಿಟ್ಟಿರುವುದು.‌ ಉದಾಹರಣೆಗೆ ಶಾಂಗ್ರೀಲಾದ ಕಣ್ಣು, ಅದರೊಳಗೆ ಅಮೃತ, ಮತ್ತೆಲ್ಲೋ ಹಿಮಾಲಯದ ಕೊಳ, ಚಕ್ರವರ್ತಿಯನ್ನು ಸಾಯಿಸಲೊಂದು ಖಡ್ಗ…. ಈ ರೀತಿಯ ನಿರೂಪಣೆ ಅಷ್ಟು ಇಷ್ಟವಾಗಲಿಲ್ಲ.

ಅಂತಹಾ ಮಮ್ಮಿ ಸಿನೆಮಾ ಮಾಡಿದವರು ಇಂತಹಾ ಕಥೆಯನ್ನು ಹೇಗೆ ಒಪ್ಪಿಕೊಂಡರು ಅಂತ ಈಗಲೂ ಅರ್ಥವಾಗುತ್ತಿಲ್ಲ. ಅಂತಹಾ ರೋಚಕತೆ ಏನೂ ಇಲ್ಲದ, ಸಾಧಾರಣವೂ ಸಹ ಅಲ್ಲದ ಸಿನೆಮಾ ಇದು. ನೋಡಿ ಸಮಯ ದಂಡವಾಯ್ತಷ್ಟೇ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply